ನವೀನ ನಾಟಕಗಳು-ಈ ನಾಟಕ ಕೃತಿಯನ್ನು ಶಿವರಾಮ ಕಾರಂತರು ಬರೆದಿದ್ದು, ದೇವಿ-ದೇಹಿ, ಗೆದ್ದವರ ಸತ್ಯ, ರಕ್ತ ಕಾಣಿಕೆ, ಇಸ್ಪಿಟು ಗುಲಾಮ, ಹಿರಿಯ ದೇವರು ಹೀಗೆ ಐದು ನಾಟಕಗಳಿವೆ. ಶಿವರಾಮ ಕಾರಂತರು ಕನ್ನಡ ರಂಗಭೂಮಿಗೆ ನೀಡಿದ ಈ ಕೃತಿ ಎರಡನೇ ಕಾಣಿಕೆ. ದೇವಿ-ದೇಹಿ, ಗೆದ್ದವರ ಸತ್ಯ, ರಕ್ತ ಕಾಣಿಕೆ -ಈ ಮೂರು ಛಾಯಾ ನಾಟಕಗಳು ಹಾಗೂ ಉಳಿದೆರಡು (ಇಸ್ಪಿಟು ಗುಲಾಮ, ಹಿರಿಯ ದೇವರು) ಅಣಕವಾಡುಗಳು.
ದೇವಿ-ದೇಹಿ ನಾಟಕದಲ್ಲಿ`ಎಲ್ಲಿ ನಾರಿಯು ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು ಇರುತ್ತಾರೆ' ಎಂಬುದು ಮುಂದೆ ಆಕೆ ಕಡೆಗಣಿಸ್ಪಟ್ಟಳು ಹೇಗೆ? ಇಂತಹ ಜಿಜ್ಞಾಸೆಯ ಕಥೆ ಇದ್ದರೆ, ಹಿರಿಯ ದೇವರು ನಾಟಕದಲ್ಲಿ, ಮನುಷ್ಯನ ಭೀತಿಯು ದೇವರನ್ನು ಹೇಗೆ ಸೃಷ್ಟಿಸಿತು ಎಂಬ ಜಿಜ್ಞಾಸೆ ಇದೆ. ರಕ್ತ ಕಾಣಿಕೆ ನಾಟಕದಲ್ಲಿ ಆರ್ಥಿಕ ಅಸಮಾನತೆಯ ಅಟ್ಟಹಾಸವಿದ್ದರೆ, ಇಸ್ಪಿಟು ಗುಲಾಮ ನಾಟಕದಲ್ಲಿ ವರ್ಣಭೇದ ಕುರಿತಂತೆ ವಿಡಂಬನೆ ಇದೆ. ಇಸ್ಪೀಟು ಎಲೆಗಳನ್ನು ಕ್ರಮವಾಗಿ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ ಹಾಗೂ ಶೂದ್ರ ಕುಲವನ್ನು ಸಾಂಕೇತಿಸುತ್ತವೆ. ಬ್ರಾಹ್ಮಣ ಕುಲದಲ್ಲಿ ವರ ಸಿಗುವುದಿಲ್ಲ ಆದ್ದರಿಂದ, ರಾಜಕುಮಾರಿ ಕೊನೆಗೆ ಗುಲಾಮನನ್ನು ಪ್ರೇಮಿಸುತ್ತಾಳೆ. ಅವರಿಬ್ಬರನ್ನೂ ಕಂಡ ರಾಜಕುಮಾರ ಮಾತ್ರ ತನಗೆ ಅವಮಾನವಾಯಿತು ಎಂದು ಹಲಬುತ್ತಾನೆ ಎಂಬುದು ಇಲ್ಲಿಯ ಕಥಾ ವಸ್ತು. ಗೆದ್ದವರ ಸತ್ಯ ನಾಟಕಗಳಲ್ಲಿ ಜಾತಿಯ ಪೆಡಂಭೂತದ ಅಬ್ಬರವು ಹೇಗೆ ಮನುಷ್ಯತ್ವವನ್ನು ನುಂಗಿ ಹಾಕಿದೆ ಎಂಬುದರ ಚಿತ್ರಣವಿದೆ.
©2025 Book Brahma Private Limited.