‘ಅಂಗುಲಿಮಾಲ’ ದಲಿತ ಹೋರಾಟಗಾರ ಕುಂದೂರು ತಿಮ್ಮಯ್ಯನವರ ಆತ್ಮಕಥನ. ಈ ಕೃತಿಯನ್ನು ಲೇಖಕ ಗುರುಪ್ರಸಾದ್ ಕಂಟಲಗೆರೆ ಅವರು ನಿರೂಪಿಸಿದ್ದಾರೆ. ಹಿರಿಯ ಚಿಂತಕ ನಟರಾಜ್ ಹುಳಿಯಾರ್ ಅವರು ಬೆನ್ನುಡಿ ಬರೆದಿದ್ದು, ನನ್ನ ವಿದ್ಯಾರ್ಥಿ ದೆಸೆಯಲ್ಲಿ ಸದಾ ಸಿಟ್ಟಿಗೆದ್ದ ನಾಯಕನಂತೆ ಕಾಣುತ್ತಿದ್ದ ಕುಂದೂರು ತಿಮ್ಮಯ್ಯ ದಲಿತ ಚಳುವಳಿಯ ಸ್ಫೂರ್ತಿಯ ಸೆಲೆಯಾಗಿದ್ದರು. ತಿಮ್ಮಯ್ಯ ಕೆಲ ವರ್ಷಗಳಿಂದ ಬಿಟ್ಟುಬಿಟ್ಟು ಹೇಳುತ್ತಿದ್ದ ಆತ್ಮಕತೆಯನ್ನು ಗುರುಪ್ರಸಾದ್ ಪರಕಾಯ ಪ್ರವೇಶ ಮಾಡುತ್ತಾ ಬರೆಯುತ್ತಲೇ ಇದ್ದ. ಆ ಕತೆ ಈವರೆಗಿನ ದಲಿತ ಆತ್ಮಕತೆಗಳಿಗಿಂತ ಭಿನ್ನವಾದ ದಿಕ್ಕಿಗೆ ಹೊರಳಿರುವುದನ್ನು ಕಂಡು ವಿಸ್ಮಯಗೊಂಡೆ: ಇಲ್ಲಿ ತುಳಿತಕ್ಕೊಳಗಾದ ಸಮುದಾಯದ ಅಸಹಾಯಕ ದನಿಗಿಂತ, ಬಾಲ್ಯದಿಂದಲೂ 'ಒಂದು ಕೈ ನೋಡೇಬಿಡುವೆ' ಎನ್ನುವ ರೌಡಿ ದನಿಯಿತ್ತು! ಅದಕ್ಕೆ ತಕ್ಕಂತೆ ತಿಮ್ಮಯ್ಯ ಬೆಂಗಳೂರಿನ ಶ್ರೀರಾಂಪುರದ ಸ್ಲಮ್ಮಿನ ರೌಡಿ ಗ್ಯಾಂಗಿಗೂ ಸೇರಿ ಸ್ವಲ್ಪದರಲ್ಲಿ ಬಚಾವಾಗಿ ಊರಿಗೆ ಮರಳಿದ ಕತೆಯೂ ಇತ್ತು. ಪುಟ ತೆರೆದಂತೆಲ್ಲ ಮೇಲ್ಜಾತಿ ಸಮಾಜದ ಭೀಕರ ಕ್ರೌರ್ಯಗಳೂ, ತಿಮ್ಮಯ್ಯನವರು ಚೈನು-ಚಳ್ಳೆ ಹಣ್ಣುಗಳ ಆಯುಧಗಳ ಮೂಲಕ ಆ ಕ್ರೌರ್ಯಗಳನ್ನು ಎದುರಾದ ಸಾಹಸಗಳೂ ಎದುರಾದವು ಎಂದಿದ್ದಾರೆ. ಹಾಗೇ ಕುಂದೂರು ತಿಮ್ಮಯ್ಯನವರಂತೆ ಮುನ್ನುಗ್ಗಿದ ದಿಟ್ಟ ದಲಿತ ತರುಣರನ್ನು ದೊಡ್ಡ ಚಳುವಳಿಗಾರರನ್ನಾಗಿ ಮಾಡಿದ ಪ್ರೊ. ಬಿ. ಕೃಷ್ಣಪ್ಪ, ಕೇಬಿ ಸಿದ್ದಯ್ಯ ಥರದವರ ತಾತ್ವಿಕ ಶ್ರಮ ಹಾಗೂ ದಲಿತ ಸಂಘರ್ಷ ಸಮಿತಿಯ ವಿಕಾಸದ ಚರಿತ್ರೆಯೂ ಇಲ್ಲಿದೆ. ಕರ್ನಾಟಕದ ಪುಟ್ಟ ಊರುಗಳಲ್ಲಿ ಚಿಮ್ಮಿದ ತಿಮ್ಮಯ್ಯನವರಂಥ ಸಾವಿರಾರು ಆ್ಯಕ್ಟಿವಿಸ್ಟ್ ನಾಯಕರ ಛಲ, ಬದ್ಧತೆ, ಸಂಘಟನಾ ಶಕ್ತಿಗಳು ದಲಿತ ಚಳುವಳಿಯನ್ನು ಇವತ್ತಿನವರೆಗೂ ಕಾಯ್ದುಕೊಂಡು ಬಂದಿರುವ ಕತೆಯೂ ಇಲ್ಲಿದೆ. ಬೀದಿಗಿಳಿದರೆ ಗೆದ್ದೇ ಗೆಲ್ಲುತ್ತೇವೆಂಬ ಬಿರುಸಿನಿಂದ ಹೊರಟ ತಿಮ್ಮಯ್ಯನವರಂಥ ಕಾರ್ಯಕರ್ತ-ನಾಯಕರು ಮುಂಬರಲಿರುವ ದಿನಗಳಲ್ಲಿ ತಂತಮ್ಮ ಕತೆಗಳನ್ನು, ದಲಿತ ಚಳುವಳಿಯ ಊರೂರ ಚರಿತ್ರೆಗಳನ್ನು ಹೇಳಬಲ್ಲ ಸರಳ ಹಾದಿಯನ್ನೂ “ಅಂಗುಲಿಮಾಲ' ತೆರೆದಿಟ್ಟಿದೆ. ಹೊಸ ತಲೆಮಾರಿನ ಗಟ್ಟಿ ಕತೆಗಾರ ಗುರುಪ್ರಸಾದ್ ಕಂಟಲಗೆರೆ ತಿಮ್ಮಯ್ಯನವರ ರಾಜಕೀಯದ ಖದರ್, ಹಮ್ಮುಬಿಮ್ಮು, ಆತ್ಮವಿಶ್ವಾಸಗಳ ಅಸಲಿ ಲಯಗಳನ್ನು ಕುಂದೂರು ಭಾಷೆಯಲ್ಲೇ ಮರುಸೃಷ್ಟಿ ಮಾಡಿರುವ ರೀತಿಯೂ ಮೋಹಕವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2025 Book Brahma Private Limited.