ಬಿದನೂರಿನ ಇತಿಹಾಸವನ್ನು ಕೇಂದ್ರವಾಗಿಟ್ಟುಕೊಂಡು ಬರೆದಿರುವಂತಹ ನಾಟಕ ರಕ್ತಾಕ್ಷಿ. 1932ರಲ್ಲಿ ಮೊದಲ ಬಾರಿಗೆ ಈ ನಾಟಕ ಪ್ರಕಟವಾಯಿತು. ಇಪ್ಪತ್ತಕ್ಕೂ ಹೆಚ್ಚು ಪಾತ್ರಗಳನ್ನು ಹೊಂದಿರುವ ಈ ನಾಟಕವನ್ನು ಐದು ದೃಶ್ಯಗಳಲ್ಲಿ ಬರೆಯಲಾಗಿದೆ. ನಾಟಕ ವಿಮರ್ಶಕರು ರಕ್ತಾಕ್ಷಿ ನಾಟಕವನ್ನು ಇಂಗ್ಲೀಷ್‍ನ ಹ್ಯಾಮ್ಲೆಟ್ ನಾಟಕದೊಂದಿಗೆ ವಿಮರ್ಶಿಸಿದ್ದಾರೆ. ಬಿದನೂರಿನಲ್ಲಿ ನಡೆದಂತಹ ರಾಜ ಮನೆತನದ ಕಥೆಯನ್ನು ಈ ನಾಟಕದಲ್ಲಿ ಸವಿವರವಾಗಿ ವರ್ಣಿಸಲಾಗಿದೆ. ಈ ನಾಟಕದಲ್ಲಿ ಛಂದಸ್ಸುಗಳನ್ನು ಉಪಯೋಗಿಸಿಲ್ಲ. ಇಲ್ಲಿರುವುದು ಸಂಪೂರ್ಣ ಗದ್ಯ. ಮೈಸೂರು ಚರಿತ್ರೆಯ ಪುಟಗಳಲ್ಲಿ ದಾಖಲಾಗಿರುವ ಕಥಾನಕದ ಪ್ರಕಾರ ಹೈದರನು ಯಾವ ರೀತಿ ಬಿದನೂರು ರಾಜರ ಮೇಲೆ ದಾಳಿ ಮಾಡಿ, ರಾಜ ಬಸಪ್ಪನಾಯಕನನ್ನು ಸೋಲಿಸುತ್ತಾನೆಂದು ಹೇಳುವ ಕಥೆಯನ್ನು ನಾಟಕವಾಗಿ ವಿವರಿಸಲಾಗಿದೆ. ಬಸಪ್ಪ ನಾಯಕನ ಪತ್ನಿ ನಿಂಬಣ್ಣ ಎಂಬುವವನೊಂದಿಗೆ ಸಂಬಂಧವಿಟ್ಟುಕೊಂಡಿದ್ದಾಳೆಂದು ತಿಳಿದು ಅದನ್ನು ವಿರೋಧಿಸಿದ ಅವಳ ದತ್ತು ಪುತ್ರನನ್ನು ಯಾವ ರೀತಿ ಮೋಸದಿಂದ ಕೊಲ್ಲುತ್ತಾಳೆ ಹಾಗೂ ಅವಳಿಂದಾಗಿ ಬಿದನೂರು ರಾಜ್ಯ ಯಾವ ರೀತಿ ಅಂತ್ಯಕ್ಕೆ ಸಮೀಪವಾಗುತ್ತದೆ ಎಂಬುದನ್ನು ಈ ನಾಟಕದಲ್ಲಿ ಸ್ವಾರಸ್ಯಕರವಾಗಿ ಸಂಯೋಜಿಸಲಾಗಿದೆ. ಮಲೆನಾಡಿನ ಮೇಲೆ ವ್ಯಾಪಕ ವ್ಯಾಮೋಹ ಹೊಂದಿದ್ದ ಕುವೆಂಪು ಅವರು ಇಲ್ಲಿಯೂ ಮಲೆನಾಡಿನ ಕಥೆಯನ್ನೇ ಆರಿಸಿಕೊಂಡಿದ್ದಾರೆ.
©2024 Book Brahma Private Limited.