‘ದಯಾನದಿ ದಂಡೆಯ ಮೇಲೆ’ ಲೇಖಕ ಮೋದೂರು ತೇಜ ಅವರು ರಚಿಸಿರುವ ನಾಟಕ. ಈ ಕೃತಿಗೆ ರಂಗಕರ್ಮಿ, ಲೇಖಕ ಕೆ.ವೈ. ನಾರಾಯಣಸ್ವಾಮಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ.. ‘ದಯಾನದಿ ದಂಡೆಯ ಮೇಲೆ’ ಸಂಸ ಅವರಿಂದ ಕನ್ನಡದಲ್ಲಿ ನಿರ್ಮಾಣವಾಗಿರುವ ಚಾರಿತ್ರಿಕ ನಾಟಕ ಪರಂಪರೆಗೆ ಉತ್ತಮ ಸೇರ್ಪಡೆಯಾಗಿದೆ. ಕನ್ನಡದ ಶ್ರೇಷ್ಠ ನಾಟಕಕಾರರೆಲ್ಲರೂ ಚಾರಿತ್ರಿಕ ವಸ್ತುಗಳನ್ನು ಆಧರಿಸಿ ನಾಟಕ ಬರೆಯುವ ಮೂಲಕ ಮನುಷ್ಯ ಬದುಕು ಹಾದು ಬಂದಿರುವ ಹಿಂಸೆಯ ಲೋಕವನ್ನು ಅರ್ಥೈಸುವ ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ. ಜೊತೆಗೆ ಭಾರತೀಯರ ಮನೋ ಲೋಕವನ್ನು ಸಾವಿರಾರು ವರ್ಷಗಳಿಂದ ಕಾಡುತ್ತಿರುವ ಸಂಗತಿಗಳಲ್ಲಿ ಚಕ್ರವರ್ತಿ ಅಶೋಕನ ಕಳಿಂಗ ಯುದ್ಧದ ನಂತರ ಆತ ಹಿಂಸೆಯಿಂದ ಹಿಮ್ಮುಖನಾಗಿದ್ದು ಒಂದಾಗಿದೆ. ಅರಮನೆಗಳಲ್ಲಿ, ರಕ್ತಸಂಬಂಧಗಳಲ್ಲಿ ಅಧಿಕಾರಕ್ಕಾಗಿ ನಡೆಯುವ ಹುನ್ನಾರಗಳನ್ನು ರಾಮಾಯಣ, ಮಹಾಭಾರತ ಮಹಾಕಾವ್ಯಗಳೇ ತೆರೆದು ತೋರಿವೆ.
ಭಾರತೀಯ ಚರಿತ್ರೆಯಲ್ಲಿ ಮೌರ್ಯ ಸಾಮ್ರಾಜ್ಯದ ಪರ್ವ ಅತ್ಯಂತ ಮಹತ್ವದ್ದು, ಬಿಂದುಸಾರನ ನಂತರ ಸಿಂಹಾಸನಕ್ಕಾಗಿ, ನಡೆದ ದಾಯಾದಿ ಕಲಹವೇ ಈ ನಾಟಕದ ವಸ್ತು, ಮೋದೂರು ತೇಜ ರಂಗಕ್ರಿಯೆ ನಷ್ಟಗೊಳ್ಳದಂತೆ ಅಶೋಕನ ಬದುಕಿನ ಹಲವು ಮಜಲುಗಳನ್ನು ಕಟ್ಟಿಕೊಟ್ಟಿದ್ದಾರೆ. ದಾಯಾದಿ ಕಲಹ, ವೈದಿಕ ಹುನ್ನಾರ, ವ್ಯಕ್ತಿಗತ ಸ್ವಾರ್ಥ, ಅಸೂಯೆಗಳು ಸಮಾಜವನ್ನು ಹಿಂಸಾಮಯವಾಗಿಸುವ ನೆಲೆಗಳನ್ನು ಸೂಕ್ಷ್ಮವಾಗಿ ನಾಟಕದಲ್ಲಿ ಅನಾವರಣಗೊಳಿಸಿದ್ದಾರೆ, ಅಲ್ಲದೇ ನಾಟಕ ಮನುಷ್ಯನ ಬಹಿರಂಗ ಅಂತರಂಗಗಳಲ್ಲಿ ಏರ್ಪಟ್ಟ ಸಂಘರ್ಷಣೆಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇದು ನಮ್ಮ ಚರಿತ್ರೆ ಮತ್ತು ವರ್ತಮಾನವನ್ನು ಅರ್ಥೈಸುವ ಉತ್ತಮ ಬರಹವಾಗಿರುವುದು ಇದರ ಸಾಹಿತ್ಯ ಹೆಚ್ಚುಗಾರಿಕೆಯಾಗಿದೆ. ಇಂಥ ನಾಟಕ ಬರೆದ ಮೋದೂರು ತೇಜ ಅವರಿಗೆ ಅಭಿನಂದನಾರ್ಹರು ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.