‘ಕರ್ಣಾಮೃತ’ ಲೇಖಕ ಗೌರೀಶ ಕಾಯ್ಕಿಣಿ ಅವರ ರೇಡಿಯೋ ರೂಪಕಗಳ ಸಂಕಲನ. ಕೃತಿಯ ಕುರಿತು ಬರೆಯುತ್ತಾ ಸನ್ಮಿತ್ರ ಪ್ರಿಯ ಶ್ರೀ ವಿಷ್ಣುನಾಯ್ಕರ ಅನುಗ್ರಹದಿಂದಾಗಿ ನನ್ನ ಈ ಕೆಲವು ರೇಡಿಯೋ ರೂಪಕಗಳು ಇದೀಗ ಬೆಳಕು ಕಾಣುತ್ತಿವೆ. ಇವನ್ನು ಮೂಲದಲ್ಲಿ ಬರೆದು ಧಾರವಾಡ ಆಕಾಶವಾಣಿಯಿಂದ ಆಯಾಕಾಲಕ್ಕೆ ಬಿತ್ತರಿಸಿ ಕೆಲವು ವರ್ಷಗಳು ಸಂದವು. ಆದರೆ ಈ ಕಿವಿಯೆ ಬದುಕು ಹೀಗೆ ಕಣ್ಣಿನ ಬದುಕಾಗಿ ಹೊರಬರಲು ಶ್ರೀರಾಘವೇಂದ್ರ ಪ್ರಕಾಶನದ ಸಹಯೋಗವೇ ಕೂಡಿ ಬರಬೇಕಾಯಿತು. ಅದಕ್ಕಾಗಿ ನಾನು ನನ್ನ ಈ ಪ್ರಕಾಶಕ ಮಿತ್ರರಿಗೆ ಅನನ್ಯ ಋಣಿ ಎಂದಿದ್ದಾರೆ ಗೌರೀಶ ಕಾಯ್ಕಿಣಿ. ಜೊತೆಗೆ ಬಿಡಿ ಬಿಡಿಯಾಗಿ ಈ ರೂಪಕಗಳ ಬಗೆಗೆ ಬೇರೆ ಏನೂ ಹೇಳಬೇಕಾಗಿಲ್ಲ, ಇಲ್ಲಿಯ ದೇವಿ ಕಂಡ ಬೆಳಕು 1930ರ ನಮ್ಮ ಜಿಲ್ಲೆಯ ಸಿದ್ಧಾಪುರ ಸೀಮೆಯ ಕರನಿರಾಕರಣೆಯ ವೀರ ಯುಗದ ಒಂದು ಹೃದಯಸ್ಪರ್ಶಿಯಾದ ಘಟನೆಯನ್ನು ನಿರೂಪಿಸುತ್ತದೆ. ಕರ್ಣಾಮೃತ ಏಕಾಂಕ ನಾಟಕ ಮೊದಲು ರಚಿಸಿದ್ದು, ಆ ಮೇಲೆ ಆಕಾಶವಾಣಿಯ ಬಗ್ಗೆ ವಿಶೇಷವಾಗಿ ರೂಪಿಸಿಕೊಳ್ಳಬೇಕಾಯಿತು. ಶಿವಯೋಗ ಸಿದ್ಧಿಯ ಕಥಾಬೀಜ ನನ್ನದಲ್ಲ, ಕೌಂಟಲಿಯೋ ಟಾಲಸ್ಟಾಯಯ ಒಂದು ಕಥೆಯಿಂದ ಗೋಕರ್ಣ ಕ್ಷೇತ್ರಯಾತ್ರೆಯ ಈ ಮಹಾಪರ್ವಕ್ಕೆ ಅಳವಡಿಸಿಕೊಂಡಾಗಿದೆ. ಎಲ್ಲಾ ರೂಪಕಗಳನ್ನು ನನ್ನಿಂದ ಬರೆಯಿಸಿಕೊಂಡು ಬಿತ್ತರಿಸಿದ್ದಲ್ಲದೆ ಬಹುಕಾಲದ ನಂತರ ಪ್ರಕಟಣೆಗಾಗಿ ನನಗೆ ಅವುಗಳ ಕರಡು ಒದಗಿಸಿಕೊಟ್ಟ ಧಾರವಾಡ ಆಕಾಶವಾಣಿಯ ವರಿಷ್ಠರ ಈ ಮಹದುಪಕಾರವನ್ನು ನಾನು ಮನ್ನಿಸಿದಷ್ಟು ಕಡಿಮೆಯೇ ಎಂದಿದ್ದಾರೆ.
©2024 Book Brahma Private Limited.