‘ ವಿರುದ್ಧ’ ಕೃತಿಯು ಅ. ರಾ ಶ್ರೀನಿವಾಸ ಅವರ ನಾಟಕ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ನಿಸರ್ಗ ಅವರು, ’ಹೆಚ್ಚಿನವರೆಗೂ ಮೌನವಾಗಿರುವಾಗ ಶ್ರೀನಿವಾಸ ಮೌನ ಮುರಿದು ಮಾತಾಡಿದ್ದಾರೆ. ಈ ಹೊಸ ನಾಟಕದಲ್ಲಿ ಅವರು ಯಾವತ್ತೂ ಮೌನವಾಗಿದ್ದವರಲ್ಲ. ಜಡ ಬಡಿದ ಸಮಾಜವನ್ನು ಎಚ್ಚರಿಸುವಲ್ಲಿ ಅವರು ಪ್ರಕಟಿಸುತ್ತಿದ್ದ ‘ಮಣ್ಣಿನ ವಾಸನೆ’ ವಾರ ಪತ್ರಿಕೆ ತನ್ನದೇ ಸಾಗರ ಪ್ರಾಂತ್ಯದಲ್ಲಿ ಅದೆಷ್ಟು ಕೆಲಸ ಮಾಡಿದೆ : ಮತ್ತು ಅದು ಕನ್ನಡದಲ್ಲಿ ಒಂದು ಪ್ರಬುದ್ಧ ಪತ್ರಿಕೆಯಾಗಿ ಹೊರಬರುತ್ತಿತ್ತು ಅನ್ನುವುದನ್ನು ನಾವಿಲ್ಲಿ ಮರೆಯಬಾರದು. ಆ ಕಾಲಕ್ಕೆ ಸಮಾಜದಲ್ಲಿ ಆಗುತ್ತಿದ್ದಾಗ, ಮನುಕೋಟಿಗೆ ಸಲ್ಲದ್ದು ನಡೆದಾಗ, ಶ್ರೀನಿವಾಸ ಯಾವತ್ತೂ ತನ್ನ ಹರಿತ ಲೇಖನಿಯ ಮೂಲಕ ಮಾತಾಡದೇ ಇದ್ದದ್ದಿಲ್ಲ. ಅವರೊಳಗಿನಈ ಪ್ರತಿಭಟನೆಯೇ ಅವರನ್ನು ಒಳ್ಳೆಯ ಪತ್ರಕರ್ತನನ್ನಾಗಿ ಮಾಡಿತು. ಒಳ್ಳೆಯ ಕಾದಂಬರಿಗಳನ್ನು ಬರೆಸಿತು. ಒಳ್ಳೆಯ ನಾಟಕಗಳನ್ನು ಸೃಷ್ಟಿಸಿತು’ ಎಂದಿದ್ದಾರೆ.
‘ವಿರುದ್ಧ ’ಕೃತಿಯ ವಿಮರ್ಶೆ
ಪ್ರತಿಭೆ ಮತ್ತು ಪ್ರಭುತ್ವದ ನಡುವೆ ಸದಾ ಸಂಘರ್ಷ ಇದ್ದೇ ಇರುತ್ತದೆ. ಅದು ನೇರವಾಗಿಯೂ ಇರಬಹುದು, ಪರೋಕ್ಷವಾಗಿಯೂ ಇರಬಹುದು. ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಪಂಪನ ಕಾಲದಿಂದಲೂ ಇಂತಹ ಪ್ರತಿರೋಧವನ್ನು ಗುರುತಿಸಲಾಗಿದೆ. ಭಾರತದಲ್ಲಿ ಈಗಲೂ ಪ್ರಭುತ್ವದ ವಿರುದ್ಧ ಮುಕ್ತವಾಗಿ ಮಾತನಾಡುವ ಸ್ಥಿತಿ ಇಲ್ಲ. ಇಂತಹ ಸಂದರ್ಭದಲ್ಲಿ ಪ್ರಶ್ನಿಸುವ ಅಗತ್ಯ ಎಷ್ಟಿದೆ ಮತ್ತು ಪ್ರಶ್ನಿಸುವ ಬಗೆ ಹೇಗೆ ಎಂಬುದನ್ನು ಪತ್ರಕರ್ತ ಅ.ರಾ.ಶ್ರೀನಿವಾಸ ಅವರ 'ವಿರುದ್ಧ’ ನಾಟಕ ಕಟ್ಟಿಕೊಡುತ್ತದೆ
ಯಾರೂ ಮಾತನಾಡದ ಸ್ಥಿತಿಯಲ್ಲಿ ಇರುವಾಗ ಮತ್ತು ಮಾತನಾಡುವವರ ದನಿ ಕೇಳದೇ ಇರುವಾಗ ಗಟ್ಟಿಯಾಗಿ ಮಾತನಾಡುವವರ ಅವಶ್ಯಕತೆ ಇದೆ ಎಂದೇ ನಾಟಕ ಆರಂಭವಾಗುತ್ತದೆ. ಪ್ರಭುತ್ವದ ವಿರುದ್ಧ ಏನು ಮಾತನಾಡಿದರೂ ಅದು ದೇಶದ್ರೋಹವಾಗುವ ಸ್ಥಿತಿಯನ್ನು ಅದು ಎತ್ತಿ ತೋರುತ್ತದೆ. ನಾಟಕದಲ್ಲಿ ಬಳಕೆಯಾದ ರೂಪಕಗಳು ಮತ್ತು ಪ್ರತಿಮೆಗಳು ನಮ್ಮನ್ನು ಕಾಡುವ ವಿಷಯಗಳ ಕುರಿತು ರಂಗದ ಮೇಲೆ ಹೆಚ್ಚು ಗಟ್ಟಿಯಾಗಿ ಮಾತನಾಡುವ ಸಾಧ್ಯತೆಗಳನ್ನು ತಂದುಕೊಟ್ಟಿವೆ. ರಂಗಪ್ರಯೋಗದಲ್ಲೂ ಅದು ಪರಿಣಮಿಸುತ್ತದೆಯೇ ಎಂಬುದು ನಿರ್ದೇಶಕ ಮತ್ತು ನಟರ ಸಾಮರ್ಥ್ಯವನ್ನು ಅವಲಂಬಿಸಿದೆ.
