ಚಂದ್ರಶೇಖರ ಕಂಬಾರರ 'ನಾಯಿಕತೆಯ ವಸ್ತು ಸಾಮಾಜಿ ಆಯಾಮ ಒಳಗೊಂಡಿರುವಂತಹದು. ದಾಸ್ಯವು ಕೇವಲ ಸಾಮಾಜಿಕ ಬದುಕಿನ ವಾಸ್ತವ ಮಾತ್ರವಲ್ಲ ಅದೊಂದು ಮಾನಸಿಕ ಸ್ಥಿತಿಯೂ ಹೌದು. ದಾಸ್ಯ ಒಪ್ಪಿದ ವ್ಯಕ್ತಿ ಅದನ್ನು ನಿರಾಕರಿಸಿದರೆ ಅಧಿಕಾರ ವ್ಯವಸ್ಥೆಯಲ್ಲಿಯೇ ಪಲ್ಲಟ ಕಾಣಿಸುತ್ತದೆ. ಇಂಥ ಪಲ್ಲಟ ಉಂಟು ಮಾಡುವ ವಸ್ತು 'ನಾಯಿಕತೆ' ನಾಟಕದಲ್ಲಿದೆ.
ಶಿವಾಪುರದ ಸಾಹುಕಾರ ಸೋಮಣ್ಣ ತನ್ನ ಆಳುಮಗನಿಗೆ ’ನಾಯಿಮಗ’ ಎಂದು ಹೆಸರಿಟ್ಟಿದ್ದಾನೆ. ಹಣ-ಅಂತಸ್ತಿನ ಅಹಂಕಾರದ ಸೋಮಣ್ಣನ ಕಾಮದಾಟಕ್ಕೆ ದನಗಾಹಿ ಮಾರುತಿಯ ಹೆಂಡತಿ ಚೆಲುವಿ ಬಲಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ತನ್ನ ಹೆಂಡತಿಯನ್ನು ತವರಿನಿಂದ ಕರೆ ತರಲು ಹೊರಟ ಸೋಮಣ್ಣ ದಾರಿಯಲ್ಲಿ ಮೇಳದವರನ್ನು ನೋಡುತ್ತಾನೆ. ಮೇಳದ ಶಾರಿಗೆ ಮನಸೋಲುತ್ತಾನೆ. ಅವಳನ್ನು ಕರೆತಂದು ತೋಟದ ಮನೆಯಲ್ಲಿಟ್ಟು ಸೂಳೆಯಾಗುವಂತೆ ಒತ್ತಾಯಿಸುತ್ತಾನೆ. ಶಾರಿಯ ತಂದೆ-ತಾಯಿ ಹಣಕ್ಕಾಗಿ ಅವಳನ್ನು ಸಾಹುಕಾರನಿಗೆ ಒಪ್ಪಿಸಲು ಸಿದ್ಧರಿರುತ್ತಾರೆ. ಆದರೆ ಶಾರಿ ಮಾತ್ರ ನಾನು ಸೂಳೆ ಆಗಲಾರೆ? ಎಂದು ಪಟ್ಟು ಹಿಡಿಯುತ್ತಾಳೆ. ಸಾಹುಕಾರನ ಸೆರೆಯಿಂದ ಪಾರಾಗಲು ಶಾರಿ ಯತ್ನಿಸುತ್ತಾಳೆ. ತನ್ನನ್ನು ಕಾಯುತ್ತಿರುವ ನಾಯಿಮಗನ ಮೇಲೆ ಮೋಹಗೊಂಡು ಅವನಲ್ಲಿ ’ಪ್ರಜ್ಞೆ’ ಬೆಳೆಸುತ್ತಾಳೆ. ಸೋಮಣ್ಣ ಒತ್ತಾಯದಿಂದ ಪ್ರಯತ್ನಿಸಿದಾಗ ಶಾರಿಯು ನಾಯಿಮಗನೇ ತನ್ನ ಗಂಡ ಎಂದು ಹೇಳುತ್ತಾಳೆ. ಶಾರಿಯ ಮೈಮೇಲೆ ಬೀಳುವ ಸಾಹುಕಾರನನ್ನು ನಾಯಿಮಗ ತಡೆದು ನಿಲ್ಲಿಸುತ್ತಾನೆ. ಸಾಹುಕಾರನ ಆಳುಮಗನಾದ ಮಾರುತಿ ತನ್ನ ಹೆಂಡತಿಯನ್ನು ಓಡಿಸಿಕೊಂಡು ಹೋದಸುದ್ದಿ ತಿಳಿದು ಬಂದೂಕು ಕೆಳಗಿಡುವುದರೊಂದಿಗೆ ನಾಟಕ ಕೊನೆಗೊಳ್ಳುತ್ತದೆ.
©2024 Book Brahma Private Limited.