‘ತೂಗು ತೊಟ್ಟಿಲು ಮತ್ತು ಇತರ ನಾಟಕಗಳು’ ಕೃತಿಯು ಚನ್ನಕೇಶವ ಜಿ. ಅವರ ನಾಟಕಸಂಕಲನವಾಗಿದೆ. ಮಕ್ಕಳ ನಾಟಕ ಹೇಗಿರಬೇಕು ಎಂಬುದಕ್ಕೆ ಬಹಳ ಒಳ್ಳೆಯ ಉದಾಹರಣೆಯನ್ನು ಇಲ್ಲಿನ ನಾಟಕಗಳು ಕೊಡುತ್ತವೆ. ಜನಪ್ರಿಯ ದೇವರಾದ ಗಣಪತಿಯ ವಾಹನವಾದ ಇಲಿ ಅಷ್ಟು ದೊಡ್ಡ ಡೊಳ್ಳುಹೊಟ್ಟೆಯನ್ನು ಹೊತ್ತುಕೊಂಡ ಗಣಪ ತನ್ನಂತಹ ಚಿಕ್ಕದಾದ ಕ್ಷುದ್ರಜೀವಿಯನ್ನು ತನ್ನ ವಾಹನವಾಗಿ ಇಟ್ಟುಕೊಂಡು ಮಾಡುತ್ತಿರುವ ಶೋಷಣೆಯಿಂದ ನೊಂದು ಒಂದು ದಿನ ಅವನಿಂದ ತಪ್ಪಿಸಿಕೊಂಡು ತನ್ನ ಸಂಸಾರ ಸಮೇತ ಒಬ್ಬ ಮುದಿ ದಂಪತಿಯ ಮನೆಯಲ್ಲಿ ವಾಸವಾಗಿರುತ್ತವೆ. ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳಿಸಿ ಇಲ್ಲಿ ಒಂಟಿಯಾಗಿರುವ ಈ ಮುದಿ ದಂಪತಿ ಏಕತಾನತೆ ಕಳೆಯಲು ಒಂದು ಬೆಕ್ಕನ್ನು ತಂದು ಸಾಕತೊಡಗುತ್ತಾರೆ. ಇದರಿಂದ ದಿಕ್ಕೆಟ್ಟ ಇಲಿಯ ಸಂಸಾರ ಅಲ್ಲಿಯೂ ತಮ್ಮ ನೆಲೆ ಕಳೆದುಕೊಂಡು ಕಾಡಿಗೆ ಹೋಗುತ್ತದೆ ಎಂಬುದನ್ನು ಬಹಳ ರಸವತ್ತಾಗಿ ಈ ಕೃತಿಯಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಕಾಡಿನ ಕಥೆಗಳು ಇಲ್ಲಿ ಬಹಳ ಪ್ರಮುಖವೆನ್ನಿಸುತ್ತದೆ. ಕತೆಯ ಮುಂದುವರಿದ ಭಾಗವಾಗಿ ಕಷ್ಟಗಳನ್ನು ಅನುಭವಿಸುವ ಇಲಿಯ ಕತೆಯನ್ನು ಇಲ್ಲಿ ಲೇಖಕ ಕಟ್ಟಿಕೊಟ್ಟಿದ್ದಾರೆ. ಕಾಡಿನ ಅನೇಕ ಪ್ರಾಣಿ ಪಕ್ಷಿಗಳೇ ಇಲ್ಲಿ ಪಾತ್ರಗಳು. ಈ ಭಾಗವನ್ನು ಮೇಲಿನ ನಾಟಕದ ಮುಂದುವರಿದ ಭಾಗವಾಗಿಯೂ ಆಡಬಹುದು ಅಥವಾ ಪ್ರತ್ಯೇಕ ನಾಟಕವನ್ನಾಗಿಯೂ ಆಡಬಹುದು ಎನ್ನುತ್ತಾರೆ ಲೇಖಕ. ಮಕ್ಕಳ ನಾಟಕ ಎಂದ ಕೂಡಲೆ ಕೆಲವರು ಒಂದೋ ಬೋಧನೆಗಳನ್ನು ಹೇಳುವುದೋ ಅಥವಾ ಅತಿಯಾದ ಅತಿಮಾನುಷ ಪಾತ್ರಗಳ ಭ್ರಮಾಲೋಕ ಸೃಷ್ಟಿಸುವಂತೆ ಮಾಡುವುದು ಎಂದುಕೊಂಡಿರುತ್ತಾರೆ; ಅನೇಕ ನಾಟಕಕಾರರು ಹಾಗೆಯೇ ಬರೆದಿದ್ದಾರೆ ಕೂಡ. ಆದರೆ ಈ ನಾಟಕ ರಂಜನೆಯ ಮೂಲಕವೇ ನಮ್ಮ ಸುತ್ತ ಮುತ್ತ ನಡೆಯುತ್ತಿರುವ ವರ್ಣಭೇದ, ಜಾತಿ ಭೇದ, ಕೋಮುವಾದ ಮೊದಲಾದ ಜಟಿಲ ವಸ್ತು ವಿಷಯಗಳನ್ನು ಬಹಳ ಸರಳವಾಗಿ ಮಕ್ಕಳಷ್ಟೆ ಅಲ್ಲ ಅದನ್ನು ನೋಡುವ ದೊಡ್ಡವರಿಗೂ ಮನಮುಟ್ಟುವಂತೆ ಹೇಳುತ್ತದೆ ಎಂಬುವುದು ಈ ಕೃತಿಯ ವಿಶೇಷವಾಗಿದೆ.
©2024 Book Brahma Private Limited.