ಜನರ ಬದುಕನ್ನು ಅತ್ಯಂತ ಹತ್ತಿರದಿಂದ ಕಂಡುಂಡ ಅನುಭವವನ್ನು ಆಧಾರಿಸಿದ ನಾಟಕ ಡಿ.ಎಸ್. ಚೌಗಲೆ ಅವರ ‘ ವಖಾರಿಧೂಸ’. ಇಲ್ಲಿ ತಂಬಾಕು ಉತ್ಪಾದಕರ, ಗೋದಾಮು, ಮಾಲೀಕರ ದರ್ಪ, ಶೋಷಣೆ, ಗತ್ತುಗಾರಿಕೆಗಳು ಹಾಗೂ ಅದರ ಸುತ್ತಮುತ್ತಲಿನ ಕಾರ್ಮಿಕರ ಇನ್ನೊಂದು ಬಗೆಯ ತೀವ್ರತೆಯ ಘಾಟನ್ನು ನಾವು ಕಾಣಬಹುದು. ವಖಾರಿ ಪದದ ಅರ್ಥ ‘ತಂಬಾಕನ್ನು ಶುಚಿಗೊಳಿಸುವ ಗೋದಾಮು. ಧೂಸ ಎಂದರೆ ಅಲ್ಲಿನ ಧೂಳು. ಇದನ್ನು ರೂಪಕವಾಗಿ ಬಳಸಿದ ಲೇಖಕರು ಜನರ ದನಿಯನ್ನು ರಂಗಕೃತಿಯಲ್ಲಿ ಎತ್ತಿಕೊಂಡಿದ್ದಾರೆ. ಕಾರ್ಮಿಕ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕುವ ಮಾಲೀಕವರ್ಗ, ಅದನ್ನು ದಿಟ್ಟವಾಗಿ ಎದುರಿಸುವ ಕಾರ್ಮಿಕರು, ಶೋಷಣೆಯ ಬಲೆಯ ಒಳಗೆ ಬೀಳುವ ಮುಗ್ಧೆಯರು, ಶೋಷಣೆ ತಡೆಯಲು ಮುಂದಾಗುವ ಬೀಡಿ ಮೊಹಮ್ಮದನ ಕೊಲೆ ಹೀಗೆ ಇಂತಹ ಹಲವಾರು ಘಟನೆಗಳನ್ನು ಈ ನಾಟಕವು ಆವರಿಸಿವೆ. ಸಾಂಗ್ಯಾಬಾಳ್ಯಾ ನಾಟಕದ ತಾಲೀಮು ನಾಟಕಕ್ಕೆ ಹಿನ್ನೆಲೆಯಾಗಿ ಸಮಾನಾಂತರ ಕತೆಯಾಗಿ ಕಾಣುತ್ತದೆ. ಬೇರೆ ಬೇರೆ ಪ್ರದೇಶಗಳ ಭಾಷಾ ಸೊಗಡು ಇಲ್ಲಿನ ವಿಚಾರಧಾರೆಗಳನ್ನು ಎತ್ತಿಹಿಡಿಯುತ್ತಿದ್ದು, ಹಳೇ ಮೈಸೂರು, ಹುಣಸೂರು, ಪಿರಿಯಾಪಟ್ಟಣ ಹಳ್ಳಿ ಸೊಗಡಿನ ಭಾಷೆ ಬಳಸಿರುವುದು ವಸ್ತುವನ್ನು ಇನ್ನಷ್ಟು ಹತ್ತಿರವಾಗಿಸಿರುವುದನ್ನು ಕಾಣಬಹುದು. ನೆಲಮೂಲದ ಜನರ ಪ್ರತಿರೋಧದ ದನಿಯಾಗಿ ಈ ಕೃತಿ ಅವರ ಭಾಷೆಯಲ್ಲೇ ಮೂಡಿಬಂದಿದೆ.
ತಂಬಾಕಿನ ತೀವ್ರ ಘಾಟು ನೆಲಮೂಲದ್ದೇ ಘಮಲು(ಪ್ರಜಾವಾಣಿ)
©2024 Book Brahma Private Limited.