‘ಹಕ್ಕಿಗೊಂದು ಗೂಡುಕೊಡಿ’ ನಾ.ಡಿಸೋಜಾ ಅವರ ಕೃತಿಯಾಗಿದೆ. ಪ್ರಕೃತಿ ಎಲ್ಲರಿಗೂ ಒಂದೇ. ಮಾನವ , ಪಶು ,ಪಕ್ಷಿ ಎಂದೆಲ್ಲ ಅದು ಭೇದ ಭಾವ ಮಾಡುವದಿಲ್ಲ. ಎಲ್ಲರಿಗೂ ಬದುಕಲು ಅಷ್ಟೇ ಅವಕಾಶ , ಅದೇ ಹೋರಾಟವನ್ನು ಇತ್ತದ್ದು ಸೃಷ್ಟಿಯೇ . ಹಕ್ಕಿಗಳು ಗೂಡು ಕಟ್ಟಿ ಸಂಸಾರ ಹೂಡುವುದು , ಮೊಟ್ಟೆ ಇಟ್ಟು ಕಾವು ಕೊಡುವುದು,ಮೊಟ್ಟೆಯಿಂದ ಹೊರಬಂದ ಪುಟ್ಟ ಪುಟ್ಟ ಮರಿಗಳನ್ನು ರೆಕ್ಕೆ ಬಲಿಯುವ ವರೆಗೆ ಕಾಪಾಡುವುದು, ಅವುಗಳಿಗೆ ಕಾಳು ಹುಳು ಹೆಕ್ಕಿ ತಂದು ಗುಟುಕು ನೀಡುವುದು, ಹೂವಿನ ಮಕರಂದ ಹೀರಿ ಅವುಗಳ ಬಾಯಿಗೆ ಸುರಿಸಿ ತಣಿಸುವುದು ಇವೆಲ್ಲ ಹಕ್ಕಿಗಳಿಗೆ ಅತ್ಯಂತ ಸಹಜವಾದ ಕ್ರಿಯೆಗಳು . ಈ ಪ್ರಕ್ರಿಯೆಯಲ್ಲಿ ತಮ್ಮ ಹಾರಲಾರದ ಮರಿಗಳನ್ನು ಅವು ಗಿಡುಗದಂಥ ಪಕ್ಷಿಗಳಿಂದ , ಕಾಡುಬೆಕ್ಕುಗಳಂಥ ಪ್ರಾಣಿಗಳಿಂದ ರಕ್ಷಿಸಲು ಹೆಣಗಾಡುತ್ತಲೇ ಇರುತ್ತವೆ . ಕೆಲವೊಮ್ಮೆ ತಮ್ಮ ಈ ಪ್ರಯತ್ನದಲ್ಲಿ ಅಸಫಲರಾಗಿ ಮರಿಗಳನ್ನು ಕಳೆದುಕೊಂಡರೂ ಮತ್ತೆ ಮತ್ತೆ ತಮ್ಮನ್ನು ಸಂಭಾಳಿಸಿಕೊಂಡು ಇದ್ದ ಮರಿಗಳನ್ನು ಕಾಯುವದರಲ್ಲಿ ತೊಡಗಿಕೊಳ್ಳುತ್ತವೆ. ಏಕೆಂದರೆ ಇವೆಲ್ಲ ನಿಸರ್ಗ ದತ್ತ ಹೋರಾಟಗಳು , ಹೊಂದಾಣಿಕೆಗಳು . ನಿಜಕ್ಕೂ ಈ ಕುರಿತಾದ ತಿಳುವಳಿಕೆಯನ್ನು ಸರಿಯಾದ ರೀತಿಯಲ್ಲಿ ನೀಡಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಇಂದು ಹಿಂದೆಂದಿಗಿಂತಲೂ ಅವಶ್ಯ. ಇಂಥ ಕೃತಿಗಳು ಪಠ್ಯಗಳಾಗುವದು ಅತ್ಯವಶ್ಯ .
©2024 Book Brahma Private Limited.