ಸಂತನಾಗದ ವಸಂತ

Author : ಸತ್ಯನಾರಾಯಣರಾವ್ ಅಣತಿ

Pages 124

₹ 100.00




Year of Publication: 2020
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ, ಶಿವಮೊಗ್ಗ 577 201
Phone: 9449886390

Synopsys

ಲೇಖಕ ಸತ್ಯನಾರಾಯಣ ರಾವ್ ಅಣತಿ ಅವರ ನಾಟಕ ಕೃತಿ ‘ಸಂತನಾಗದ ವಸಂತ’.ಈ ಕೃತಿಗೆ ಬೆನ್ನುಡಿ ಬರೆದ ವಿಜಯ, ‘ಕೃತಿಯ ಉದ್ದಕ್ಕೂ ಪ್ರತಿಯೊಂದು ಪಾತ್ರವೂ ಅದರದೇ ಆದ ತಿಳಿವಿನ, ನಂಬಿಕೆಯ ಮಿತಿಯಲ್ಲಿ ಮಾದ್ರಿ ಎತ್ತಿದ ಪ್ರಶ್ನೆಗಳನ್ನೇ ಚರ್ಚಿಸುತ್ತವೆ. ಅದು ಎಲ್ಲ ಕಾಲದಲ್ಲೂ ನಡೆಯುವ, ನಡೆಯ ಬಹುದಾದ ಜಿಜ್ಞಾಸೆ. ಪುರುಷಾಹಂಕಾರ, ಅಧಿಕಾರಗಳು ಅಸಹಜವನ್ನು ಸಂಗತಗೊಳಿಸುವ ಅಬ್ಬರದಲ್ಲಿ ಪ್ರಕೃತಿ ಮತ್ತು ಸ್ತ್ರೀ ಮಾತು ಕಳೆದುಕೊಳ್ಳುತ್ತವೆ ಎಂಬುದನ್ನು ಕವಿ ಧ್ವನಿಸುತ್ತಾರೆ. ಆದರೆ ಪ್ರಕೃತಿ ಮತ್ತು ಸ್ತ್ರೀ ಹೇಗೆ ಸ್ವತಂತ್ರರೆಂಬುದನ್ನು ಸ್ಥಾಪಿಸುವ ಬಹು ದೊಡ್ಡ ಆಶಯವನ್ನೂ ಕಟ್ಟಿಕೊಡುತ್ತಾರೆ.’ ಎಂದು ಹೇಳಿದ್ದಾರೆ.

About the Author

ಸತ್ಯನಾರಾಯಣರಾವ್ ಅಣತಿ
(12 December 1935)

ಕವಿ, ನಾಟಕಕಾರ ಕೆ. ಸತ್ಯನಾರಾಯಣರಾವ್ ಅಣತಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದವರು. ತಂದೆ-ಎ.ಎನ್. ಮೂರ್ತಿರಾವ್, ತಾಯಿ-ಶ್ರೀಮತಿ ರತ್ನಮ್ಮ . 1935 ಡಿಸೆಂಬರ್ 12, ರಂದು ಜನಿಸಿದ ಅವರು ಹುಟ್ಟಿದ ಊರಾದ ಅಣತಿ, ತಿಪಟೂರು, ಹಾಸನ, ಬೆಂಗಳೂರು, ಧಾರವಾಡಗಳಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸತ್ಯನಾರಾಯಣರಾವ್ ಸಾಹಿತ್ಯಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದ ಹಲವು ವಿಭಾಗಳಲ್ಲಿ ಕೃಷಿಮಾಡಿದ್ದಾರೆ.  ಕೃತಿಗಳು: ನೀಲಕುರುಂಜಿ (ಆಯ್ದ ಕವಿತೆಗಳ ಸಂಕಲನ), ಪಾತ್ರಗಳು ಇರಲಿ ಗೆಳೆಯ, ತೆರಕೊಂಡ ಆಕಾಶ, ಕೃಷ್ಣ ಕಣ್ಣಿನ ನೋಟ, ಭೂಮಿ ಬದುಕಿನ ಗಂಧ, ...

