'ಓ ದೇವರೆ’ ಆರ್.ಎಸ್. ಗಿರಿ ಅವರ ನಾಟಕವಾಗಿದೆ. ಜೀವನ ಚಕ್ರದ ಹಾಗೆ ರಂಗಚಕ್ರವೂ ಇದೆ. ಸಮಾಜದಿಂದ ನಾಟಕಕಾರ ವಸ್ತುವನ್ನು ಪಡೆದು, ತನ್ನ ಅನುಭವಗಳ ಮೂಸೆಯಲ್ಲಿ ಅದನ್ನು ಹಾಯಿಸಿ, ನಾಟಕ ಸಾಹಿತ್ಯಕೃತಿ ರಚಿಸುತ್ತಾನೆ. ಆ ಕೃತಿಯನ್ನು ನಿರ್ದೇಶಕ, ನಟ - ನಟಿಯರು, ನೇಪಥ್ಯಗಾರರು ಜೊತೆಗೂಡಿ ಮತ್ತೆ ಅದಕ್ಕೊಂದು ಜೀವಂತ ರೂಪಕೊಟ್ಟು ರಂಗಕೃತಿಯನ್ನಾಗಿಸುತ್ತಾರೆ. ಆ ರಂಗಕೃತಿ ಮತ್ತೆ ಸಮಾಜದ ಪ್ರೇಕ್ಷಕರಿಗೆ ಪ್ರದರ್ಶನದ ಮೂಲಕ ತಲುಪುತ್ತದೆ. ಇದು ರಂಗಚಕ್ರ, ಓದುವ ನಾಟಕಕೃತಿ ನೋಡುವ ನಾಟಕ ಪ್ರದರ್ಶನವಾದಾಗ ಸಾರ್ಥಕ್ಯ ಪಡೆಯುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನ ಹಲವಾರು ವಿಚಿತ್ರ ತಿರುವುಗಳನ್ನು ಪಡೆದು, ಬೇರೆಯದೇ ಒಂದು ವ್ಯಕ್ತಿತ್ವವನ್ನು ರೂಪಿಸಿ, ಸಮಾಜದ ಮುಂದೆ ಅವನ್ನು ನಿಲ್ಲಿಸಿರುತ್ತದೆ. ಕಾಲ, ಸ್ಥಳ ಬದಲಾವಣೆ, ಹೊಸಹೊಸ ಸಂಬಂಧಗಳ ಬೆಸುಗೆ, ಸಂಘರ್ಷಗಳಿಂದ ಬೇರ್ಪಡೆ, ಪ್ರತಿಬಾರಿಯೂ ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ನಿರ್ಣಾಯಕ ಘಟ್ಟಗಳು ಈ ಎಲ್ಲವೂ ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ತಲ್ಲಣಗಳನ್ನು ಚಿತ್ರಿಸಿ ನಾಟಕವಾಗಿಸುವ ವಸ್ತು ಆಗಿರುತ್ತದೆ. ಅದೇ ಚೌಕಟ್ಟಿನಲ್ಲಿ ಸಿದ್ಧವಾಗಿರುವ ಕೃತಿ 'ಓ ದೇವರೇ.'
©2024 Book Brahma Private Limited.