ಗಿರೀಶ ಕಾರ್ನಾಡ ಅವರ ಸಮಕಾಲೀನ ಬೆಂಗಳೂರು ಬದುಕನ್ನು ಆಧರಿಸಿ ರಚಿಸಿದ ನಾಟಕ. ಈ ನಾಟಕದ ಬಗ್ಗೆ ಹಿರಿಯ ರಂಗತಜ್ಞ ಕೆ. ಮರುಳಸಿದ್ದಪ್ಪ ಅವರು ’ಬೆಂಗಳೂರು ಮಹಾನಗರದ ಒಡಲಿನಲ್ಲಿ ಹುದುಗಿರುವ ಉದ್ವಿಗ್ನತೆ, ನೋವು-ನಲಿವನ್ನು ಮರೆ-ಮೋಸವನ್ನು, ತಲಸ್ಪರ್ಶಿಯಾಗಿ ಚಿತ್ರಿಸುತ್ತಿರುವ ಈ ನಾಟಕದ ಸಾಮಾಜಿಕ ವ್ಯಾಪ್ತಿ, ವಿಸ್ತಾರ, ಬೆರಗು ಹುಟ್ಟಿಸುವಂತಿದೆ. ನಿರ್ದಿಷ್ಟವಾಗಿ ಬೆಂಗಳೂರಿನ ಬದುಕಿಗೆ ಸಂಬಂಧಿಸಿರುವಂತಿದ್ದರೂ, ಈ ನಾಟಕದ ಕನ್ನಡಿಯಲ್ಲಿ ಭಾರತದ ಯಾವುದೇ ಮಹಾನಗರ ಕಾಣಿಸುವಂತಿದೆ. ದಿಗ್ಭ್ರಮೆ ಕವಿಸುವಂತೆ ಬೆಳೆಯುತ್ತಿರುವ ಮಹಾನಗರಗಳು ಬಿತ್ತುತ್ತಿರುವ ಕನಸು, ನಿರಾಸೆ, ಕಂಬನಿ, ಹಾಸ್ಯ ಸಂಭ್ರಮಗಳೆಲ್ಲ ಇಲ್ಲಿವೆ.
'ಬೆಂದ ಕಾಳು ಆನ್ ಟೋಸ್ಟ್', ಸಂಪೂರ್ಣವಾಗಿ ಇಪ್ಪತ್ತೊಂದನೆಯ ಶತಮಾನಕ್ಕೆ ಸೇರಿದ ನಾಟಕ.. ಗಟ್ಟಿಮುಟ್ಟಾದ ವಸ್ತು ರಚನೆ, ಸಾಹಿತ್ತಯ ರಚನೆಯ ಮೂಲಕವೇ ಅತ್ಯಂತ ಸಂಕೀರ್ಣವಾದ ಇಂದಿನ ಬದುಕನ್ನು ಕಟ್ಟಿ ಕೊಡಲಾಗಿದೆ ಎಂಬುದೇ ಇಲ್ಲಿ ಮಹತ್ವದ ವಿಚಾರವಾಗುತ್ತದೆ’ ಎಂದು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
-
(ಹೊಸತು, ಫೆಬ್ರವರಿ 2013, ಪುಸ್ತಕದ ಪರಿಚಯ)
ಪ್ರಸ್ತುತ ಭಾರತೀಯ ಸಮಾಜದಲ್ಲಿ ಗ್ರಾಮಗಳು ನಿರ್ಲಕ್ಷ್ಯಕ್ಕೊಳಗಾಗಿ ನಗರಗಳು ವೈಭವೀಕರಣ ಗೊಳ್ಳುತ್ತಿವೆ. ಗ್ರಾಮ ಬದುಕು ಅನಾಗರಿಕವೆಂತಲೂ, ನಗರ ಬದುಕು ನಾಗರಿಕವೆಂತಲೂ ಕರೆಸಿಕೊಳ್ಳುತ್ತಿವೆ. ಗ್ರಾಮಗಳಲ್ಲಿ ಸಹಜವಾಗಿರುವ ಸಹಕಾರ, ನಿಸ್ವಾರ್ಥತೆ, ಪ್ರೀತಿ, ನಂಬಿಕೆ, ವಿಶ್ವಾಸಗಳು ನಗರಗಳಲ್ಲಿ ಬಂಡವಾಳವಾಗಿಯೂ, ಮುಖವಾಡವಾಗಿಯೂ, ವಂಚಿಸಲು ಅಸ್ತ್ರವಾಗಿಯೂ ಬಳಕೆಯಾಗುತ್ತಿವೆ. ಹೀಗೆ ಮುಖವಾಡವನ್ನೇ ಬದುಕನ್ನಾಗಿ ಜೀವಿಸುವ ನಗರಗಳ ಕರಾಳ ಮುಖಗಳನ್ನು ಕಾರ್ನಾಡರ 'ಬೆಂದ ಕಾಳು ಆನ್ ಟೋಸ್ಟ್ ಅನಾವರಣಗೊಳಿಸುತ್ತದೆ. ಮಹಾನಗರಗಳಾಗುವ ಧಾವಂತದಲ್ಲಿ ಮುನ್ನುಗ್ಗುತ್ತಿರುವ ಎಲ್ಲಾ ಪಟ್ಟಣಗಳಿಗೂ, ಹಳ್ಳಿಗಳಿಂದ ಬಣ್ಣದ ಕನಸುಗಳನ್ನಿಟ್ಟು ಕೊಂಡು ನಗರಗಳೆಡೆಗೆ ಸಾಗುತ್ತಿರುವ ಜನಸಮುದಾಯಕ್ಕೂ ಎಚ್ಚರಿಕೆಯ ಗಂಟೆಯಾಗಿದೆ. ಇಪ್ಪತ್ತೊಂದನೇ ಶತಮಾನದ ಎಲ್ಲ ವಲಯಗಳು ನಗರಗಳೆಂಬ ನಾಗರಿಕತೆಯ ಕಡೆ ಶರವೇಗದಲ್ಲಿ ಸಾಗುತ್ತಿರುವ ಈ ಪ್ರಸ್ತುತದಲ್ಲಿ ಕಾರ್ನಾಡರ ಈ ನಾಟಕ ನಗರ ಸಮಾಜದ ಎಲ್ಲಾ ಸ್ತರಗಳನ್ನೂ ಕಣ್ಣೆದುರು ನಿಲ್ಲಿಸಿ ದಿಗ್ಧಮೆ ಉಂಟುಮಾಡುತ್ತದೆ. ಹೊಸ ಸಂವೇದನೆಯನ್ನು, ಪರಸ್ಪರಾವಲ೦ಬನೆಯನ್ನು ಮನಗಾಣಿಸುವ ಈ ಕೃತಿ ನೂರಾರು ಕನಸುಗಳನ್ನು ಹೊತ್ತು ಪ್ರಾಮಾಣಿಕತೆಯ ಮುಖವಾಡದಲ್ಲಿ ಹಳ್ಳಿಯಿಂದ ಬಂದ ಮುಗ್ಧರು ಎಲ್ಲೂ ಸಲ್ಲದ ಎಡಬಿಡಂಗಿಗಳಾಗುತ್ತಿರುವ ಸನ್ನಿವೇಶಗಳನ್ನು ಅನಾವರಣಗೊಳಿಸುತ್ತದೆ. ಇಂದಿನ ನಗರವಾಸಿಗಳು ಅನುಭವಿಸುತ್ತಿರುವ ಸಹಿಸಲೇಬೇಕಾಗಿ ಬಂದಿರುವ ಹಿಂಸೆಗಳು, ಅದನ್ನೇ ನಾಗರಿಕತೆ ಎಂದು ಸಮಾಧಾನ ಮಾಡಿಕೊಳ್ಳಬೇಕಾದ ಅನಿವಾರ್ಯತೆಗಳನ್ನು ಕೃತಿ ಮನೋಜ್ಞವಾಗಿ ವಿವರಿಸುತ್ತದೆ.
©2024 Book Brahma Private Limited.