READ MORE

Reviews

ಸಂತನಾಗದ ವಸಂತ ಕೃತಿಯ ವಿಮರ್ಶೆ- ಹೊಸ ಮನುಷ್ಯ

ಸತ್ಯನಾರಾಯಣ ರಾವ್ ಅಣತಿ ಅವರ ಇತ್ತೀಚಿನ ಕೃತಿ 'ಸಂತನಾಗದ ವಸಂತ' ಮಹಾಭಾರತದಲ್ಲಿ ಬರುವ ಪಾಂಡು ಮಾದ್ರಿಯ ದಾಂಪತ್ಯ ಜೀವನವನ್ನು ವಿಶ್ಲೇಷಣೆಗೆ ಒಳಪಡಿಸುವ ನಾಟಕ, ಪಾಂಡು ಮಾದ್ರಿಯ ಆಖ್ಯಾನವನ್ನು ಕುರಿತು ಕಡೆಂಗೋಡ್ಲು ಶಂಕರ ಭಟ್ಟರು (1904-1968) ರಚಿಸಿದ 'ಮಾದ್ರಿಯ ಚಿತೆ' (1932) ಕಥನಕವನ ತನ್ನ ವರ್ಣನೆ ಹಾಗು ಅಭಿವ್ಯಕ್ತಿಯ ತೀವ್ರತೆಯಿಂದ ಮನ ಸೆಳೆಯುತ್ತದೆ. ಬದುಕು, ಸಾವು, ವಿರಹ, ಕಾಮ ಇತ್ಯಾದಿಗಳ ಬಗೆಗಿನ ಕವಿಯ ಚಿಂತನೆ ಹಾಗು ದರ್ಶನವನ್ನು ಮೀರಿ ಹೃದಯಕ್ಕೆ ತಟ್ಟುವ ಕಲಾಕೃತಿಯ ರೂಪ ಪಡೆದಿರುವುದರಿಂದಲೇ ಅದು ಕನ್ನಡ ಕಾವ್ಯಲೋಕದಲ್ಲಿ ಚಿರಂತನ ಸ್ಥಾನ ಪಡೆದಿದೆ. ಪಾಂಡು ಮಾದ್ರಿ ಹೆಸರೆತ್ತಿದೊಡನೆ ನಮಗೆ ನೆನಪಾಗುವುದೇ ಭಟ್ಟರ 'ಮಾದ್ರಿಯ ಚಿತೆ'!

ಕಿಂದಮ ಮಹರ್ಷಿ ಮೃಗರೂಪದಲ್ಲಿ ಮೈಥುನದಲ್ಲಿ ಮೈಮರೆತಿರುವುದನ್ನು ಅರಿಯದೆ ಪಾಂಡು ಬಾಣ ಪ್ರಯೋಗಮಾಡಿ “ನಿನ್ನ ಮಡದಿಯ ಜತೆ ಮೈಥುನದಲ್ಲಿ ಮೈಮರೆತಾಗ ನಿನಗೆ ಹೀಗೆಯೇ ಸಾವು ಬರಲಿ” ಎಂದು ಅಭಿಶಕ್ತನಾದ. ಸಂನ್ಯಾಸ ದೀಕ್ಷೆ ತೊಟ್ಟು ಮಡದಿಯರೊಡಗೂಡಿ ಶತಶೃಂಗ ಪರ್ವತದಲ್ಲಿರಲು ವಸಂತ ಋತುವಿನಾಗಮನದಲ್ಲಿ ಮಾದ್ರಿಯ ಜವ್ವನಕ್ಕೆ ಮನಸೋತು ಆಕೆ ಬೇಡಬೇಡವೆಂದು ಕೊಸರಿಕೊಂಡರೂ ಕೇಳದೆ, ಋಷಿ ಶಾಪ ಮರೆತು,ಕಾಮಾತುರನಾಗಿ ಆಕೆಯನ್ನು ಆವರಿಸಿಕೊಂಡು ಭೋಗದಲ್ಲೇ ಸಾವನ್ನಪ್ಪಿದ. ಇದು ನಾಟಕದ ವಸ್ತು. ಎಂಟು ಕಪ್ಪು ಬಿಳಿ ಚಿತ್ರಗಳು, ಎರಡು ಭಾಗಗಳು ಮತ್ತು ಒಂಬತ್ತು ದೃಶ್ಯಗಳನ್ನು ಒಳಗೊಂಡ ಈ ನಾಟಕದಲ್ಲಿ ಗದ್ಯವೂ ಅಲ್ಲದ,ಪದ್ಯವೂ ಅಲ್ಲದ,ಅಲ್ಲಲ್ಲಿ ಗದ್ಯ,ಅಲ್ಲಲ್ಲಿ ಪದ್ಯ,ಅಲ್ಲಲ್ಲಿ ಪದ್ಯಗಂಧಿ ಗದ್ಯಸಹಿತ ಸಂಭಾಷಣೆ ಕಂಡುಬರುತ್ತದೆ. ಇದರ ಉದ್ದೇಶಪರಿಣಾಮದ ಬಗೆಗಿನ ಚರ್ಚೆ ನಾಟಕ ಆಡಿಸುವವರು ಮತ್ತು ನಾಟಕ ನೋಡುವವರು ಮಾಡಬೇಕು.ಬೇಸರದ ಸಂಗತಿ ಎಂದರೆ ನಾಟಕ ಓದಿ ಮುಗಿಸಿದ ಮೇಲೆ ಯಾವ ಒಂದು ಸಾಲೂ ಮನಸ್ಸಿನಲ್ಲಿ ಅಷ್ಟೊತ್ತಿ ಕೂರುವುದಿಲ್ಲ!

