ಲೇಖಕ ಸಂಗಮೇಶ ಉಪಾಸೆ ಅವರ ’ದೇವರುಗಳಿವೆ ಎಚ್ಚರಿಕೆ’ ಕೃತಿಯು ವಿಡಂಬನಾತ್ಮಕ ನಾಟಕವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ನಿರ್ದೇಶಕ ಸಿ. ಬಸವಲಿಂಗಯ್ಯ ಅವರು, ಲೋಕಕ್ಕೆ ಒಳಿತನ್ನು ಬಯಸಿ ಹೊಸ ಹೊಸ ಧರ್ಮಮಾರ್ಗಗಳನ್ನು ತೋರಿದ ಶ್ರೀಕೃಷ್ಣ, ಬುದ್ಧ, ಮಹಾವೀರ, ಏಸುಕ್ರಿಸ್ತ, ಪೈಗಂಬರ, ಬಸವಣ್ಣ ದೇವಲೋಕದ ನ್ಯಾಯಸ್ಥಾನದಲ್ಲಿ ಕಟಕಟೆಗೆ ಬಂದು ನಿಲ್ಲುವುದು, ಅವರು ಸ್ಥಾಪಿಸಿದ ಧರ್ಮಗಳ ಬಗ್ಗೆ ನಿವೇದಿಸುವುದು ನಾಟಕದಲ್ಲಿನ ಇನ್ನೊಂದು ವಿಡಂಬನೆಯಾಗಿದೆ. ನಾಟಕ ರಚನಾಕಾರರು ಪಾತ್ರಗಳನ್ನು ಲೌಕಿಕವಾಗಿ ಕಂಡವರಲ್ಲ. ಪುರಾಣ, ಐತಿಹ್ಯ, ಜಾನಪದ, ನಂಬಿಕೆ ಆಚರಣೆಗಳಲ್ಲಿ ವ್ಯಕ್ತಗೊಂಡ ಪಾತ್ರಗಳನ್ನು ಮರುಸೃಷ್ಟಿಸುತ್ತಾರೆ. ನಾಟಕದ ಶೀರ್ಷಿಕೆಯೇ ಪ್ರಚೋದನಕಾರಿ ಎನಿಸುವುದು ಮೇಲು ನೋಟಕ್ಕೆ ವಾಚ್ಯವಾದರೂ ನಾಟಕಕಾರರ ಒಳ ಆಶಯ ನಿಜದ ಮಾನವೀಯ ಧರ್ಮ ಮತ್ತು ದೇವರನ್ನು ಜನರಿಗೆ ತಲುಪಿಸುವುದೇ ಆಗಿದೆ. ಎಂಟು ಪ್ರಕರಣಗಳ ಮೂಲಕ ನಮ್ಮ ಸಮಾಜವನ್ನು ಧರ್ಮ-ದೇವರ ಕಲ್ಪನೆಯನ್ನು ಹಾಸ್ಯ ಲೇಪನದೊಂದಿಗೆ ಮುಂದಿಡುವುದರಿಂದ ವಿಚಾರ ಪ್ರಚೋದನೆಗೂ ಜನರನ್ನು ಸಿದ್ಧಗೊಳಿಸುತ್ತದೆ. ಆಧುನಿಕ ಅವತಾರಗಳನ್ನು ದೇವರ ವಿಕಾರವಾದ ರೂಪಗಳನ್ನು ಹಾಸ್ಯಕ್ಕೆ ಒಡ್ಡುವ ಜೊತೆ ಜೊತೆಗೆ ಧರ್ಮ-ದೇವರಲ್ಲಿ ಇರಬೇಕಾದ ನಂಬಿಕೆಯನ್ನು ಪ್ರಸ್ತಾಪಿಸುವುದು ನಾಟಕಕಾರರ ಆಶಯವಾಗಿದೆ. ರಂಜನೆ ಮೂಲಕವೇ ನಿಜ ಧರ್ಮ-ದೇವರನ್ನು ಅರಿಯುವ ಮತ್ತು ವೇಷಧಾರಿಗಳ ಛದ್ಮವೇಷಗಳನ್ನು ಬಯಲುಗೊಳಿಸುವಲ್ಲಿ ಈ ರೂಪಕ ಜನಸಾಮಾನ್ಯರಿಗೆ ರಂಜನೆ ಜೊತೆಗೆ ಚಿಂತನೆ ಮಾಡುವ ಕೆಲಸವನ್ನು ಸರಳವಾಗಿ ಮಾಡುತ್ತದೆ.
‘ದೇವರುಗಳಿವೆ ಎಚ್ಚರಿಕೆ’ ಕೃತಿಯ ಕುರಿತು ಲೇಖಕ ಸಂಗಮೇಶ ಉಪಾಸೆ ಮಾತು.
