1948ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡು ನಂತರ ನಾಲ್ಕಕ್ಕಿಂತಲೂ ಹೆಚ್ಚು ಬಾರಿ ಮರು ಮುದ್ರಣಗೊಂಡಂತಹ ನಾಟಕ ಬಲಿದಾನ. ಮೊದಲು ಕಾವ್ಯಾಲಯ ಮೈಸೂರು, ಇಲ್ಲಿಂದ ಪ್ರಕಟಗೊಂಡ ಈ ಪುಸ್ತಕ ನಂತರ ುದಯರವಿ ಪ್ರಕಾಶನದಿಂದ ಪ್ರಕಟವಾಯಿತು. ಈ ನಾಟಕವು ಮೂರು ದೃಶ್ಯಗಳನ್ನು ಒಳಗೊಂಡಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಕಥಾವಸ್ತುವನ್ನು ಹೊಂದಿರುವ ಈ ನಾಟಕ ಜನಮನ್ನಣೆಗೆ ಪಾತ್ರವಾದ ನಾಟಕ. ಭಾರತ ಸುತ ಮತ್ತು ಭಾರತಾಂಬೆಯ ನಡುವೆ ನಡೆಯುವಂತಹ ಸನ್ನಿವೇಷವನ್ನು ಈ ನಾಟಕದಲ್ಲಿ ಬಹಳ ಸ್ವಾರಸ್ಯಕರವಾಗಿ ವಿವರಿಸಲಾಗಿದೆ. ಪರಕೀಯರ ದಾಳಿಯಿಂದ ನಲುಗಿದ ಭಾರತಾಂಬೆ ತನ್ನ ಸಂಕಟವನ್ನು ಹೊರಹಾಕುವಂತಹ ಮೊದಲ ದೃಶ್ಯ ಭಾರತದಲ್ಲಿ ಆಂಗ್ಲರ ಆಳ್ವಿಕೆಯ ಭೀಕರತೆಯನ್ನು ಓದುಗರಿಗೆ ವಿವರಿಸುತ್ತದೆ. ಭರತಸುತ ಪಾತ್ರ ಪ್ರತಿಯೊಬ್ಬ ಭಾರತೀಯನನ್ನು ಧೃಷ್ಟಿಯಲ್ಲಿಟ್ಟುಕೊಂಡು ಬರೆದಂತಹ ಪಾತ್ರವಾಗಿ ಕಂಡುಬರುತ್ತದೆ. ಎರಡನೇ ದೃಶ್ಯದಲ್ಲಿ ಭಾರತಾಂಬೆಯನ್ನು ವರ್ಣಿಸುವ ವಂದೇ ಮಾತರಂ ಗೀತೆಯ ಸ್ಪಷ್ಟವಾದ ಭಾವಾರ್ಥವನ್ನು ವಿವರಿಸಲಾಗಿದೆ. ಸ್ವಾತಂತ್ರ್ಯಕ್ಕಾಗಿ ಮಡಿದವರ ಪ್ರತಿಯಾಗಿ ನಾಟಕದಲ್ಲಿ ಬರುವಂತಹ ಛಾಯಾಧ್ವನಿ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರ ಪ್ರತಿನಿಧಿಯಾಗಿ ಈ ನಾಟಕದಲ್ಲಿ ಓದುಗರೆದುರು ನಿಲ್ಲುತ್ತದೆ. ಅಂತಿಮ ದೃಶ್ಯದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದುದರ ನಿರೂಪಣೆ ಪ್ರತಿಯೊಬ್ಬ ಓದುಗರಿಗೂ ಭಾವಪರವಶರನ್ನಾಗಿ ಮಾಡುತ್ತದೆ.
©2024 Book Brahma Private Limited.