'ನಾಟಕದ ಶೀರ್ಷಿಕೆ ಚಮತ್ಕಾರಿಕವಾಗಿದೆ.ವಸಂತ ಸಂತನಾಗುವುದು ಹೇಗೆ ಸಾಧ್ಯ? - ಶೃಂಗಾರವೇ ವಸಂತದ ಸ್ಥಾಯಿ ಭಾವ.ಪಾಂಡುವನ್ನು ವಸಂತದ ಜತೆ ಸಮೀಕರಿಸಿ ನೋಡಿದರೆ ಆತ ಸಂತನಾಗಿ ಬದುಕಿ ವಸಂತದಲ್ಲಿ ಪ್ರಕೃತಿಸಹಜವಾದ ಕಾಮದ ಕರೆಗೆ ಓಗೊಟ್ಟು ಕಾಮಕೇಳಿಯಲ್ಲಿ ಸತ್ತ. ಸಂತ ವಸಂತದಲ್ಲಿ ಸಂತ ತೊರೆದು ಸತ್ತ.ಅವನ ಸಂತತ ಒಡಲೊಳಗೆ ಹೊತ್ತಿ ಉರಿಯುತ್ತಿದ್ದ ಕಾಮದ ಕೆಂಡದ ಮೇಲಿನ ಬೂದಿಯ ಹೊದಿಕೆ[ಬದುಕಿಗೆ ಗೊಡ್ಡು ಸಂತಕ್ಕಿಂತ ವಸಂತ ತುವೆ ಮೇಲೆಂದು ಭಾವಿಸಿದ.ಇದು ಬದುಕಿನ ಸಂಭ್ರಮಾಚರಣೆ ,ಸಾವಿನ ಶೋಕಾಚರಣೆಯಲ್ಲ.ಅಣತಿಯವರ ಈ ವೈಚಾರಿಕ ಪದಾರ್ಥವಾದಿ ದರ್ಶನದಿಂದಾಗಿ ಶೀರ್ಷಿಕೆ ಮೇಲ್ನೋಟಕ್ಕೆ ಅಸಂಗತವಾಗಿ ಕಂಡರೂ ಅರ್ಥಪೂರ್ಣವಾಗಿದೆ.

ಅಣತಿಯವರ ಮಾದ್ರಿ ಈ ಕಾಲದ ಎಚ್ಚೆತ್ತ ಹೆಣ್ಣಿನಂತೆ ನಾಟಕದುದ್ದಕ್ಕೂ ತನ್ನ ವಿಧಿಯ ಬಗ್ಗೆ ಹತ್ತುಹಲವು ಪ್ರಶ್ನೆಗಳನ್ನು ಎತ್ತುತ್ತಾಳೆ. ಬಾಯ್ಯುಚ್ಚಿಕೊಂಡು ಸಹಿಸುವ ಹೆಣ್ಣಲ್ಲ ಆಕೆ. ಗಂಡನನ್ನು, ಗಂಡಸರನ್ನು ಚುಚ್ಚುವ, ಹಳಿಯುವ,ಹೀಯಾಳಿಸುವ ಆಕೆ ಹೊಟ್ಟೆಕಿಚ್ಚಿನ , ಅಲ್ಪತನದ ಗಯ್ಯಾಳಿ, ವಿಧಿಯನ್ನು ಮೀರಬಯಸುವ ಆಕೆಗೆ ಅದನ್ನು ಮೀರುವ ಯೋಚನಾ ಲಹರಿಯೂ ಇಲ್ಲ, ಕ್ರಿಯಾಶಕ್ತಿಯೂ ಇಲ್ಲ.ತನ್ನ ದುರಂತಕ್ಕೆ ಪುರುಷನಿರ್ಮಿತಿಯನ್ನು ದೂಷಿಸುವ ಮತ್ತು ಪವಾಡ , ಮಂತ್ರ ಶಕ್ತಿಯನ್ನು ಲೇವಡಿ ಮಾಡುವ ಆಕೆ ಮಕ್ಕಳನ್ನು ಪಡೆಯುವುದು ಗಂಡಸು ಕೊಟ್ಟ ಮಂತ್ರಬಲದಿಂದಲೆ! ಈ ಮಾದ್ರಿ ಸಹಗಮನ ಮಾಡದೆ ಹೊಸ ಬದುಕಿಗೆ ಮುಖ ಮಾಡುವುದು ಕಾಲೋಚಿತವಾಗಿದೆ.ಆದರೆ ಪಾತ್ರಗಳಿಗೆ ನಮ್ಮ ವೈಚಾರಿಕತೆ ಐಡಿಯಾಲಜಿ ಅಥವಾ ದರ್ಶನವನ್ನು ಹೇರುವುದರಿಂದ ಒಂದು ಕೃತಿ ಹೊರಹೊಮ್ಮಬಹುದೇ ಹೊರತು ಕಲಾಕೃತಿಯಾಗುವುದಿಲ್ಲ. ಅಣತಿಯವರ ನಾಟಕ ನಮ್ಮನ್ನು ಕಾಡುವ - ಕಲಾಕೃತಿಯಾಗುವಲ್ಲಿ ಸೋಲುತ್ತದೆ.

(ಕೃಪೆ: ಪುಸ್ತಕಾವಲೋಕನ, ಬರಹ: ಮಹಾಬಲೇಶ್ವರ ರಾವ್)‌

Related Books