ಡಾ. ಚಂದ್ರಶೇಖರ ಕಂಬಾರರ 'ಜೈಸಿದ ನಾಯ್ಕ್' ನಾಟಕದ ವಸ್ತು ರಾಜಕೀಯಕ್ಕೆ ಸಂಬಂಧಿಸಿದ್ದು. ಶಿವಾಪುರದಲ್ಲಿ ದೇಸಾಯಿಯದೇ ದರ್ಬಾರು. ಆದರೆ ಅಲ್ಲಿ ಸಿದ್ದನಾಯ್ಕ ಎನ್ನುವವನು ಶೋಷಣೆ ದಬ್ಬಾಳಿಕೆಗಳ ವಿರುದ್ಧ ದಂಗೆ ಏಳಲು ಊರಿನ ಜನರನ್ನು ಪ್ರಚೋದಿಸುತ್ತಾನೆ. ಅವನ ಕಾರ್ಯಕ್ಕೆ ಮಠದ ಗುರುವಯ್ಯನ ಬೆಂಬಲವೂ ಇದೆ. ರೊಚ್ಚಿಗೆದ್ದ ಜನರ ಗುಂಪು ದೇಸಾಯಿಯನ್ನು ಕೊಂದು ಹಾಕುತ್ತದೆ. ಆದರೆ ಸಮಸ್ಯೆ ಅಂತ್ಯಗೊಳ್ಳುವ ಬದಲು ಇನ್ನಷ್ಟು ಜಟಿಲಗೊಳ್ಳುತ್ತದೆ. ಒಂದು ಕಡೆ ಗುರುವಯ್ಯ ಕಾರಭಾರಿಗಳ ಸಂಚು, ಪಂಚರ ಸ್ವಾರ್ಥ, ರಾಜಕೀಯವಾದರೆ ಮತ್ತೊಂದು ಕಡೆ ಸಿದ್ದನಾಯಕನ ಮುಗ್ಧತೆ ಮತ್ತು ಪ್ರಾಮಾಣಿಕತೆ ಶಿವಾಪುರದ ಜನಜೀವನದಲ್ಲಿ ಕಂಪನವನ್ನುಂಟು ಮಾಡುತ್ತವೆ.
ಉರಿನಿಂಗನ ತಾಯಿ ತನ್ನ ಸೊಸೆ ಚಿನ್ನಿಯ ಜೊತೆಯಲ್ಲಿ ಊರಿನಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಮಾತಾಡುವ ದೃಶ್ಯದೊಂದಿಗೆ ನಾಟಕ ಆರಂಭವಾಗುತ್ತದೆ. ಊರನ್ನು ಬಿಟ್ಟು ಗುಳೆ ಹೊರಟಿರುವ ಜನರನ್ನು ತಡೆಯುತ್ತ ಬೆಳಗಾವಿಗೆ ಸಾಲಿ ಕಲಿಯಲು ಹೋಗಿದ್ದ ಸಿದ್ದನಾಯಕ ಜನರ ಗುಂಪಿನೊಂದಿಗೆ ಬರುತ್ತಾನೆ. ದೇಸಾಯರ ಕಾರಭಾರಿ ಮತ್ತು ಬಂದೂಕಿನವರನ್ನು ಅವರ ಕೈಯಲ್ಲಿಯ ಬಂದೂಕಗಳನ್ನು ಕಸಿದು ಸಿದ್ದನಾಯಕ ಹೊಡೆದೋಡಿಸುತ್ತಾನೆ. ಆದರೆ ಸ್ವತಃ ಬರುವ ದೇಸಾಯಿ ಚಿನ್ನಿಯನ್ನು ಹೊತ್ತೊಯ್ಯುತ್ತಾನೆ. ಸಿದ್ದನಾಯ್ಕನು ದೇಸಾಯಿ ದೌರ್ಜನ್ಯದ ವಿರುದ್ಧ ಬಂಡೇಳುತ್ತಾನೆ. ವಾಡೆಯ ಮೇಲಿನ ದಾಳಿ ಮೊದಲ ಸಲ ನಿಷ್ಕ್ರಿಯಗೊಳ್ಳುತ್ತದೆ. ಗುರುವಯ್ಯ ಬಂದೂಕಿನವರ ಜೊತೆಗೆ ಬಂದು ಸಿದ್ದನಾಯ್ಕನ ಕ್ರಾಂತಿಯಲ್ಲಿ ಸೇರಿಕೊಳ್ಳುತ್ತಾನೆ. ಸಿದ್ಧನಾಯ್ಕ ಎರಡನೇ ಸಲ ವಾಡೆಯ ಮೇಲೆ ದಾಳಿ ಮಾಡಿ ದೇಸಾಯಿಯನ್ನು ಕೊಲ್ಲುತ್ತಾನೆ. ಜನರೆಲ್ಲ ಅವನನ್ನು ಜಯಿಸಿದ ನಾಯ್ಕನೆಂದು ಕೊಂಡಾಡುತ್ತಾರೆ.
