‘ಮಹಾ ಮಹಿಮ ಎಡೆಯೂರು ಸಿದ್ಧಲಿಂಗ ಶಿವಯೋಗಿ’ ಕೃತಿಯು ಬಿ.ಆರ್. ಪೊಲೀಸ್ ಪಾಟೀಲ ಅವರ ನಾಟಕ ಪ್ರಕಾರ ಸಾಹಿತ್ಯವಾಗಿದೆ.
ವಚನದ ಮೂಲಕ ಸಿದ್ಧಲಿಂಗ ಶಿವಯೋಗಿಗಳ ಬಗ್ಗೆ ಹೀಗೆ ಹೇಳಲಾಗಿದೆ;
ಸೂರ್ಯನಿಂದ ತೋರಿದ ಕಿರಣಗಳಿಗೂ
ಆ ಸೂರ್ಯನಿಗೂ ಭಿನ್ನವುಂಟೇ?
ಚಂದ್ರನಿಂದ ತೋರಿದ ಕಲೆಗೂ ಆ ಚಂದ್ರನಿಗೂ ಭಿನ್ನವುಂಟೆ?
ಅಗ್ನಿಯಿಂದ ತೋರಿದ ಕಾಂತಿಗೂ ಆ ಅಗ್ನಿಗೂ ಭಿನ್ನವುಂಟೆ?
ಜ್ಯೋತಿಯಿಂದ ತೋರಿದ ಬೆಳಗಿಗೂ ಆ ಜ್ಯೋತಿಗೂ ಭಿನ್ನವುಂಟೆ?
ಅಗಮ್ಯ, ಅಗೋಚರ, ಅಪ್ರಮಾಣ ಅಪ್ರತಿಮ ಮಹಾಲಿಂಗದಲ್ಲಿ
ಜ್ಯೋತಿಯಿಂದ ಜ್ಯೋತಿ ಉದಯಿಸಿದಂತೆ ಉದಯಿಸಿದ
ಶರಣಂಗೂ ಆ ಮಹಾಲಿಂಗಕ್ಕೂ ಭಿನ್ನವುಂಟೆ?
ಇದೆ ಬೇಕೆಂಬ ಅರೆಮರುಳುಗಳನೇನೆಂಬೆನಯ್ಯ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.
ಇಂಥ ಭೇದವಿಲ್ಲದ ಮಹಾಬೆಳಗು ತೋಂಟದ ಸಿದ್ಧಲಿಂಗಯತಿ. ಆಸೇತು ಹಿಮಾಚಲದವರೆಗೆ ಸಂಚಾರ ಮಾಡಿ ವಚನಧರ್ಮಪ್ರಚಾರ ಕಾರ್ಯಕೈಗೊಂಡ ಮಹಾಮಹಿಮನೀತ. ಇವರದು ವಚನ ವಾಙ್ಮಯದ ಎರಡನೆ ಕಾಲಘಟ್ಟ. ನಿಂತು ಹೋದ ವಚನ ವಾಙ್ಮಯ ಇವರ ಕಾಲದಲ್ಲಿ (ಹದಿನೈದು ಹದಿನಾರನೇ ಶತಮಾನದಲ್ಲಿ ಮತ್ತೆ ಆರಂಭವಾಯಿತು. ವಚನಕೃಷಿ ಮಾತ್ರ ಅಲ್ಲ, ಅವುಗಳ ವಿಂಗಡಣೆ, ಪರಿಷ್ಕರಣೆ, ಸಂಶೋಧನೆ ಹಾಗೂ ಸಂಪಾದನಾ ಕಾರ್ಯಗಳು ತುಂಬಾ ಜೋರಾಗಿಯೇ ನಡೆದುವು. ಮತ್ತು ವಚನಧರ್ಮ ಪ್ರಸಾರಕ್ಕಾಗಿ ನೂರೊಂದು ವಿರಕ್ತರೊಡಗೂಡಿ ಸಿದ್ಧಲಿಂಗೇಶ್ವರರು ದೇಶದಾದ್ಯಂತ ಸಂಚಾರ ಮಾಡಿ ಬಂದರು ಎಂಬುದಕ್ಕೂ ಪುರಾವೆಗಳು ದೊರಕುತ್ತವೆ ಹಾಗೂ ಇವರ ಈ ಯುಗ ಎರಡನೆಯ ಬಸವಯುಗ ಎಂದು ಹೆಸರಾಯಿತು. ಏಳುನೂರಕ್ಕಿಂತ ಹೆಚ್ಚು ಸ್ವರಚಿತ ವಚನಗಳನ್ನೊಳಗೊಂಡ ಷಟ್‌ಸ್ಥಲ ಜ್ಞಾನ ಸಾರಾಮೃತ ಇವರ ವಚನರಚನೆ ಹಾಗೂ ಅನುಭಾವ ವಿಸ್ತಾರಕ್ಕೆ ಹಿಡಿದ ಕನ್ನಡಿ. ಈ ವಚನಗಳಿಂದಲೇ ಇವರ ಆನುಭಾವಿಕ ಜೇಷ್ಠತೆಯ ಅನಾವರಣವಾಗುತ್ತದೆ ಎಂದು ಇಲ್ಲಿ ತಿಳಿಸಲಾಗಿದೆ.
©2024 Book Brahma Private Limited.