ಲೇಖಕ ಸತ್ಯನಾರಾಯಣ ರಾವ್ ಅಣತಿ ಅವರ ನಾಟಕ ಕೃತಿ ‘ಚಾರ್ವಾಕ’. ಕೃತಿಗೆ ಮುನ್ನುಡಿ ಬರೆದ ಮಾ. ವರದರಾಜು ‘ಮೂಲತಃ ಅಣತಿ ಒಬ್ಬ ಸೃಜನಶೀಲ ಸಂವೇದನೆಯ ಕವಿ. ಆದರೆ ಅವರ ಸಂವೇದನೆ ಕೇವಲ ರಮ್ಯ ಸುಕುಮಾರ ಭಾವಗಳಿಗೆ ಸೀಮಿತವಾಗದೆ, ಪ್ರಜ್ಞೆಯ ಸ್ತರದಲ್ಲಿ ಸಮಾಜಮುಖಿಯಾಗಿದೆ. ಸಮಾನತೆ, ಸ್ವಾತಂತ್ಯ, ಜಾತಿ ವಿರೋಧ, ಶೋಷಿತರ ಮೇಲಿನ ದಬ್ಬಾಳಿಕೆ ವಿರೋಧಿ ನಿಲುವಿನೊಂದಿಗೆ, ಮಾನವತಾ ಧರ್ಮದೊಂದಿಗೆ ಅನುಸಂಧಾನ ನಡೆಸುತ್ತ, ಬಲಪಂಥೀಯ ಧೋರಣೆಗಳಿಗೆ ಮುಖಾಮುಖಿಯಾಗಿ ನಿಂತ ಪ್ರಗತಿಗಾಮಿ ಚಿಂತಕ. ಹೀಗಾಗಿ ಕವಿಹೃದಯದಿಂದ ಸಮಾಜದ ವಾಸ್ತವತೆಯನ್ನು ಅರ್ಥೈಸಿಕೊಳ್ಳುತ್ತ, ಪ್ರಜ್ಞಾ ನಿಲುವಿನಲ್ಲಿ ಚಿಂತಿಸಿದವರು. ಅವರು 'ಚಾರ್ವಾಕ' ರಚಿಸಿದಾಗ ಅವರಿಗೆ ಹದಿಹರೆಯದ ತಾರುಣ್ಯ-ಎಪ್ಪತ್ತರ ದಶಕದ ಕೊನೆಯ ವರುಷಗಳು - ಬಹುಮುಖಿ ಚಿಂತನೆ, ಪ್ರಭಾವಗಳ ಪ್ರವಾಹವೇ ಹರಿದುಬಂದು ರಾಜಕೀಯ, ಸಾಮಾಜಿಕ, ಸಾಹಿತ್ಯಿಕ ಸ್ಥಿತ್ಯಂತರ, ಪಲ್ಲಟಗಳಿಗೆ ಕಾರಣವಾಗಿದ್ದ ಕಾಲ. ‘ಚಾರ್ವಾಕ' ನಾಟಕ ತೀವ್ರಗಾಮಿಗಳ ಜೀವವಿರೋಧಿ ಕ್ರೂರತೆಯಲ್ಲಿ ನಲುಗಿದ ಮಾನವತೆಯ ಬಗೆಗಿನ ಅಣತಿಯವರ ಅಸೀಮ ಒಲವನ್ನು ವ್ಯಕ್ತಪಡಿಸುತ್ತದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.