1924ರಲ್ಲಿ ಮೊದಲ ಮುದ್ರಣವನ್ನು ಕಂಡಂತಹ ನಾಟಕ ಕಾನೀನ. ಕರ್ಣನ ವೃತ್ತಾಂತವನ್ನು ಕಥಾವಸ್ತುವನ್ನಾಗಿರಿ ಬರೆದಂತಹ ನಾಟಕವಿದು. ಐದು ದೃಶ್ಯಗಳನ್ನು ಒಳಗೊಂಡಿರುವ ಈ ನಾಟಕದ ಅಂತ್ಯದಲ್ಲಿ ಶ್ರೀ ಕೃಷ್ಣ ಮತ್ತು ಕರ್ಣ ಎಂಬ ಅಂಕ ಮತ್ತಷ್ಟು ವಿಶೇಷವಾಗಿ ಕಾಣುತ್ತದೆ. ಒಟ್ಟು ಹದಿನಾರು ಪಾತ್ರಗಳನ್ನು ಹೊಂದಿರುವ ಈ ನಾಟಕವು ಮಹಾಭಾರತದಲ್ಲಿ ದುರಂತ ನಾಯಕನೆಂದು ಬಣ್ಣಿಸಲ್ಪಡುವ ಕರ್ಣನ ಸಂಪೂರ್ಣ ಕಥೆಯನ್ನು ಓದುಗರೆದುರು ತೆರೆದಿಡುತ್ತದೆ. ಕರ್ಣನು ಕುಂತಿ ಪುತ್ರನಾಗಿ ಜನಿಸಿದ ಕಥೆಯನ್ನು ಸ್ವಾರಸ್ಯಕರವಾಗಿ ವರ್ಣಿಸಲಾಗಿದೆ. ಸೂರ್ಯ ದೇವನಿಂದ ವರವಾಗಿ ಪಡೆದ ಮಗುವನ್ನು ಕರ್ಣನೆಂದು ನಾಮಕರಣ ಮಾಡಿ ಸಂತೋಷ ಪಡುತ್ತಿರುವಾಗ ತನಗಾಗುವ ಅಪವಾದವನ್ನು ನೆನೆಸಿ ಮಗುವನ್ನು ಗಂಗಾಮಾತೆಯ ಮಡಿಲಿಗೊಪ್ಪಿಸುವ ಸನ್ನಿವೇಶ ರಸವತ್ತಾಗಿ ವರ್ಣಿಸಲಾಗಿದೆ. ಗಂಗೆಯಲ್ಲಿ ದೊರೆತ ಮಗುವನ್ನು ಮನೆಗೆ ಕೊಂಡುಹೋಗಿ ಪೋಷಿಸುವ ಸೂತ ಮತ್ತು ಆತನ ಪತ್ನಿಯ ಭಾವನೆಗಳನ್ನು ಅರ್ಥವತ್ತಾಗಿ ವಿವರಿಸಲಾಗಿದೆ. ಸೂತಪುತ್ರನೆಂದು ಅನಿಸಿಕೊಂಡ ಕರ್ಣನ ಜೀವನ ಯಾವರೀತಿ ಮುಂದುವರೆಯುತ್ತದೆ ಮತ್ತು ಅವನು ಯಾವ ರೀತಿ ಸಕಲವಿದ್ಯಾ ಪಾರಂಗತನಾಗಿ ದುರ್ಯೋಧನನಿಗೆ ಆಪ್ತನಾಗುತ್ತಾನೆನ್ನುವ ಕಥಾನಕವೂ ಸ್ವಾರಸ್ಯಕವಾಗಿ ಮೂಡಿ ಬಂದಿದೆ. ಕರ್ಣನ ಜೀವನದ ಸತ್ಯಾಸತ್ಯತೆಗಳ ಕುರಿತು ಬೆಳಕು ಚೆಲ್ಲುವಂತಹ ನಾಟಕವಿದು.
©2024 Book Brahma Private Limited.