ದೇಸಾಯಿಯ ಜಮೀನು ಊರವರೆಲ್ಲಾ ಹಂಚಿಕೊಳ್ಳುವ ವಿಷಯದಲ್ಲಿ ಸಿದ್ದನಾಯ್ಕ ಮತ್ತು ಊರವರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಉರಿನಿಂಗನ ಹೆಂಡತಿ ಚಿನ್ನಿಯ ವಿಷಯದಲ್ಲಿ ಸಿದ್ದನಾಯ್ಕ ಮತ್ತು ಊರವರಲ್ಲಿ ಭಿನ್ನಾಭಿಪ್ರಾಯ ಬರುತ್ತದೆ. ಉರಿನಿಂಗ ಚಿನ್ನಿಯನ್ನು ನಿರಾಕರಿಸಿದಾಗ ಸಿದ್ದನಾಯ್ಕ ತನ್ನ ಮನೆಯಲ್ಲಿಟ್ಟುಕೊಳ್ಳುತ್ತಾನೆ. ಇದರಿಂದ ಸಮಸ್ಯೆ ಉಲ್ಬಣಿಸುತ್ತದೆ.
ಕಳಂಕಿತ ವ್ಯಕ್ತಿತ್ವವನ್ನು ಊರಿನ ಜನರು ಇಷ್ಟಪಡುವುದಾದರೆ ನಾನು ಅದಕ್ಕೆ ಸಿದ್ಧನಿರುವೆನೆಂದು ಸಿದ್ದನಾಯ್ಕ ಮತ್ತೊಬ್ಬ ದೇಸಾಯಿಯಾಗಿ ಪರಿಣಮಿಸುತ್ತಾನೆ.
'ಜೈಸಿದ ನಾಯಕ' ವಿಡಂಬಣಾತ್ಮಕ ನಾಟಕ, ಜಮೀನ್ದಾರ ದೇಸಾಯಿ, ಆತನ ಅದೇ ವ್ಯವಸ್ಥೆ ಇಲ್ಲಿ ಮುಂದುವರೆಯುತ್ತದೆ. ಭ್ರಷ್ಟತನವನ್ನು ತುಳಿಯಬೇಕೆಂಬ ಹಂಬಲದಿಂದ ಕ್ರಾಂತಿಯುಂಟಾದರೂ ನಂತರ ದೇಸಾಯಿಯ ಕ್ರೂರ ಶೋಷಣೆ ನಿರ್ನಾಮಗೊಳಿಸಬೇಕೆಂಬ ಸಿದ್ದನಾಯಕನ ರೋಮ್ಯಾಂಟಿಕ್ ಬಂಡಾಯ ಉದ್ದೇಶಿತ ಆಶಯಗಳಿಗೆ ವಿರುದ್ಧವಾಗಿ ನಿಲ್ಲುತ್ತದೆ. ಅಂದರೆ ನಾಟಕದ ದ್ವಿತೀರ್ಯಾರ್ಧದಲ್ಲಿ ದೇಸಾಯಿಯ ಸಾವಿನ ನಂತರ ಉದ್ಭವವಾಗುವ ಪರಿಸ್ಥಿತಿ ಕ್ರಮೇಣ ಸಿದ್ದನಾಯಕ ಇನ್ನೊಬ್ಬ ದೇಸಾಯಿಯಾಗುವ ವ್ಯಂಗ್ಯ ನಾಟಕದ ಶಕ್ತಿಯಾಗಿದೆ.
©2024 Book Brahma Private Limited.