‘ಕಂಚುಗನ್ನಡಿ’ ಲೇಖಕಿ ಉಷಾ ನರಸಿಂಹನ್ ಅವರ ನಾಟಕ. ಇದು ಮುಂಬೈ ಮೂಲದ ಮೈಸೂರು ಅಸೋಸಿಯೇಷನ್ ನಿಂದ 2019ರ ನೇಸರು ಜಾಗತಿಕ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ನಾಟಕವಿದು. ಈ ಕೃತಿಗೆ ಕವಿ ಬಿ.ಕೆ. ಮೀನಾಕ್ಷಿ ಅವರು ಬೆನ್ನುಡಿ ಬರೆದು ‘ಮೂರು ಅಂಕಗಳುಳ್ಳ ಈ ನಾಟಕ ತುಂಬ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಭಾಷಾಕ್ಲಿಷ್ಟತೆಯ ಗೊಡವೆಯಿಲ್ಲ. ಹಾಗಾಗಿ ಅರ್ಥೈಕ್ಕೆ ಅತ್ಯಂತ ಸುಲಭವಾಗಿ ಒದಗುತ್ತದೆ. ಒಂದು ಪುರಾಣ ಕಾಲದ ಹೆಣ್ಣನ್ನು, ಅಂದಿನ ಅವಳ ಸ್ಥಾನಮಾನಗಳನ್ನು ಅತ್ಯಂತ ಸರಳವಾಗಿ ಕಟ್ಟಿಕೊಡುವುದಲ್ಲದೆ, ಘಟಿಸುವ ಘಟನೆಗಳ ಚಿತ್ರಣ ಕೂಡ ಮನಸಿಗೆ ನಾಟುವಂತಿದ್ದು, ಇಂದಿಗೂ ಕೂಡ ಕಣ್ಣ ಮುಂದೆ ನಾಟ್ಯವಾಡುತ್ತಿರುವುದು ಸ್ತ್ರೀಯ ತಲ್ಲಣಗಳು ಅಂದು ಇಂದು ಎಂದೆಂದೂ ಹೀಗೆ ಮುಂದುವರೆಯುತ್ತವೆ ಎಂಬುದನ್ನು ಈ ನಾಟಕ ಸಾಬೀತು ಪಡಿಸುತ್ತದೆ’ಎಂದು ಪ್ರಶಂಸಿಸಿದ್ದಾರೆ.
‘ಕನ್ನಡಿ ಮನುಷ್ಯನ ಚಂಚಲತೆಗೆ ಸಾಂಕೇತಿಕ ನಿದರ್ಶನವಾಗಿ ತೆಗೆದುಕೊಳ್ಳಲಾಗಿದ್ದು ಅಹಲ್ಯೆಯ ದುರಂತಗಳಿಗೆ ಈ ಕನ್ನಡಿಯೇ ನಾಂದಿಯಾಗು್ತದೆ. ಕನ್ನಡಿಯ ಮೋಹಕ್ಕೆ ಬಿದ್ದವರಿಗೆ ಯಾರ ವಿವೇಕದ ಮಾತು ಯಾವೊತ್ತಿಗೂ ರುಚಿಸುವುದಿಲ್ಲ ಎಂಬುದನ್ನು ತುಂಬ ಚೆನ್ನಾಗಿ ನಿರೂಪಿಸಿದ್ದಾರೆ. ಸಂಚಿಗೆ ಮುನ್ನುಡಿ ಹೊಂಚುತಿದೇ ಎಂಬ ಒಂದು ಸಾಲಿನಲ್ಲಿ ಮುಂದಿನ ಭವಿಷ್ಯವನ್ನು ಸೂಚ್ಯವಾಗಿಸಿದ್ದಾರೆ. ಸಂಭಾಷಣಾ ಧಾಟಿ, ಸಮಯೋಚಿತ ಮಾತುಕತೆ, ಅಹಲ್ಯೆಯ ಮಾನಸಿನ ತುಮುಲಗಳು. ಅವಳನ್ನು, ಅವಳ ಅಂತರಂಗವನ್ನು ಆಪ್ತವಾಗಿ ಕಾಣುವ ಮಾಧವಿ ಪಾತ್ರದ ಕಲ್ಪನೆ, ನಮ್ಮ ಮುಂದೆ ಮೂಡಿಬಂದಾಗ, ಅಹಲ್ಯೆಯ ಬಗೆಗಿನ ಅವರ ಕಾಳಜಿ ನಿಜಕ್ಕೂ ಅಹಲ್ಯೆಗೆ ಅವಶ್ಯವಿತ್ತು ಎನಿಸುತ್ತದೆ. ಎಲ್ಲಾ ಪಾತ್ರಗಳ ನಿರೂಪಣೆ ತಂತಾನೆ ರೂಪಿತಗೊಂಡಿವೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ದೊರೆತಿದೆ.
©2025 Book Brahma Private Limited.