ಪತ್ರಕರ್ತ, ಲೇಖಕ ಜೋಗಿ ಅವರ ನಾಟಕ ಕೃತಿ ‘ಸು’ ಬಿಟ್ರೆ ಬಣ್ಣ ‘ಬ’ ಬಿಟ್ರೆ ಸುಣ್ಣ. ಕಾರ್ಲೋ ಗೋಲ್ಲೋನಿಯ 'ಸರ್ವೆಂಟ್ ಆಫ್ ಟು ಮಾಸ್ಟರ್ಸ್' ನಾಟಕವನ್ನು ಆಧರಿಸಿ ಕನ್ನಡದಲ್ಲಿ ಬರೆದ ನಾಟಕ. ಲೇಖಕರು ಹೇಳುವಂತೆ ‘ಈ ನಾಟಕ ಬರೆಯುವುದಕ್ಕೆ ಮೂಲ ಪ್ರೇರಣೆ ಕೆ.ವಿ. ಅಕ್ಷರ, ನೀನಾಸಂ ತಿರುಗಾಟಕ್ಕೆ ಒಂದು ನಾಟಕ ಬರೆದುಕೊಡಿ ಎಂದು ಹೇಳಿ, ಇದನ್ನು ಅವರು ಬರೆಸಿದರು. ಏನೇನು ಬದಲಾವಣೆ ಮಾಡಿಕೊಳ್ಳಬಹುದು ಎಂಬ ಆಮೂಲ್ಯವಾದ ಸಲಹೆಯನ್ನೂ ಕೊಟ್ಟರು. ಅವರ ಒತ್ತಾಸೆ ಇಲ್ಲದೇ ಹೋಗಿದ್ದರೆ ನಾನಿದನ್ನು ಬರೆಯುತ್ತಲೇ ಇರಲಿಲ್ಲ.ಈ ನಾಟಕವನ್ನು ರಂಗಕ್ಕೆ ತಂದವರು ಖ್ಯಾತ ನಿರ್ದೇಶಕ ಇಕ್ವಾಲ್ ಅಹಮದ್. ಅವರು ನಾಟಕವನ್ನು ಮತ್ತಷ್ಟು ತಿದ್ದಿ ಚೆಂದಗೊಳಿಸಿದರು. ಈ ನಾಟಕಕ್ಕಾಗಿಯೇ ನಾನು ಸುಮಾರು 52 ಕಂದಪದ್ಯಗಳನ್ನೂ ಬರೆದುಕೊಟ್ಟಿದ್ದೆ. ಅವನ್ನೆಲ್ಲ ಈ ಪುಸ್ತಕದಲ್ಲಿ ಸೇರಿಸಿಲ್ಲ. ಅದು ನಾಟಕದ ಅವಶ್ಯಕತೆಯಾಗಿರದೇ, ನಿರ್ದೇಶಕರ ಅಗತ್ಯವಾಗಿತ್ತು ಎಂಬ ಕಾರಣಕ್ಕೆ ಕೈ ಬಿಟ್ಟಿದ್ದೇನೆ. ನಾನು ಅನುವಾದಿಸಿದ ನಾಟಕವಷ್ಟೇ ಇಲ್ಲಿದೆ.ಕಾರ್ಲೋ ಗೋಲೋನಿ ಈ ನಾಟಕವನ್ನು ಬರೆದದ್ದು 1746ರಲ್ಲಿ, ಸುಮಾರು 275 ವರ್ಷ ಹಿಂದಿನ ನಾಟಕ ಈಗ ನಮ್ಮನ್ನು ಮುಟ್ಟುವ ಪರಿ ಅಚ್ಚರಿಗೊಳಿಸುತ್ತದೆ. ನಾಟಕ ಪ್ರತಿಸಲ ರಂಗಕ್ಕೇರಿದಾಗಲೂ ಸಮಕಾಲೀನವಾಗುತ್ತದೆ, ಆ ಕ್ಷಣದ ನಾಟಕವಾಗಿ ಬಿಡುತ್ತದೆ. ಅದನ್ನು ಈ ನಾಟಕ ತಿಳಿಸಿಕೊಟ್ಟಿತು’ ಎಂದಿದ್ದಾರೆ.
©2024 Book Brahma Private Limited.