ಲೇಖಕಿ ಸುಮಾ ವೀಣಾ ಅವರ ನಾಟಕ-ಶೂರ್ಪನಖಿ ಅಲ್ಲ ಚಂದ್ರ ನಖಿ. ಕಣಗಾಲ್ ನೃತ್ಯಾಲಯ ಟ್ರಸ್ಟ್ ಕಲಾವಿದ ರಾಮು ಕಣಗಾಲ್ ಅವರು ಕೃತಿಗೆ ಮುನ್ನುಡಿ ಬರೆದು ‘ ಶೂರ್ಪನಖಿ ಅಲ್ಲ ಚಂದ್ರನಖಿ” ನಾಟಕ ಪೌರಾಣಿಕ ವಸ್ತುವನ್ನು ಹೊಂದಿದ್ದರೂ ಸಾಮಾಜಿಕರ ಪೂರ್ವಗ್ರಹ ಪೀಡಿತನವನ್ನು ಹೋಗಲಾಡಿಸುವ ಚಿಕ್ಕ ಭರವಸೆಯೊಂದಿಗೆ ಮೈತಳೆದಿದೆ. ಚರ್ವಿತ ಚರ್ವಣ ಎನ್ನುವುದಕ್ಕಿಂತ ಹೊಸಬಗೆಯ ಆಲೋಚನೆ ಈ ನಾಟಕದಲ್ಲಿದೆ. ಶೂರ್ಪನಖಿ ಎಂದು ಉಡಾಫೆಯ ಪದ ಬಳಸುವ ಮೊದಲು ತಾತ್ವಿಕ ಚಿಂತನೆ ಮಾಡಿ ಎನ್ನುವಂತಿದೆ ಈ ನಾಟಕ. ಚಂದ್ರನಖಿಯಲ್ಲಾಗುವ ಪಶ್ಚಾತ್ತಾಪದ ಭಾವನೆಗಳು , ಸೀತೆಯಲ್ಲಿ ಮಡುಗಟ್ಟಿರುವ ನೋವು, ಆಕ್ರೋಶಗಳು ಸರಳ, ಸುಂದರವಾಗಿ ಚಿತ್ರಿತವಾಗಿವೆ. ನಾಟಕಕಾರರಾದ ಸುಮಾ ವೀಣಾರವರು ‘ದಯಾ’ ಎಂಬ ಹೊಸ ಪಾತ್ರವನ್ನು ಇಲ್ಲಿ ಸೃಷ್ಟಿಸಿದ್ದಾರೆ. “ದಯವಿರಬೇಕು ಸಕಲರಲ್ಲಿ” ಎಂಬಂತೆ ‘ದಯಾ’ ಎಂಬುದು ಇಲ್ಲಿ ಏಕಕಾಲಕ್ಕೆ ಹೆಸರೂ ಹೌದು ಜೊತೆಗೆ ಉನ್ನತ ಮೌಲ್ಯದ ಪ್ರತೀಕವೂ ಆಗಿದೆ.
ಲವ -ಕುಶರ ಪ್ರಸ್ತಾಪ ಕ್ವಚಿತ್ತಾಗಿ ಬಂದರೂ ಲವಲವಿಕೆಯ ಪಾತ್ರಗಳು ಅನ್ನಿಸುತ್ತದೆ. ಹೈಸ್ಕೂಲ್ ಹಂತದ ಮಕ್ಕಳಿಗೆ ಇದು ಪಠ್ಯವಾಗಬಹುದಾ? ಎಂಬ ಸಣ್ಣ ಯೋಚನೆ ನನಗೆ ನಾಟಕ ಓದುವಾಗ ಅನ್ನಿಸಿತು. ಸರಳ ಪರಿಕರಗಳು , ಸರಳ ವಸ್ತ್ರಾಲಂಕಾರ ಬಯಸುವ ಈ ನಾಟಕ ರಂಗದ ಮೇಲೆ ಪ್ರಯೋಗ ಕಂಡರೆ ಯಶಸ್ಸು ಖಂಡಿತ ಎಂದು ನನ್ನಸಿಕೆ. ಅನೇಕ ಹಣ್ಣು ಹೂವು, ಮರಗಿಡಬಳ್ಳಿ , ಮೂಲಿಕೆಗಳ ಹೆಸರು ಬಂದಿರುವುದು ಹೊಸತನ ಅನ್ನಿಸಿತು . ಮುಖ್ಯವಾಗಿ ಈ ನಾಟಕವನ್ನು ಓದುವಾಗ ನನಗೆ ಅನ್ನಿಸಿದ್ದು ಒಣ ಹೂಗಳ ಅಲಂಕಾರದ ಕುರಿತು. ಸುಮಾವೀಣಾರವರು ಈ ಅಲಂಕಾರವನ್ನು ಚಂದ್ರನಖಿಯ ಕುಟೀರದ ಒಳಾಲಂಕಾರದ ಕುರಿತು ಪ್ರಸ್ತಾಪ ಮಾಡುವಾಗ ಮಾಡಿರುವುದು ವಿಭಿನ್ನ ಅನ್ನಿಸಿತು’ ಎಂದು ಪ್ರಶಂಸಿಸಿದ್ದಾರೆ.
ಲೇಖಕಿ ಸುಮಾ ವೀಣಾ ತಮ್ಮ ಕೃತಿಯ ಕುರಿತು ‘ ಕೆಟ್ಟ ಹೆಂಗಸರನ್ನು ಬಯ್ಯುವಾಗ “ಸೂರ್ಪನಖಿ” ಅನ್ನುತ್ತಾರೆ. “ಮಂಥರೆ” ಅನ್ನುತ್ತಾರೆ. ಯಾಕೆ ? ಅವರ ಕೆಟ್ಟ ಗುಣಗಳು ಎಂದು ಈಗಾಗಲೆ ಠಂಕಿಸಿರುವ ಹೊಟ್ಟೆ ಕಿಚ್ಚು, ದುರಾಸೆ, ಚಾಡಿ ಹೇಳುವುದನ್ನು ಯಾರೂ ಮಾಡುವುದೇ ಇಲ್ಲವೇ? ಸಂದರವಾಗಿ ಕಾಣುವ ಎಲ್ಲರೂ ಸಂಪನ್ನರೆ ಹಾಗಿದ್ದರೆ? ಇವು ನನ್ನ ಸರಳ ಪ್ರಶ್ನೆಗಳು. ಹಾಗಾಗಿ ನನ್ನ ಪ್ರಕಾರ ರಾಮಾಯಣದ ಪಾತ್ರ ಈ ಶೂರ್ಪನಖಿ ಯನ್ನು ಅಸಡ್ಡೆಯಿಂದ ಕರೆಯಬೇಕಿಲ್ಲ .’ಚಂದ್ರನಖಿ’ ಎನ್ನುವುದೇ ಸರಿಯಾದ ಪ್ರಯೋಗ. ಹೇಳಿದ್ದನ್ನೇ ಹೇಳಿ ಇನಷ್ಟು ಹಳತು ಮಾಡುವುದಕ್ಕಿಂತ ಹಳೆಯದರಲ್ಲೂ ನಾವೀನ್ಯತೆ ಕಾಣುವ ಬಯಕೆ ನನ್ನದು’ ಎಂದು ಹೇಳಿದ್ದಾರೆ.
©2024 Book Brahma Private Limited.