ಉರಿವ ಕೆಂಡದ ಮೇಲೆ-ರೇವಣಪ್ಪ ಬಿದರಗೇರಿ ಅವರ ನಾಟಕ. ಇಂತಹ ಜಾತಿಯವರು ಅನ್ನುವ ಕಾರಣಕ್ಕೆ, ಇಂತಹ ಕೆಲಸ ಮಾಡುತ್ತಾರೆ ಅನ್ನುವ ಕಾರಣಕ್ಕೆ, ಇಂತಹ ಬಣ್ಣದವರು ಅನ್ನುವ ಕಾರಣಕ್ಕೆ, ಜನಸಮುದಾಯಗಳನ್ನ ಅಸ್ಪೃಶ್ಯರಂತೆ ಕಾಣುವ ಒಂದು ಪರಂಪರೆ ನಮ್ಮಲ್ಲಿ ಇತ್ತು. ಇಂದಿಗೂ ಇದೆ. ಇಂದು ಹಾಗೇ ಮಾಡುವುದು ಕಾನೂನು ವಿರೋಧ ಕೃತ್ಯ ಎಂದು ಪರಿಗಣಿಸಲಾಗಿದ್ದರೂ ಕೂಡ ಅಲ್ಲಲ್ಲಿ ದಲಿತರ ಮೇಲೆ ಪರಿಶಿಷ್ಟ ಜಾತಿ ವರ್ಗದವರ ಮೇಲೆ ಒಂದಲ್ಲಾ ಒಂದು ಬಗೆಯ ದಬ್ಬಾಳಿಕೆ ನಡೆಯುವುದನ್ನ ನಾವು ನೋಡುತ್ತೇವೆ. ಹೆಣ್ಣು ಗಂಡಿನ ಸಂಬಂಧದ ವಿಷಯಕ್ಕೆ ಬಂದಾಗ, ಆಹಾರದ ವಿಷಯಕ್ಕೆ ಬಂದಾಗ ನಮ್ಮ ದಲಿತ ವರ್ಗ ಹಿಂಸೆಗೆ ಒಳಗಾಗುವುದನ್ನ ನಾವು ನೋಡುತ್ತೇವೆ. ಈಗ ಹಾಗೆಲ್ಲ ಮಾಡುವುದು ಕಾನೂನುಬಾಹಿರ ಎಂಬ ಅರಿವಿದ್ದೂ ಜನ ಈ ಕೆಲಸವನ್ನ ಮಾಡುತ್ತಾರೆ ಅಂದರೆ ಹಿಂದೆ ಇಲ್ಲಿ ಹೇಗಿತ್ತು ಅನ್ನುವುದನ್ನ ಗಮನಿಸಿದಾಗ ಮನಸ್ಸಿಗೆ ಆಘಾತವಾಗುತ್ತದೆ. ಇಂತಹ ಆಘಾತದ ಒಂದು ಚಿತ್ರಣವನ್ನ ಶ್ರೀ ರೇವಣಪ್ಪ ಬಿದರಗೇರಿಯವರು ತಮ್ಮ ಐತಿಹಾಸಿಕ ನಾಟಕ 'ಉರಿವ ಕೆಂಡದ ಮೇಲೆ' ಎಂಬ ಕೃತಿಯಲ್ಲಿ ನಮ್ಮ ಮುಂದೆ ಇಡುತ್ತಾರೆ. ರಂಗಭೂಮಿಯ ಮೇಲೆ ಅಪಾರವಾದ ಕಾಳಜಿ ಇರಿಸಿಕೊಂಡ ಬಿದಿರಗೇರಿ ಶಾಲಾ ಮಕ್ಕಳಿಗೆ ನಾಟಕಗಳನ್ನ ಕಲಿಸುತ್ತ, ಮಕ್ಕಳಿಗಾಗಿ ನಾಟಕ ಬರೆಯುತ್ತ, “ಶಿವಮೊಗ್ಗ ಜಿಲ್ಲೆಯ ದಲಿತ ರಂಗಭೂಮಿಯ ಸ್ವರೂಪ' ಎಂಬ ವಿಷಯವಾಗಿ ಫೆಲೋಶಿಪ್'ಗೆ ಆಯ್ಕೆಯಾಗಿ ಕ್ಷೇತ್ರಕಾರ್ಯ ಕೈಗೊಂಡಿದ್ದರು. ಅವರು ಆ ಕಾರ್ಯ ಆರಂಭಿಸಿದಾಗಲೇ ಈ ಕೃತಿ ಪ್ರಕಟವಾಗಿತ್ತು ಎನ್ನುವುದು ವಿಶೇಷ.
©2024 Book Brahma Private Limited.