ಲೇಖಕಿ ಲಲಿತಾ ಸಿದ್ಧಬಸವಯ್ಯ ಅವರ ನಾಟಕ ‘ಇನ್ನೊಂದು ಸಭಾಪರ್ವ’. ಮಹಾಭಾರತದ ದ್ರೌಪದಿಯನ್ನು ಮುಖ್ಯಭೂಮಿಕೆಯನ್ನಾಗಿಸಿಕೊಂಡು ರಚಿಸಿರುವ ನಾಟಕವಿದು. ಈ ಕೃತಿಗೆ ಅರವಿಂದ ಚೊಕ್ಕಾಡಿಯವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ದ್ರೌಪದಿ ಅಗ್ನಿಯ ಮಗಳು. ದಹಿಸುವುದು ಬೆಂಕಿಯ ಗುಣ..ಆದರೆ ದಹಿಸುವುದಷ್ಟೆ ಅಗ್ನಿಯ ಗುಣವಲ್ಲ. ಬೆಳಗಿಸುವುದು ಕೂಡಾ ಅಗ್ನಿಯ ಗುಣವೇ, ಶುದ್ಧೀಕರಿಸುವುದು ಕೂಡಾ ಅಗ್ನಿಯ ಗುಣವೇ..ಲಲಿತಾ ಸಿದ್ಧಬಸವಯ್ಯ ಅವರ ಇನ್ನೊಂದು ಸಭಾಪರ್ವದಲ್ಲಿ ದ್ರೌಪದಿಯ ವ್ಯಕ್ತಿತ್ವವನ್ನು ಬೆಳಗಿಸುವ, ಶುದ್ಧೀಕರಿಸುವ ರೂಪದಲ್ಲಿ ಕಂಡು ಕೊಳ್ಳಲಾಗಿದೆ ಎಂದಿದ್ದಾರೆ ಅರವಿಂದ ಚೊಕ್ಕಾಡಿ. ದ್ರೌಪದಿಯ ಸೀರೆಯನ್ನು ತುಂಬಿದ ಸಭೆಯಲ್ಲಿ ಸೆಳೆದಾಗ ಹತ್ತಿಕೊಂಡ ಜ್ವಾಲೆ ವ್ಯಾಪಿಸಬೇಕಿತ್ತಲ್ಲವೇ ಅದು ಬೆಳಗಿಸುವ ರೂಪವನ್ನು ಪಡೆದುಕೊಂಡದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರ-ತಾಯ್ತನ. ಅದು ಈ ಕೃತಿಯು ಹುಡುಕಾಡಿದ ಕಂಡುಕೊಂಡ ಉತ್ತರವೂ ಹೌದು. ಬಹುಶಃ ಜೀವನ ಸಂದರ್ಭದಲ್ಲಿ ಕಂಡುಕೊಳ್ಳಬಹುದಾದ ಉತ್ತರವೂ ಹೌದು. ನಾಟಕವು ಒಂದು ಸತ್ಯವನ್ನು ಹೇಳಲು ತೊಡಗುತ್ತದೆ. ಅದೇನೆಂದರೆ- ಒಳ್ಳೆಯವರಾಗಿರುವುದೆಂದರೆ ನಮ್ಮ ಮೇಲೆ ನಡೆಯುವ ಶೋಷಣೆಯನ್ನು ಅನುಭವಿಸಿಕೊಂಡೇ ಬಾಳುವುದಲ್ಲ’ ಎಂದು ನಾಟಕದ ಪೂರ್ಣ ಎಳೆಯೇ ಈ ಪ್ರತಿರೋಧವಾಗಿದೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ ಲೇಖಕ ಅರವಿಂದ ಚೊಕ್ಕಾಡಿ.
©2024 Book Brahma Private Limited.