ಲೇಖಕ ಚನ್ನಕೇಶವ ಅವರ ಕೃತಿ ʼತೂಗು ತೊಟ್ಟಿಲು ಮತ್ತು ಇತರ ನಾಟಕಗಳುʼ. ಮಕ್ಕಳ ನಾಟಕ ಹೇಗಿರಬೇಕು ಎಂಬುದಕ್ಕೆ ಈ ಪುಸ್ತಕವು ಒಂದು ಒಳ್ಳೆಯ ಉದಾಹರಣೆ ಎನ್ನಬಹುದು. ಇದು ಗಣಪತಿ ಹಾಗೂ ಇಲಿಯ ಕುರಿತಾದ ಕತೆ. ಡೊಳ್ಳು ಹೊಟ್ಟೆಯ ಗಣಪತಿಯು ತನ್ನ ವಾಹನವಾಗಿ ಚಿಕ್ಕದಾದ ಕ್ಷುದ್ರಜೀವಿಯನ್ನುಇಟ್ಟುಕೊಂಡು ಮಾಡುತ್ತಿರುವ ಶೋಷಣೆಯಿಂದ ನೊಂದು ಒಂದು ದಿನ ಅವನಿಂದ ತಪ್ಪಿಸಿಕೊಂಡು ತನ್ನ ಸಂಸಾರ ಸಮೇತ ಒಬ್ಬ ಮುದಿ ದಂಪತಿಗಳ ಮನೆಯಲ್ಲಿ ವಾಸವಾಗಿರುತ್ತವೆ. ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳಿಸಿ ಇಲ್ಲಿ ಒಂಟಿಯಾಗಿರುವ ಈ ಮುದಿ ದಂಪತಿಗಳು ಏಕತಾನತೆ ಕಳೆಯಲು ಒಂದು ಬೆಕ್ಕನ್ನು ತಂದು ಸಾಕತೊಡಗುತ್ತಾರೆ. ಇದರಿಂದ ದಿಕ್ಕೆಟ್ಟ ಇಲಿಯ ಸಂಸಾರ ಅಲ್ಲಿಯೂ ತಮ್ಮ ನೆಲೆ ಕಳೆದುಕೊಂಡು ಕಾಡಿಗೆ ಹೋಗುತ್ತವೆ. ಇಲ್ಲಿಂದ ಮತ್ತೊಂದು ನಾಟಕವಾದ ಕಾಡಿನಲ್ಲಿ ಕಥೆ ಶುರುವಾಗುತ್ತದೆ. ಕಾಡಿನಲ್ಲಿ ಮತ್ತೊಂದು ಬಗೆಯ ಕಷ್ಟಗಳನ್ನು ಆ ಇಲಿಗಳು ಅನುಭವಿಸುತ್ತವೆ! ಮಕ್ಕಳ ನಾಟಕ ಎಂದ ಕೂಡಲೆ ಕೆಲವರು ಒಂದೋ ಬೋಧನೆಗಳನ್ನು ಹೇಳುವುದೋ ಅಥವಾ ಅತಿಯಾದ ಅತಿಮಾನುಷ ಪಾತ್ರಗಳ ಭ್ರಮಾಲೋಕ ಸೃಷ್ಟಿಸುವಂತೆ ಮಾಡುವುದು ಎಂದುಕೊಂಡಿರುತ್ತಾರೆ. ಆದರೆ ಈ ನಾಟಕ ರಂಜನೆಯ ಮೂಲಕವೇ ನಮ್ಮ ಸುತ್ತ ಮುತ್ತ ನಡೆಯುತ್ತಿರುವ ವರ್ಣಭೇದ, ಜಾತಿ ಭೇದ, ಕೋಮುವಾದ ಮೊದಲಾದ ಜಟಿಲ ವಸ್ತು ವಿಷಯಗಳನ್ನು ಬಹಳ ಸರಳವಾಗಿ ಮಕ್ಕಳಷ್ಟೆ ಅಲ್ಲ ಅದನ್ನು ನೋಡುವ ದೊಡ್ಡವರಿಗೂ ಮನಮುಟ್ಟುವಂತೆ ಹೇಳುತ್ತದೆ.
©2024 Book Brahma Private Limited.