‘ಕೈಲಾಸಂ ಕನ್ನಡ ನಾಟಕಗಳು’ ಬಿ.ಎಸ್. ಕೇಶವರಾವ್ ಸಂಪಾದಿಸಿ, ಅಂಕಿತ ಪ್ರಕಾಶನ ಪ್ರಕಟಿಸಿರುವ ಕೃತಿ. ಕೈಲಾಸಂ ಅವರ ನಾಟಕವನ್ನು ಬರೆದುಕೊಳ್ಳುವುದಕ್ಕೆ ಸಿದ್ದರಾಗಿ ಒಬ್ಬರು ಕುಳಿತಿದ್ದರಂತೆ. ಕೈಲಾಸಂ ಒಂದಿಷ್ಟು ಯೋಚಿಸಿ, ಬರ್ಕೋ ಸ್ಥಳ: 'ಕಸ್ಬಾ ಹೋಬ್ಳಿ... ಅಂದರಂತೆ, ಲಿಪಿಕಾರ ಅದನ್ನು “ಕಸಬಾ ಹೋಬಳಿ” ಎಂದು ಬರೆದುಕೊಂಡರಂತೆ. “ಅಲ್ಲ ಮಗು, 'ಸ'ಕ್ಕೆ ಇಳೀ ಕೊಟ್ಟು “ಬವೊತ್ತು ಹಾಕು, 'ಕಸ್ಬಾ' ಅಂತ ಬರಿ. 'ಬ'ಗೆ ಗುಡಿಸುಕೊಟ್ಟು 'ಇವೊತ್ತು ಹಾಕು, ಹೋಬ್ಳಿ' ಅಂತ ಬರಿ ಅಂದರಂತೆ. ಅದಕ್ಕೆ ಲಿಪಿಕಾರ ಕಸ್ಬಾ ಹೋಬ್ಳಿ' ಅಂತ ಬರೆದರೆ ನೋಡಿದೋರೆಲ್ಲಾ ನಗತಾರೆ! ಎಂದರಂತೆ. ಅದಕ್ಕೆ ಹಾಗೆ ಬರೆಯೋದು. ಅವರು ನಗಬೇಕು ಅಂತಾನೆ ಹಾಗೆ ಬರೆಯೋದು ಅಂದರಂತೆ ಕೈಲಾಸಂ.” ಹೀಗೆ ಬರೆದು ಎಲ್ಲರನ್ನೂ ನಗಿಸುತ್ತಾ ತಾವು ಮಾತ್ರ ಎಲ್ಲ ದುಃಖಗಳನ್ನು ನುಂಗಿ ಒಂಟಿಯಾಗೇ ಬದುಕು ಸವೆಸಿದರು ಕೈಲಾಸಂ. ಆದರೂ ಕೈಲಾಸಂ ಪ್ರಭಾವ ಕನ್ನಡ ಸಾಹಿತ್ಯ, ರಂಗಭೂಮಿಯ ಮೇಲೆ ಇಂದೂ ಅಚ್ಚಳಿಯದೆ ಉಳಿದಿದೆ. ಅವರ ಬಗ್ಗೆ ವಾಸ್ತವಕ್ಕಿಂತಲೂ ಐತಿಹ್ಯಗಳೇ ಹೆಚ್ಚಾಗಿ ಚಾಲ್ತಿಯಲ್ಲಿವೆ. ಹೀಗಾಗಿ ಈ ತಲೆಮಾರಿನವರಿಗೆ ಯಾವುದು ಐತಿಹ್ಯ, ಯಾವುದು ವಾಸ್ತವ ಎಂಬುದನ್ನು ಗುರುತಿಸುವುದು ತುಸು ಕಷ್ಟವೇ. ಕೈಲಾಸಂ ಹೇಳಿ ಬರೆಸಿದ್ದು 30ಕ್ಕೂ ಹೆಚ್ಚು ನಾಟಕಗಳು ಎನ್ನುತ್ತಾರೆ. ಆದರೆ ಉಳಿದಿರುವುದು ಕೇವಲ ಹದಿನೇಳು ಮಾತ್ರ. “ಇದು ಕೈಲಾಸಂ ನಾಟಕವೇ” ಎಂದು ವಿದ್ವಾಂಸರು ಗುರುತಿಸಿರುವ 17 ನಾಟಕಗಳನ್ನು ಮಾತ್ರ ಈ ಸಂಪುಟದಲ್ಲಿ ಪ್ರಕಟಿಸಲಾಗಿದೆ. ಜೊತೆಗೆ ಲಭ್ಯವಾದ ಡಿವಿಜಿ, ಅನಕೃ, ಶ್ರೀರಂಗ, ತಾರಾನಾಥ್, ಕಸಿನ್ಸ್ ಮೊದಲಾದವರ ಮುನ್ನುಡಿಗಳನ್ನೂ ಅನುಬಂಧವಾಗಿ ಸೇರಿಸಿದ್ದಾರೆ. ಕೈಲಾಸಂ ಅವರ ಎಲ್ಲ ನಾಟಕಗಳನ್ನು ಒಂದೆಡೆ ತರಬೇಕೆಂಬ ಆಸೆ ಈ ಮೂಲಕ ಈಡೇರಿದೆ ಎನ್ನಬಹುದು.
©2025 Book Brahma Private Limited.