ಜನರಿಂದಲೇ ರೂಪುಗೊಂಡ ಪ್ರಭುತ್ವವು ಸರ್ವಾಧಿಕಾರಿಯಾಗಿ ಬದಲಾಗುವ ಅಪಾಯಗಳು ಸದಾ ಇದ್ದೇ ಇರುತ್ತವೆ. ಪುರಾಣದಲ್ಲೂ ಇಂತಹ ಪ್ರಸಂಗಗಳು ಯಥೇಚ್ಛವಾಗಿವೆ. ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರೋತ್ತರ ಭಾರತದಲ್ಲಿ ಇಂತಹ ಸಂದರ್ಭಗಳು ಎದುರಾಗಿವೆ. ಈಗಿನ ಸಂದರ್ಭವೂ ಅಂತಹದ್ದು ಎನ್ನುವುದು ನಾಟಕದ ಸಂದೇಶ.
ಸದ್ಯದ ಪ್ರಜಾಪ್ರಭುತ್ವಕ್ಕೆ ಬಂದಿರುವ ಅಪಾಯಗಳನ್ನು ಪುರಾಣದ ಹಿರಣ್ಯಕಶಿಪುವಿನ ಪಾತ್ರದ ಮೂಲಕ ಅರ್ಥೈಸಲು ನಾಟಕ ಪ್ರಯತ್ನಿಸುತ್ತದೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿದೆ. ನಾವು ಈವರೆಗೆ ಕೇಳಿದ್ದಕ್ಕಿಂತ ಭಿನ್ನವಾದ ಹಿರಣ್ಯಕಶಿಪು ತನ್ನ ವರ್ತನೆ, ಮಾತುಗಾರಿಕೆ ಮೂಲಕ ಇಲ್ಲಿ ಅನಾವರಣಗೊಂಡಿದ್ದಾನೆ. ಆತನನ್ನು ಈಗಿನ ಪ್ರಭುತ್ವಕ್ಕೆ ಸಮೀಕರಿಸಿ ಅರ್ಥೈಸುವುದರಿಂದಲೇ ನಾಟಕವು ಪ್ರಸ್ತುತವಾಗುತ್ತಾ ಹೋಗುತ್ತದೆ. ಇದನ್ನು ಹೀಗೂ ಹೇಳಬಹುದು. ಈಗಿನ ಪ್ರಭುತ್ವದ ವರ್ತನೆಗಳನ್ನು ಅರ್ಥೈಸಿಕೊಳ್ಳಲು ಹಿರಣ್ಯಕಶಿಪು ಮತ್ತು ಅವನ ಪುರಾಣವನ್ನು ಒಂದು ಸಾಧನವನ್ನಾಗಿ ನಾಟಕವು ಬಳಸಿಕೊಳ್ಳುತ್ತದೆ.
ಹಿರಣ್ಯಕಶಿಪುವನ್ನು ನಾಟಕಕ್ಕೆ ಬರಮಾಡಿಕೊಳ್ಳುವ ಅಥವಾ ಈಗಿನ ಸಂದರ್ಭಕ್ಕೆ ಆತನನ್ನು ಒಗ್ಗಿಸಿಕೊಳ್ಳುವ ದೃಶ್ಯ ಹೆಚ್ಚು ಶಕ್ತಿಯುತವಾಗಿ ಮೂಡಿಬಂದಿದೆ. ಯಾರೂ ಮಾತನಾಡದ ಸ್ಥಿತಿಯನ್ನು ಹೇಗೆ ಚಿತ್ರಿಸುವುದು ಎಂದು ನಾಟಕದೊಳಗಿನ ನಾಟಕಕಾರ ಬ್ರಹ್ಮ ಚಿಂತಿತನಾಗಿರುವ ಸಂದರ್ಭದಲ್ಲಿ ಅವನ ಸ್ಮೃತಿಪಟಲದಿಂದ ಹೊರಕ್ಕೆ ಹಿರಣ್ಯಕಶಿಪು ಬರುತ್ತಾನೆ. ಅವನನ್ನು ವಿಚಾರಿಸಿಕೊಳ್ಳುತ್ತೇನೆ ಎಂದು ನಾಟಕದೊಳಗಿನ ನಾಟಕಕಾರ ಸಿದ್ಧನಾಗುವ ಬಗೆ ಬಹಳ ಶಕ್ತಿಯುತವಾಗಿದೆ.