’ದೇವರುಗಳಿವೆ ಎಚ್ಚರಿಕೆ’ ಕೃತಿಯ ವಿಮರ್ಶೆ
ವೈಚಾರಿಕ ಪ್ರಶ್ನೆಗಳ ಸುತ್ತಮುತ್ತ
ಎರಡು ದಶಕಕ್ಕೂ ಮೀರಿ ಸಾಹಿತ್ಯ ಸಂಬಂಧದೊಂದಿಗೆ ಒಡನಾಟವುಳ್ಳ ಲೇಖಕ, ನಟ ಸಂಗಮೇಶ್ ಉಪಾಸೆ ಅವರ ಹೊಸ ನಾಟಕ ' ದೇವರುಗಳಿವೆ ಎಚ್ಚರಿಕೆ!' ವ್ಯಂಗ್ಯಭರಿತ ನಾಟಕವಾಗಿದ್ದು ಓದುವ ಹಾಗಿದ್ದೂ ಆಡುವ ರೀತಿಯಲ್ಲೂ ಸಾಧ್ಯವಾಗಬಲ್ಲದಂತಿದೆ.
ದೇವರುಗಳಿವೆ ಎಚ್ಚರಿಕೆ ! ಎಂಬುದರ ಹಿಂದೆ ಅನೇಕ ಒಳ ಅರ್ಥಗಳಿವೆ. ದೇವರು ಯಾರು? ಧರ್ಮ ಯಾವುದು? ಸ್ವಂತ ಧರ್ಮ-ಪರ ಧರ್ಮ ಯಾವುದು? ದಯವಿಲ್ಲದ ಧರ್ಮ, ಭಯವಿಲ್ಲದ ಧರ್ಮ ಯಾವುದು? ಮಠ ಯಾವುದು? ಸ್ವಾಮಿ ಯಾರು? ಎಂದೆಲ್ಲವನ್ನೂ ಸಾರಾಸಗಟಾಗಿ ಚರ್ಚಿಸಿರುವ ಸಂಗಮೇಶ್ ಯಾರು ಎಂ ಉಪಾಸೆ ಈ ವಿಷ ನಾಟಕವಾಗಿಸಿರುವುದು ವಿಶೇಷ.
ನನಗೆ ದೇವರನ್ನು ತೋರಿಸಿರಿ ಎಂದು ರಾಧೆಮಾ ಮಠದ ಸ್ವಾಮಿ ಬಡಂಗಬಾಬಾ ಹಿಂದೆ ಬೀಳುತ್ತಾಳೆ. ರಾಧೆಮಾ ಹುಡುಕುವ ದೇವರಲ್ಲಿ ಸಿಗುವುದಾದರೂ ಯಾರು? ರಾಮನೆ? ಅಲ್ಲಾನೆ? ಏಸುವೆ? ಬಸವಣ್ಣನೆ? ಇದು ತಲೆ ಕೆಟ್ಟಿರುವ ರಾಧೆಮಾಳ ಪ್ರಶ್ನೆ ಅನ್ನುವುದಾದರೆ, ಇದು ನಮ್ಮ ಪ್ರಶ್ನೆಯೂ ಆಗಿರುತ್ತದೆ. ಯಾವತ್ತಿಗೂ ದೊರೆಯಲಾರದ ಉತ್ತರವೂ ಆಗಿರುತ್ತದೆ. ಧರ್ಮಗಳೊಂದಿಗೆ ಬಂಡಾಯ, ದೊಂಬಿ, ಅಹಿಂಸೆ, ಅಶಾಂತಿ, ಎಲ್ಲವೂ ಇದರಲ್ಲಿ ತುಂಬಿರುತ್ತದೆ. ದೇವರು ಇಂಥ ಎಲ್ಲಾ ಪ್ರಶ್ನೆಗಳನ್ನು ತುಂಬಿ ಅಳಿಸಲಾರದ, ಸಾಗಿಸಲಾರದ ಇಂಥ ನಾ.ರಾಧೆಮಾಳ ಪ್ರಶ್ನೆ, ದೇವರನ್ನು ತೋರಿಸಿರಿ ಅನ್ನುವ ಮಾತು ಎಂದೂ ಕೊನೆಯಾಗುವುದಿಲ್ಲ.
ಇದು ಕೇವಲ ನಾಟಕವಲ್ಲ , ಹಲವು ಪ್ರಶ್ನೆ, ಚರ್ಚೆಗಳಲ್ಲ, ನಾಟಕದೊಂದಿಗೆ ಅನಿಸಿದ್ದನ್ನು ಅನಿಸಿದಂತೆ ಹೇಳುವ ಸಂಗತಿಗಳು ಅನೇಕ ಇವೆ. ಈ ದೇವರ ಹುಡುಕಾಟ ಅಷಕೇ ನಿಲ್ಲುವುದಿಲ್ಲ. ದೇವರ ಬೆನ್ನು ಹತ್ತಿರುವ ಜನಗಳ ಹಿಂದೆ ಧರ್ಮ, ಮತಾಂಧತೆ, ಜಾತಿ, ದಾಂಧಲೆ, ಕುರುಡು ನಂಬಿಕೆ..ಹೀಗೆ ಸಾಲು ಸಾಲು ಮೂಢತೆಗಳು ಸಮಾಜದ ಸ್ವಾರ್ಸ್ಥ್ಯ ಹಾಳು ಮಾಡಲು ಸಿದ್ದವಾಗಿರುತ್ತವೆ. ಅದು ಯಾವುದೇ ಧರ್ಮಕ್ಕೂ ಹೊರತಲ್ಲ. ಇಲ್ಲಿ ನಾಟಕಕಾರರು ಯಾವುದೇ ದೇವರು, ಧರ್ಮ, ಅನುಕರಣೆಗಳನ್ನು ಅಣುಕಿಸಲು ಹೊರಟಿಲ್ಲ. ಮನುಷ್ಯ, ದೇವರು ಮತ್ತು ಧರ್ಮ ತಾವಾಗಿಯೇ ಕಟ್ಟಿಕೊಂಡ ಬೇಲಿಗಳಿಗೆ ತಾನೇ ಕಟ್ಟಿಕೊಂಡಿರುವ ಸಾವಿರಾರು ವರ್ಷದ ಬಂಧನವು ಇವು. ಇಂಥ ಬಂಧನವನ್ನು ವ್ಯಕ್ತಿಯ ಕಟೋಕ್ತಿಗಳನ್ನು ಉಲ್ಲೇಖಿಸುತ್ತ ಹೋಗುತ್ತಾರೆ. ಇಲ್ಲಿ ಬರುವ ದೇವರುಗಳು ಕೇವಲ ನಿಮಿತ್ತ ಮಾತ್ರವು ಮತ್ತು ಇವು ಮನುಷ್ಯ ನಿರ್ಮಿತ ದೇವರು ಹಾಗೂ ಧರ್ಮಗಳು ಎಂದು ಮಾನವತಾವಾದಿಗಳು ಹೇಳುತ್ತಲೇ ಬಂದಿದ್ದಾರೆ.
ಇಲ್ಲಿ ನಾಟಕಕಾರರದ್ದು ಮನುಷ್ಯ ಕಟ್ಟಿದ ಬೇಲಿಗಳನ್ನು ಕಿತ್ತೊಗೆಯುವ ಅಂತಃಕರಣ.ಅವರ ಸಾಮಾಜಿಕ ಮೌಡ್ಯತೆಯನ್ನು ಮೆಟ್ಟುವ ಕಾಳಜಿ ಅಂತರ್ಯದಲ್ಲಿ ಎದ್ದು ಕಾಣುತ್ತದೆ. ಲೇಖಕನಾದವನಿಗೆ ಇಂಥ ಬದ್ಧತೆ ಇರಬೇಕು. ನಾಟಕಕಾರರು ಪ್ರಮುಖ ವ್ಯಂಗ್ಯ ಮತ್ತು ಹಾಸ್ಯಗಾರರಾಗಿರುವುದರಿಂದ ಕೃತಿ ರಂಗಪ್ರಯೋಗದಲ್ಲಿ ವಾಚಾಳಿಯಾಗುವುದು ನಿಜ. ದೇವರು, ಧರ್ಮಗಳ ಬಗ್ಗೆ ಸಂಕೀರ್ಣ ಚರ್ಚೆಗೆ ಒಡ್ಡುವ ಈ ನಾಟಕದಲ್ಲಿ ಹಿಂದು, ಕ್ರೈಸ್ತ ಹಾಗೂ ಮುಸಲ್ಮಾನ ದೇವರುಗಳೆಲ್ಲಾ ಕೇಳುವುದು ದೇವರು ಯಾರು ಎಂಬ ಒಂದೇ ಪ್ರಶ್ನೆಯನ್ನು . ಇದು ಜಟಿಲ ಮತ್ತು ಸೂಕ್ಷ್ಮ ಪ್ರಶ್ನೆ. ಇದು ಮನುಷ್ಯರ ಪ್ರಶ್ನೆಯೂ ಆಗಿದೆ. ದೇವರ ಕಡೆಯ ಈ ಚೆಂಡನ್ನು ಲೇಖಕರ ಕಡೆಗೆ ಬೀಸುವತ್ತ ನಮಗೆ ದಿಗಿಲಾಗಿದೆ. ಈ ದಿಗಿಲು ನಮ್ಮಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟಿಸಿದೆ. ಸಂಗಮೇಶ ಉಪಾಸೆ ಅವರ ಹಲವು ಪ್ರಶ್ನೆಗಳನ್ನು ನಮಗೂ ಎಸೆದಿದ್ದಾರೆ. ಇದು ನಮಗೂ ಎಚ್ಚರಿಕೆಯಾಗಿದೆ. ಲೇಖಕರಿಂದ ಇಂಥ ವಿಚಾರಾತ್ಮಕವಾದ ಇನ್ನಷ್ಟು ಕೃತಿಗಳನ್ನು ಹೊರತರಲೆಂದು ಹಾರೈಸುತ್ತೇನೆ.
