‘ಆಸ್ಕ್ ಮಿಸ್ಟರ್ YNK’ ಲೇಖಕ ಜೋಗಿ ಅವರ ನಾಟಕ. ಈ ನಾಟಕದ ಹಿನ್ನೆಲೆಯ ಕುರಿತು ಬರೆಯುತ್ತಾ..ನಾನು ಬೆಂಗಳೂರಿಗೆ ಬಂದ ಆರಂಭದಲ್ಲಿ ನನಗೆ ಗುರುವಿನಂತೆ ಸಿಕ್ಕವರು ವೈಎನ್ಕೆ ಎನ್ನುತ್ತಾರೆ ಜೋಗಿ. ವೈಎನ್ಕೆ ಅವರ ಓದಿನ ವಿಸ್ತಾರ, ಅವರ ಗ್ರಹಿಕೆ ಮತ್ತು ಒಳನೋಟಗಳ ಮೂಲಕವೇ ನಾನು ಬೆಂಗಳೂರನ್ನು ಮೊದಲು ಕಂಡದ್ದು, ಬೆಂಗಳೂರಿಗೆ ಅಂಟಿಯೂ ಅಂಟದೇ ಇದ್ದ ವೈಎನ್ಕೆ ಅವರಿಗೆ ಬೆಂಗಳೂರಿನ ಮಧ್ಯಮ ವರ್ಗಗಳ ಕುರಿತು ಅಪಾರವಾದ ನಂಬಿಕೆ ಮತ್ತು ಅಪನಂಬಿಕೆ. ಅವರು ಸದಾ ಹೇಳುತ್ತಿದ್ದ ಮಾತೊಂದು; ಬೆಂಗಳೂರಲ್ಲಿ ಮಧ್ಯಮ ವರ್ಗ ಎದ್ದು ನಿಂತರೆ ವ್ಯವಸ್ಥೆ ನಾಶವಾಗುತ್ತೆ. ವ್ಯವಸ್ಥೆ ನಾಶವಾದರೆ ಸರ್ಕಾರ ಉರುಳುತ್ತೆ, ರೌಡಿಗಳು ಸರ್ವನಾಶ ಆಗುತ್ತಾರೆ, ಭ್ರಷ್ಟರು ತೊಲಗುತ್ತಾರೆ. ಆದರೆ, ಮಧ್ಯಮ ವರ್ಗ ಇಲ್ಲಿ ನಿರಾತಂಕದ ಭಾವವನ್ನು ಹುಟ್ಟಿಸಿ ಸುಮ್ಮನುಳಿಯಿತು, ಕೆಳಮಧ್ಯಮ ವರ್ಗವು ತನ್ನ ವಾಚಾಳಿತನದಲ್ಲಿ, ಮೇಲು ಮಧ್ಯಮವರ್ಗವು ತನ್ನ ಮೌನದಲ್ಲಿ ರಾಜಕೀಯವನ್ನು ನಿಯಂತ್ರಿಸಿತು.
ಇದನ್ನೆಲ್ಲ ಹಿಡಿಯುವುದಕ್ಕೆ ಕಾದಂಬರಿಗಿಂತ ನಾಟಕವೇ ಒಳ್ಳೆಯ ಮಾಧ್ಯಮ ಅನ್ನಿಸಿದ್ದರಿಂದ ಈ ನಾಟಕ ಬರೆದೆ ಎಂಬುದು ಜೋಗಿಯವರ ಮಾತು. ನಾನು ಬರೆದೆ ಅನ್ನುವುದಕ್ಕಿಂತ ಈ ವಸ್ತು ಈ ಮಾಧ್ಯಮವನ್ನೇ ಆರಿಸಿಕೊಂಡಿತು ಎಂದೇ ಹೇಳಬೇಕು. ಇದು ಕೂಡ ಬೆಂಗಳೂರಿನ ಕುರಿತು ನಾನು ಬರೆಯಬೇಕು ಅಂದುಕೊಂಡಿರುವ ಬರಹಗಳ ಒಂದು ರೂಪ ಎಂದೇ ಹೇಳಬಹುದು. ಇದು ವೈಎನ್ಕೆ ಆತ್ಮಚರಿತ್ರೆ ಅಲ್ಲ. ಅವರ ಕತೆಯೂ ಅಲ್ಲ. ವೈಎನ್ಕೆ ಅವರ ಪ್ರೀತಿಪಾತ್ರ ಪಾತ್ರವಾದ ಘಾ ಇದರಲ್ಲಿ ಮುಖ್ಯಪಾತ್ರಧಾರಿ. ಆತನ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಈ ನಾಟಕ ಬೆಳೆಯುತ್ತಾ ಹೋಗುತ್ತದೆ. ಈ ಕೃತಿಗಾಗಿ ವೈಎನ್ಕೆ ಅವರ ಪದ್ಯಗಳ ಕೆಲವು ಸಾಲುಗಳನ್ನು ಬಳಸಿಕೊಳ್ಳಲಾಗಿದೆ.
©2024 Book Brahma Private Limited.