ಹಿರಣ್ಯಕಶಿಪು, 'ವಿಷ್ಣುಮುಕ್ತ ಲೋಕ ಮಾಡುತ್ತೇನೆ' ಎಂದು ಘೋಷಿಸುತ್ತಾನೆ. ಮತ್ತೊಂದೆಡೆ, 'ಒಂದು ತಲೆಗೆ ನೂರು ತಲೆ ತೆಗೆಯಬೇಕು' ಎನ್ನುತ್ತಾನೆ. ಇವೆರಡೂ ಘೋಷಣೆಗಳು ಅಥವಾ ಪ್ರತಿಜ್ಞೆಗಳಿಗೆ ಹಿರಣ್ಯಕಶಿಪುವಿನ ಅನುಯಾಯಿಗಳೂ ಸಂಭ್ರಮಿಸುತ್ತಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರು ಮಾಡುತ್ತಿದ್ದ 'ಕಾಂಗ್ರೆಸ್ ಮುಕ್ತ ಭಾರತ' ಮತ್ತು 'ನಮ್ಮ ಸೈನಿಕರ ಒಂದು ತಲೆ ಕಡಿದರೆ, ಎದುರಾಳಿಗಳ 100 ತಲೆ ಕಡಿಯುತ್ತೇವೆ' ಎಂಬ ಪ್ರತಿಜ್ಞೆಗಳನ್ನು ಈ ಸಂಭಾಷಣೆಗಳು ನೆನಪಿಸುತ್ತವೆ.
ಹಿರಣ್ಯಕಶಿಪುವಿನ ಬದಲಿಗೆ ವಿಷ್ಣುವನ್ನು ಜಪಿಸುವ ಜನರನ್ನು, ರಾಜನ ಅನುಯಾಯಿಗಳು ಹಿಡಿದು ಬಡಿಯುವ ಪೌರಾಣಿಕ ಪ್ರಸಂಗವು ವಾಸ್ತವದ ಅನುಭವಕ್ಕೂ ಬಂದುಬಿಡುತ್ತದೆ. 'ಹಿರಣ್ಯಕಶಿಪುವಿಗೆ ಜಯವಾಗಲಿ ಎಂದು ಹೇಳಿ' ಎಂದು ಹೊಡೆತ ತಿನ್ನುವವರನ್ನು ಒತ್ತಾಯಿಸುವ ಪ್ರಸಂಗವಿದೆ. ಇದು ಭಾರತದಲ್ಲಿ ಹಲವೆಡೆ ಜನರನ್ನು ಹಿಡಿದು 'ಜೈ ಶ್ರೀರಾಂ' ಎಂದು ಜಪಿಸುವಂತೆ ಹಲ್ಲೆ ನಡೆಸುವ ಸುದ್ದಿಗಳನ್ನು ನೆನಪಿಸುತ್ತದೆ. ಪ್ರಹ್ಲಾದ, ಹಿರಣ್ಯಕಶಿಪುವಿನ ಮಗನಾದರೂ ಪ್ರತಿರೋಧ ತೋರಿದ ಕಾರಣಕ್ಕೇ ದೇಶದ್ರೋಹಿ ಆಗುತ್ತಾನೆ. ಈಗಿನ ಭಾರತದಲ್ಲಿ ಪ್ರಭುತ್ವದ ವಿರುದ್ಧ ಮಾತನಾಡುವವರಿಗೆ ದೇಶದ್ರೋಹಿ ಪಟ್ಟ ಕಟ್ಟುತ್ತಿರುವ ಕುರಿತು ಚರ್ಚೆಗಳು ಆಗುತ್ತಲೇ ಇವೆ. ಈ ಎಲ್ಲಾ ಪ್ರಸಂಗಗಳನ್ನು ಪ್ರಭುತ್ವ ಮತ್ತು ಪ್ರಭುತ್ವದ ಆರಾಧಕರ ವರ್ತನೆಗೆ ಸಮೀಕರಿಸಿಕೊಳ್ಳುವಂತೆ ನಾಟಕವು ಒತ್ತಾಯಿಸುತ್ತಾ ಹೋಗುತ್ತದೆ.
(ಕೃಪೆ : ಪ್ರಜಾವಾಣಿ, ಬರಹ : ಜಯಸಿಂಹ ಆರ್)
------
©2024 Book Brahma Private Limited.