‘ನಾಟಕಗಳಲ್ಲಿ ಅವ್ವ’ ಚಂದ್ರಶೇಖರ ವಸ್ತ್ರದ ಅವರ ಕೃತಿ. ಇದು ತಾಯಿ ಹಾಗೂ ತಾಯ್ತನವನ್ನು ಕೇಂದ್ರ ವಸ್ತುವನ್ನಾಗಿರಿಸಿಕೊಂಡು ರಚಿಸಿದ ಐದು ನಾಟಕಗಳ ಸಂಕಲನ. ವೃತ್ತಿರಂಗಭೂಮಿಯ ಎರಡು ನಾಟಕಗಳು, ಎರಡು ಹವ್ಯಾಸಿ ನಾಟಕಗಳು ಹಾಗೂ ಒಂದು ಬಾನುಲಿ ರೂಪಕವನ್ನೊಳಗೊಂಡಿದೆ. ತಾಯಿ ಹಾಗೂ ತಾಯ್ತತನದ ಹಲವು ಮಜಲುಗಳನ್ನು ಬಿಚ್ಚಿ ಇಡುತ್ತದೆ. ತನ್ನದಲ್ಲದ ಮಗುವಿಗೆ ತಾಯಿಯಾಗುವ ಪ್ರಸಂಗ ಒದಗಿದ ಲಂಬಾಣಿ ಹೆಣ್ಣೊಬ್ಬಳು, ಲೋಕನಿಂದೆ, ಮಾನಸಿಕ ಹಿಂಸೆ ಏನೆಲ್ಲವನ್ನು ಸಹಿಸಿ ತಾಯ್ತನವನ್ನು ಮೆರೆವ ನಾಟಕ ಹಡೆದವ್ವ ತಾಯಿ ಎನ್ನುವುದು. ವಾಸ್ತವವಾಗಿ ಹೆಣ್ಣಿನ ಜೈವಿಕತೆಯನ್ನು ನೆನಪಿಸುವ ಪದವಾದರೂ ತಾಯ್ತನ ಎನ್ನುವುದು ಕೇವಲ ಹೆರುವಿಕೆಗೆ ಸಂಬಂಧಿಸಿದ್ದಲ್ಲ ಅದೊಂದು ಮಾನಸಿಕ ಸ್ಥಿತಿ ಎನ್ನುವುದನ್ನು ಸಾರುವ ಬ್ರೆಕ್ಟ್ ನ ಕಕೇಶಿಯನ್ ಚಾಕ್ ಸರ್ಕಲ್ ನಿಂದ ಪ್ರೇರಿತವಾದ ನಾಟಕ ‘ಧರ್ಮಪುರಿಯ ಶ್ವೇತವೃತ್ತ’. ಮಗ ದುಷ್ಟನಾಗಿರಲಿ ಶಿಷ್ಟನಾಗಿರಲಿ, ಅವನಿಗಾಗಿ ಮಿಡಿವ ತಾಯಿಯ ಹೃದಯ ಸದಾ ವಾತ್ಸಲ್ಯಮಯ ಎನ್ನುವುದನ್ನು ಬಿಂಬಿಸುವ ನಾಟಕ -ತಾಯಿಯ ಕರಳು. ತಾಯಿಯ ಪಾಲಿಗೆ ತನ್ನ ಮಕ್ಕಳಷ್ಟೇ ಮಕ್ಕಳಲ್ಲ. ಹಸಿದ ಹೊಟ್ಟೆಗಳನ್ನು ಹೊತ್ತವರೂ ಮಕ್ಕಳೇ ಎಂಬುದನ್ನು ಸಾರುವ ನಾಟಕ -ರೊಟ್ಟಿ. ಪಿ. ಲಂಕೇಶ ಅವರ ಕವಿತೆ, ಆತ್ಮಚರಿತ್ರೆ, ಬದುಕನ್ನಾಧರಿಸಿ ರಚಿಸಿದ ತಾಯ್ತನದ ವಾಸ್ತವತೆಯನ್ನು ಚಿತ್ರಿಸುವ ನಾಟಕ -ಅವ್ವ. ಈ ಐದು ನಾಟಕಗಳನ್ನೊಳಗೊಂಡ ಈ ಕೃತಿ, ಏಕ ವಿಷಯ ಕೇಂದ್ರಿತ ಕನ್ನಡದ ಮೊದಲ ನಾಟಕ ಸಂಕಲನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
©2024 Book Brahma Private Limited.