( ಕೃಪೆ: ಸಂಯುಕ್ತ ಕರ್ನಾಟಕ, ಬರಹ, ಹೂಲಿ ಶೇಖರ್)
---
ಎಚ್ಚರಿಸುವ ವಿಡಂಬನೆ
ನಟ, ಲೇಖಕ ಸಂಗಮೇಶ ಉಪಾಸೆಯವರ ವಿಡಂಬನಾತ್ಮಕ ನಾಟಕ 'ದೇವರುಗಳಿವೆ ಎಚ್ಚರಿಕೆ!'. ತಮ್ಮದು ವಿಡಂಬನಾತ್ಮಕ ನಾಟಕವೆಂದು ಸೂತ್ರಧಾರನ ಮೂಲಕ ಹೇಳುವ ಲೇಖಕರು ವರ್ತಮಾನ ಜಗತ್ತಿನ ಎಲ್ಲ ಡಂಭಾಚಾರದ ಆಗುಹೋಗುಗಳು, ದೇವರ ಹೆಸರಿನಲ್ಲಿ ನಡೆಯುವ ವಿದ್ಯಮಾನಗಳನ್ನು ಇಲ್ಲಿ ವಿಡಂಬಿಸಿದ್ದಾರೆ. ಇಲ್ಲಿ ಅಧ್ಯಾತ್ಮದ ಹೆಸರಿನಲ್ಲಿ ಆಶ್ರಮಗಳಲ್ಲಿ ನಡೆವ ನಾಟಕಗಳಿವೆ. ಜನಸಾಮಾನ್ಯರ ಬದುಕಿನ ಗೋಳಿನ ಕಥೆಯೂ ಇದೆ. ಅದಕ್ಕಾಗಿಯೇ ಆಶ್ರಮದ ಸ್ವಾಮೀಜಿ, ಸಾಮಾನ್ಯ ಜನರು, 90 ಟಿವಿ ನೋಡುವ ದೇವೇಂದ್ರನ ಒಡ್ಡೋಲಗ... ಎಲ್ಲವೂ ಇಲ್ಲಿವೆ. ಅಷ್ಟೇ ಏಕೆ, ಚಿತ್ರಗುಪ್ತ, ಯಮ, ಶ್ರೀಕೃಷ್ಣ ಪೂಜಾರಿ, ಪೈಗಂಬರ, ಬಸವಣ್ಣ, ಎಲ್ಲರೂ ಇಲ್ಲಿ ಪಾತ್ರಗಳು. ವೈಚಾರಿಕ ನಿಲುವಿನಲ್ಲಿ ಈ ಎಲ್ಲ ? ಪಾತ್ರಗಳ ಮೂಲಕ ನಿಜವನ್ನು ಹೊರತರುವ ಲೇಖಕರ ಈ ಪ್ರಯತ್ನದಲ್ಲಿ ನೈಜ ಮಾನವೀಯ ಮಿಡಿತವಿದೆ. ರಂಗಪ್ರಯೋಗವಾಗಿಸಲು ಸೂಕ್ತ ಸಂಭಾಷಣೆ, ದೃಶ್ಯಗಳೂ ಇದರಲ್ಲಿವೆ. 'ಈ ರೂಪಕ ಜನಸಾಮಾನ್ಯರಿಗೆ ರಂಜನೆ ಜೊತೆಗೆ ಚಿಂತನೆಗೂ ಹಚ್ಚುವ ಕೆಲಸವನ್ನು ಸರಳವಾಗಿ ಮಾಡುತ್ತದೆ' ಎಂದಿದ್ದಾರೆ ಖ್ಯಾತ ರಂಗನಿರ್ದೇಶಕ ಸಿ. ಬಸವಲಿಂಗಯ್ಯ ಬೆನ್ನುಡಿಯಲ್ಲಿ.
(ಕೃಪೆ: ವಿಜಯ ಕರ್ನಾಟಕ, ಬರಹ: ವಿದ್ಯಾರಶ್ಮಿ ಪೆಲತ್ತಡ್ಕ)
©2024 Book Brahma Private Limited.