ಕನ್ನಡ ಸಾಹಿತ್ಯ ಪರಿಷತ್ತು ಸಾಮೂಹಿಕ ಸಂಶೋಧನಾತ್ಮಕ ವ್ಯವಸಾಯಕ್ಕೆ ಗ್ರಂಥ ಪ್ರಕಟಣೆ ರೂಪದಲ್ಲಿ ಅಭಿವ್ಯಕ್ತಿಯನ್ನು ಕೊಡುವ ತ್ರೈವಾರ್ಷಿಕ ಯೋಜನೆಯ ಕಾರ್ಯಕ್ರಮವೊಂದನ್ನು ಹಾಕಿಕೊಂಡಿತ್ತು. ಇಂಥ ಉದ್ದೇಶದಿಂದ ಪ್ರಕಟಿಸುತ್ತಿರುವ ಸಂಪ್ರಬಂಧಗಳು ಸಾಲಿನಲ್ಲಿ ‘ಕನ್ನಡದಲ್ಲಿ ಗೀತನಾಟಕಗಳು’- ಒಂದು ಅಧ್ಯಯನ ಎಂಬ ಸಂಶೋಧನ ಗ್ರಂಥ ಡಾ.ವಿಜಯಾ ಸುಬ್ಬರಾಜ್ ಅವರದು. ಈ ಅಧ್ಯಯನದಲ್ಲಿ ವಿಶೇಷವಾಗಿ ಡಾ. ಪು.ತಿ.ನ ಮತ್ತು ಡಾ. ಶಿವರಾಮ ಕಾರಂತ ಅವರ ಕೃತಿಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ನಾಟ್ಯ ಅಥವಾ ನಾಟಕ-ಸಂಗೀತ ನೃತ್ಯ, ಚಿತ್ರ, ಶಿಲ್ಪಗಳ ರೂಪದಲ್ಲಿ ದೃಶ್ಯ ಮತ್ತು ಶ್ರವ್ಯಾಂಗಗಳನ್ನು ಒಳಗೊಂಡ ಅನೇಕ ಪ್ರಭೇದಗಳಾಗಿ ಕವಲೊಡೆದು, ಪದ್ಯ ನಾಟಕ, ಗದ್ಯ ನಾಟಕ, ನೃತ್ಯ ನಾಟಕ, ಗೀತ ನಾಟಕ ಇತ್ಯಾದಿ ಸಂಪ್ರದಾಯಗಳಾಗಿ ಮುಂದುವರೆದವು.
ಕಾಲ ಮತ್ತು ಜನಾಭಿರುಚಿಗೆ ಅನುಗುಣವಾಗಿ ನಾಟ್ಯಾಭಿವ್ಯಕ್ತಿಯ ಮಾಧ್ಯಮ ಪದ್ಯವೋ, ನೃತ್ಯ ಗೀತವೋ ಆಗಿ ಜನ ಮನ್ನಣೆಯನ್ನು ಪಡೆಯುತ್ತಲೇ ಬಂದಿದೆ. ನಾಟಕದಲ್ಲಿ ರಮಣೀಯತೆ, ರಂಜಕತೆಯ ಅಂಶಗಳನ್ನು ಉಳಿಸಿಕೊಂಡು ಬುದ್ಧಿಗಿಂತ ಭಾವಸ್ಪಂದನೆಗಳಿಗೆ ಹೆಚ್ಚು ಅವಕಾಶ ಕಲ್ಪಿಸಿಕೊಡುವ, ಪ್ರೇಕ್ಷಣೀಯ ಪರಿಣಾಮಗಳನ್ನು ಹೆಚ್ಚು ನಿರೀಕ್ಷಿಸುವ ಗೀತನಾಟಕಗಳ ರಚನೆ ನಡೆಯುತ್ತಿರುವುದು ಪ್ರಶಂಸಾರ್ಹ ಸಂಗತಿ. ಈ ಗೀತನಾಟಕಗಳು ತೀರಾ ಇತ್ತೀಚಿನ ನಾಟ್ಯ ರೂಪಗಳೆನಿಸಿದರೂ ಇವುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಪ್ರೇರಣೆ ನೀಡಿರುವ, ಪ್ರಾಚೀನ ನಾಟ್ಯ ಸಂಪ್ರದಾಯಗಳು ಪಾಶ್ಚಿಮಾತ್ಯ ಸಂಗೀತ ನಾಟ್ಯ ಸಂಪ್ರದಾಯಗಳೂ ಸಂಖ್ಯೆಯಲ್ಲಿ ಅಪಾರವಾಗಿದೆ. ಡಾ. ವಿಜಯಾ ಸುಬ್ಬರಾಜ್ ಅವರು ಪ್ರಸ್ತುತ ಸಂಪ್ರಬಂಧದಲ್ಲಿ ಗೀತನಾಟಕಗಳ ಬಗೆಗೆ ಕಂಡುಬಂದಿರುವ ಉಪೇಕ್ಷೆಗಳ ಕಾರಣಗಳನ್ನು ತಿಳಿಸುವುದರೊಡನೆ, ಕನ್ನಡದಲ್ಲಿ ಅವುಗಳ ಬೆಳವಣಿಗೆಯನ್ನೂ ಅವುಗಳಿಗೆ ದೊರೆತ ಪ್ರೇರಣೆ ಪ್ರಭಾವಗಳ ಹಿನ್ನೆಲೆಯನ್ನೂ ಗುರುತಿಸಿದ್ದಾರೆ.
©2024 Book Brahma Private Limited.