ಹೂಲಿ ಶೇಖರ್ ಅವರ ನಾಟಕ ಕೃತಿ”ಕರಿಯು ಕನ್ನಡಿಯೊಳಗೆ’. ಆಕೃತಿ ಅಂತರ್ಜಾಲ ಪತ್ರಿಕೆಯ ಮುಖ್ಯ ಸಂಪಾದಕರು, ಮೂಡಲ ಮನೆ ಖ್ಯಾತಿಯ ಸಂಭಾಷಣಕಾರರು, ನಾಟಕಕಾರರು ಅದ ಹೂಲಿಶೇಖರ್ ಅವರು ಬರೆದ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕೃತಿ. ಪುಸ್ತಕಕ್ಕೆ ಡಾl ಏಚ್. ಎಸ್. ಗೋಪಾಲರಾವ್ ಅವರು ಮುನ್ನುಡಿ ಬರೆದಿದ್ದಾರೆ.
ಡಾ. ಎಂ.ಎಂ ಕಲಬುರ್ಗಿ, ಯೂನಿವರ್ಸಿಟಿ ಪ್ರೊಫೆಸರ್, ಇತಿಹಾಸ ಸಂಶಧಕರು ಆಗಿದ್ದ ಇವರ ಹೆಸರನ್ನು ನಾಟಕದ ಮುಖ್ಯ ನಿರೂಪಕರಾಗಿ ಬಳಸಿಕೊಂಡಿರುವುದು ಇಲ್ಲಿನ ನಾಟಕದ ಕಥೆಗೆ ಸಂದರ್ಭೋಚಿತ. ಪ್ರಸ್ತುತ ಈ ನಾಟಕ ಚಿಕ್ಕದಾಗಿದ್ದರೂ ಇದರ ಮೂಲಕ ಲೇಖಕರು ಹೇಳಲು ಹೊರಟಿರುವ ಸಂದೇಶ ಮಾತ್ರ ದೊಡ್ಡದು. ಆದರೆ ಅರ್ಥ ಮಾಡಿಕೊಳ್ಳುವ, ಅಳವಡಿಸಿಕೊಳ್ಳುವವರು ಸಿಗುವುದು ಅಪರೂಪ. ಇದನ್ನೇ ಮುನ್ನುಡಿಯಲ್ಲಿ "ಈ ನಾಟಕದ ಕಥನ ಮತ್ತು ರಂಗರೂಪವು ಕನ್ನಡಿಯಲ್ಲಿ ಕಂಡಷ್ಟೇ. ಅದಕ್ಕಿಂತ ಹೆಚ್ಚಾಗಿ ನಿರೀಕ್ಷಿಸಲು ಸಾಧ್ಯವಿಲ್ಲ" ಎಂದಿದ್ದಾರೆ ಡಾl ಏಚ್.ಎಸ್.ಗೋಪಾಲರಾವ್ ಅವರು. ಈ ಮಾತುಗಳನ್ನು ಒಪ್ಪಲೇ ಬೇಕಾದ ಅನಿವಾರ್ಯ ವಾದಂತಹ ಕಾಲಘಟ್ಟದಲ್ಲಿ ನಾವು ಬಂದು ನಿಂತಿದ್ದೇವೆ.
ಬಸವ ಪೂರ್ವ ಯುಗ ಹಾಗೂ ಇಂದಿನ ದಿನಗಳ ನಡುವಿನ ರಾಜಕೀಯ, ಧರ್ಮ ಜಾತೀಯತೆಗಳ ನಡುವಿನ ಸಂಘರ್ಷ ವನ್ನು ನಮ್ಮೆದುರು ಬಿಚ್ಚಿಡುತ್ತಾ ಹೋಗುವ ನಾಟಕ ಇದು, ಇಲ್ಲಿ ನಿರೂಪಕರಾದ ಕಲಬುರ್ಗಿ ಮತ್ತು ಹನುಮ್ಯ ನ ಮಾತುಗಳನ್ನು ಎಲ್ಲಿಯೂ ಅಲ್ಲಗಳೆಯುವಂತಿಲ್ಲ. ಇತಿಹಾಸ ಮತ್ತು ವರ್ತಮಾನ ಎರಡನ್ನೂ ಒಟ್ಟಿಗೆ ಹೇಳುತ್ತಾ ಹೋಗುತ್ತಾರೆ ಲೇಖಕರು. ಪುರಾಣಗಳೇ ಆಗಲಿ, ಶರಣರ ವಚನಗಳೇ ಆಗಲೀ, ದಾಸರ ಪದಗಳೇ ಆಗಲಿ ಅದರಲ್ಲಿ ಇರುವ ಸಾರವನ್ನು ಅರಿತು ಜೀವನಕ್ಕೆ ಅಳವಡಿಸಿಕೊಳ್ಳದ ಹೊರತು ಅವುಗಳನ್ನು ಉಲ್ಲೇಖಿಸುತ್ತಾ, ರಾಗವಾಗಿ ಹಾಡುತ್ತಾ ಇರುವುದರಿಂದ ಯಾವುದೇ ರೀತಿಯ ಸಾಮಾಜಿಕ ಬದಲಾವಣೆ ಸಾಧ್ಯವೇ ಇಲ್ಲ.
©2024 Book Brahma Private Limited.