‘ಕೆಂಡ ಮಂಡಲ’ ಮೂಡ್ನಾಕೂಡು ಚಿನ್ನಸ್ವಾಮಿ ಅವರ ನಾಟಕ ಕೃತಿ. ಈ ಕೃತಿಗೆ ಶೂದ್ರ ಶ್ರೀನಿವಾಸ ಅವರ ಬೆನ್ನುಡಿಯ ಮಾತುಗಳಿವೆ. ಕೃತಿ ಮತ್ತು ಕೃತಿಕಾರರ ಬಗ್ಗೆ ಬರೆಯುತ್ತಾ 'ಚಿನ್ನಸ್ವಾಮಿಯವರು ಮೂಲಭೂತವಾಗಿ ಕವಿಯ ಮನಸ್ಸಿನವರು. ಕಾವ್ಯದಲ್ಲಿ ಗಂಭೀರವಾಗಿ ಕೆಲಸ ಮಾಡಬೇಕು ಎಂಬ ತುಡಿತವನ್ನು ಪಡೆದವರು. ಯಾವುದೇ ಭಾಷೆಯ ಗದ್ಯಕ್ಕೆ ಸೊಗಸು ಬರುವುದು ಕಾವ್ಯದ ಮನಸ್ಸು ಲೇಖನಿಗಿದ್ದಾಗ, ಈ ದೃಷ್ಟಿಯಿಂದ ಗೆಳೆಯ ಚಿನ್ನಸ್ವಾಮಿಯವರ ಕೆಂಡ ಮಂಡಲ ನಾಟಕಕ್ಕೆ ಆ ರೀತಿಯ ಕಾವ್ಯ ಮಮತೆಯ ಸೊಗಸಿದೆ. ಇದು ಅವರ ಮೊದಲನೆಯ ನಾಟಕ. ವಸ್ತು: ಸಾಮಾಜಿಕ ಬದ್ಧತೆಯ ಚೌಕಟ್ಟಿನಲ್ಲಿ ನಿರೂಪಿತವಾಗಿರುವಂಥದ್ದು, ಮೇಲ್ನೋಟಕ್ಕೆ ಹಸಿಹಸಿಯಂತೆ ಕಾಣಿಸಿದರೂ ಚಿನ್ನಸ್ವಾಮಿಯವರು ವಸ್ತುವನ್ನು ನೋಡಿರುವ ಕ್ರಮದಲ್ಲಿ ಹೊಸತನವಿದೆ. ಜಾತಿಬದ್ಧ ಸಮಾಜ ವ್ಯವಸ್ಥೆಯಲ್ಲಿ ವಿದ್ಯಾವಂತರ ನಡುವೆಯೂ ಘಟಿಸಬಹುದಾದ ಸೂಕ್ಷ್ಮ ಸಮಸ್ಯೆಗಳನ್ನು ಚೆನ್ನಾಗಿ ಗ್ರಹಿಸಿದ್ದಾರೆ' ಎನ್ನುತ್ತಾರೆ ಶೂದ್ರ ಶ್ರೀನಿವಾಸ. ಕೆಂಡಮಂಡಲವನ್ನು ಚಿನ್ನಸ್ವಾಮಿಯವರು ತುಂಬು ಉತ್ಸಾಹದಿಂದ ಬರೆದಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.