‘ಬಸವನೆಂಬ ಬೆಳಕು’ ಎಸ್.ಬಸವರಾಜ ಹೇರೂರು ಅವರ ನಾಟಕಸಂಕಲನವಾಗಿದೆ. ಬಸವಣ್ಣನವರ ಬದುಕಿನ ಮುಖ್ಯ ಘಟ್ಟವಾದ ಲಾವಣ್ಯ ಹಾಗೂ ಶೀಲವಂತರ ಮದುವೆವರೆಗಿನ ಭಾಗವನ್ನು ನಾಟಕ ಒಳಗೊಂಡಿದೆ. ಸಮಾಜದ ಅತ್ಯಂತ ಉನ್ನತ ಸ್ಥಾನವೆನಿಸಿದ ಮೇಲ್ಪಾತಿಯ ಮಧುವರಸನ ಮಗಳಾದ ತೀರಾ ಕೆಳಸ್ತರದಲ್ಲಿರುವ ಹರಳಯ್ಯನ ಮಗನಾದ ಶೀಲವಂತನಿಗೂ ನಡೆದ ಮದುವೆಯದು. ಈಗಲೂ ಇಂಥ ಸಂಬಂಧಗಳಿಗೆ ರಕ್ತಲೇಪನವೇ ಆಗತೊಡಗಿರಬಹುದಾದ ಪರಿಸ್ಥಿತಿಯಿರುವಾಗ ಬಸವಣ್ಣನವರು ಎಂಟುನೂರು ವರ್ಷಗಳ ಹಿಂದೆಯೇ ಇಂಥ ಮದುವೆಗೆ ಪುರಸ್ಕಾರಿಸಿದ್ದರೆಂದು ತಿಳಿದಾಗ ಅವರ ಆಗಾಧ ಧೀಶಕ್ತಿಯ ಅರಿವಾಗದಿರದು. ಅಂಥ ಅರಿವನ್ನು ಕೊಡುವತ್ತ ಈ 'ಬಸವ ಬೆಳಕು' ಯಶಸ್ವಿಯಾಗಿದೆಯೆನ್ನಬಹುದು. ಬಸವಣ್ಣನವರು ಪ್ರಭುತ್ವದ ಬಗ್ಗೆ ಇಲ್ಲಿ ಹೇಳಿರುವ ಮಾತು ಈ ಕಾಲಕ್ಕಂತೂ ಅತ್ಯಂತ ಸೂಕ್ತವಾಗಿದೆ. 'ಪ್ರಜೆಗಳ ಸೇವೆ ಮಾಡದೇ ಪ್ರಧಾನಿಯಾಗುವುದೆಂದರೆ ಬದುಕಿಯೂ ಸತ್ತಂತೆ. ದೀನ ದಲಿತರ ಸೇವೆ ಮಾಡಲಾಗದಂಥ ಈ ಪ್ರಧಾನಿ ಪಟ್ಟ ನನಗೆ ಬೇಡಾ ನನಗೆ ಪ್ರಧಾನಿ ಪಟ್ಟಕ್ಕಿಂತ ದೀನ ದಲಿತರ ಸೇವೆಯೇ ಬೇಕು. ಅವರ ಸೇವೆ ಮಾಡದ ಅಧಿಕಾರ ಅಧಿಕಾರವೇ ಅಲ್ಲ ಅಧಿಕಾರದಲ್ಲಿರುವವರಿಗೆ ಅವರ ಕರ್ತವ್ಯದ ಬಗ್ಗೆ ಎಚ್ಚರಿಸುವಂಥ ಲೇಖಕರ ಈ ಮಾತುಗಳು ಮಾನವೀಯ ಕಳಕಳಿಯನ್ನು ಸೂಚಿಸುತ್ತದೆ. ಪ್ರಭುತ್ವದಲ್ಲಿರುವವರಿಗೆ ಈ ಮಾತು ಅರ್ಥವಾಗಬೇಕಷ್ಟೆ. ಅನುಭವ ಮಂಟಪದಲ್ಲಿ ಅಲ್ಲಮ ಮತ್ತು ಅಕ್ಕಮಹಾದೇವಿ, ಹರಳಯ್ಯ, ಮಧುವರಸರ ಪ್ರಸಂಗ, ಬಿಜ್ಜಳ, ಬಸವಣ್ಣರ ಸನ್ನಿವೇಶಗಳು ಚೇತೋಹಾರಿಯಾಗಿವೆ. ಬಸವಣ್ಣನ ಮಾತುಗಳು ಕೆಲವೆಡೆ ಬಹುದೀರ್ಘವೆನಿಸಿವೆ. ಅವುಗಳನ್ನು ಅಲ್ಲಲ್ಲಿ ತುಂಡರಿಸಿ ಬೇರೆ ಪಾತ್ರಗಳಿಗೂ ಅವಕಾಶ ನೀಡಿ ಮುಂದೆ ಮಾತುಗಳನ್ನು ಬೆಳೆಸಬಹುದಿತ್ತೇನಿಸುತ್ತದೆ. ಹೀಗೆ ಪಾತ್ರ ಪೋಷಣೆಯೊಂದಿಗೆ ದೃಶ್ಯಗಳನ್ನು ಅನುಲಕ್ಷಿಸಬಹುದಿತ್ತು. ಅಲ್ಲಲ್ಲಿ ವಚನಗಳ ಬಳಕೆ ಸೂಕ್ತವಾಗಿದೆ. ಅಸಹ್ಯ, ಅತಿರೇಕ, ಆಡಂಬರ, ಆಶ್ಲೀಲ ದ್ವಂದಾರ್ಥಗಳೇ ವಿಜೃಂಭಿಸುತ್ತಿರುವ ಪ್ರಸ್ತುತ ದಿನಗಳಲ್ಲಿ ಶರಣ ಚಿಂತನೆಯ ಇಂಥ ಕೃತಿಗಳು ಭಿನ್ನವಾಗಿ ನಿಲ್ಲುತ್ತವೆ.
ಎಸ್. ಬಸವರಾಜ ಹೇರೂರು ಅವರು ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯ ಹೇರೂರಿನವರು. ತಂದೆ ದಿವಂಗತ ವೀರಣ್ಣ ಸಿದ್ದಾಪುರ, ತಾಯಿ ದಿವಂಗತ ಮಲ್ಲಮ್ಮ. ವೃತ್ತಿ ವ್ಯವಸಾಯ. ಸಾಹಿತ್ಯದಲ್ಲಿ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯಿದ್ದು ತಾಲೂಕ ಸಿರಿಗನ್ನಡ ವೇದಿಕೆ ಗಂಗಾವತಿಯ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ ಮರಳಿ ಹೋಬಳಿಯ ನಿಕಟಪೂರ್ವ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಶಸ್ತಿಗಳು: ಕಾಯಕಯೋಗಿ ಶ್ರೀಚನ್ನಬಸವ ಸ್ವಾಮಿ ರಾಜ್ಯಮಟ್ಟದ ಪ್ರಶಸ್ತಿ(2014-15), ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ.(2016-17), ರಂಗಚೇತನ ಪ್ರಶಸ್ತಿ(2020-21) ಕೃತಿಗಳು: ಶಾಂತಿಯೇ ಸಂಸಾರದ ಸಂಪತ್ತು (ಸಾಮಾಜಿಕ ನಾಟಕ), ಕೌರವರು ಇನ್ನೂ ಸತ್ತಿಲ್ಲ (ಸಾಮಾಜಿಕ ನಾಟಕ), ಶಿವಶರಣ ನುಲಿಯ ಚಂದಯ್ಯ (ನಾಟಕ), ವೀರ ಪೃಥ್ವಿರಾಜ (ಚಾರಿತ್ರಿಕ ನಾಟಕ), ಬಸವನೆಂಬ ಬೆಳಕು (ನಾಟಕ). ...
READ MORE