ರಂಗಭೂಮಿ ಕಲಾವಿದೆ ಬಿ. ಜಯಶ್ರೀ ಹಾಗೂ ಲೇಖಕಿ ವಿ. ಆರ್. ಪ್ರತಿಭಾ ಅವರು ಬರೆದ ನಾಟಕ ಕೃತಿ ʻಕರಿಮಾಯಿʼ. ಕನ್ನಡ ಸಾಹಿತಿ ಚಂದ್ರಶೇಖರ ಕಂಬಾರರ ʻಕರಿಮಾಯಿʼ ಕಾದಂಬರಿ ಆಧಾರಿತ ನಾಟಕವಾಗಿದೆ. ಲೇಖಕರ ಮಾತಿನಲ್ಲಿ ಬಿ. ಜಯಶ್ರೀ ಅವರು, “ಕರಿಮಾಯಿ ಕಾದಂಬರಿಯ ಕತೆ ಒಂದು ರೀತಿ ಶಿವಕತೆ ಹೇಳುವ ರೀತಿ ಇದೆ. ಜೊತೆಗೆ ಮಧ್ಯೆ ಮಧ್ಯೆ ಲಗುಮವ್ವನ ಹಾಡಿನಲ್ಲಿ ಹೀಗೆ ಬರುತ್ತದೆ- ಎಂದಿದೆ. ಇದರಿಂದ ನನಗೆ ಪ್ರತಿ ಸನ್ನಿವೇಶದಲ್ಲೂ ಹಾಡಿನ ಮೂಲಕ ನಾಟಕದ ಸನ್ನಿವೇಶದ ಭಾವನೆಯನ್ನು ಹೇಳಲು ಅವಕಾಶ ಕಂಡುಬಂತು. ಶಿವಕತೆ ಹೇಳುವುದರ ಬದಲು ನಾಟಕಕ್ಕೆ ಸೂತ್ರಧಾರ – ಹಿಮ್ಮೇಳ - ಬಯಲಾಟದ ಪ್ರಕಾರ ಸೂಕ್ತವಾಗಿ ಹೊಂದುತ್ತದೆ. ಕಾದಂಬರಿ ಓದುತ್ತಿದ್ದಾಗ ಇದು ಒಂದು ಕ್ಲಾಸಿಕ್ ನಾಟಕ ಆಗುವುದರಲ್ಲಿ ಸಂದೇಹವೇ ಇಲ್ಲ ಎನಿಸಿತು. ಎಂಥಾ ಕಾಲಕ್ಕೂ ಸರಿ ಹೊಂದುವ 'ಎವರ್‌ಗ್ರೀನ್' ಕಥೆ ಕರಿಮಾಯಿಯದು. ಕತೆ ಓದುತ್ತಿದ್ದರೆ ನನ್ನ ಅಜ್ಜಿ ಹೇಳುತ್ತಿದ್ದ “ಶಿವಕತೆ” ನೆನಪಾಗುತ್ತಿತ್ತು. ಕಾದಂಬರಿಯ ಚಿತ್ರಣದಲ್ಲಿ ಕತೆಗಾರ ನೀಡುತ್ತಿದ್ದ ವ್ಯಕ್ತಿ ಪರಿಚಯ, ಸನ್ನಿವೇಶಗಳ ವರ್ಣನೆ ಈ ಎಲ್ಲಕ್ಕಿಂತಲೂ ಪ್ರತಿಕ್ಷಣ ಪ್ರತಿ ಘಟನೆಗಳಲ್ಲಿ ಒಬ್ಬರನ್ನೊಬ್ಬರು ತಿಳಿದೋ ತಿಳಿಯದೆಯೋ "ಬೇಟೆ" ಆಡುತ್ತಿದ್ದ ರೀತಿಯ ಕಥಾಸಂವಿಧಾನ ರೋಮಾಂಚನ ಉಂಟುಮಾಡುತ್ತಿತ್ತು. ಕತೆ ಹೇಳೋ ರೀತಿ ಬಯಲಾಟದ ನೆನಪು ತರುತ್ತಿತ್ತು. ಕೂಡಲೇ ಹೊಳೆದದ್ದು ಕತೆಗಾರನ ಕಥನದ ಜೊತೆಗೆ ಹಾಡುಗಳನ್ನೂ ಸನ್ನಿವೇಶಗಳಿಗೆ ತಕ್ಕಂತೆ ಅಳವಡಿಸಿದರೆ; ಕಾದಂಬರಿಯಲ್ಲಿ ಬರುವ ಭಾವನೆಗಳನ್ನು ನಾಟಕ ರೂಪದಲ್ಲಿ ಸುಲಭವಾಗಿ ಪ್ರೇಕ್ಷಕನ ಮನಸ್ಸಿಗೆ ಮುಟ್ಟಿಸಲು ಅನುಕೂಲವಾಗುವುದರಲ್ಲಿ ಸಂಶಯವೇ ಇಲ್ಲವೆನಿಸಿತು. ಹೀಗೆ ಸಂಗೀತದ ಜೋಡಣೆಯಿಂದ ಮೂಲ ಕಥೆಯ ಭಾವಾರ್ಥ ಬಹಳ ಪರಿಣಾಮಕಾರಿಯಾಗಿ ಮೂಡಿದ್ದೂ ಅಲ್ಲದೆ ಅನ್ಯಭಾಷೀಯರಿಗೂ ಕತೆ ಮನ ಮುಟ್ಟುವಲ್ಲಿ ಯಶಗಳಿಸಿತು. ಈ ಕಾದಂಬರಿಯನ್ನು ರಂಗಕ್ಕೆ ಅಳವಡಿಸಿದರೆ, ಯಾವತ್ತೂ ಪ್ರತಿ ಪ್ರದರ್ಶನವೂ ಹಚ್ಚ ಹಸುರಾಗಿಯೇ ಸದಾಕಾಲ ವಿಜೃಂಭಿಸುವುದರಲ್ಲಿ ನನಗೆ ಎಳ್ಳಷ್ಟೂ ಸಂಶಯ ಇರಲಿಲ್ಲ. ಅಷ್ಟು ಗಟ್ಟಿತನ ಈ ಕಾದಂಬರಿಯ ವಸ್ತುವಿನಲ್ಲಿದೆ. ಕಾದಂಬರಿಯನ್ನು ಸುಮಾರು 20 ಬಾರಿ ಓದಿ ದೃಶ್ಯಗಳನ್ನಾಗಿ ಮಾರ್ಪಾಡು ಮಾಡಿ, ಸಂಭಾಷಣೆ ಅಳವಡಿಸಿಕೊಂಡು, ಪಾತ್ರಗಳಿಗನುಗುಣವಾದ ನಟರ ಆಯ್ಕೆಯನ್ನು ಮನಸ್ಸಿನಲ್ಲೇ ರೂಪಿಸಿಕೊಂಡೆ” ಎಂದು ಹೇಳಿದ್ದಾರೆ.
©2024 Book Brahma Private Limited.