ಸಂಗೀತ ಸಾಮ್ರಾಟ ಪುಟ್ಟರಾಜ ಗವಾಯಿಗಳು ಹಾಗೂ ಇತರೆ ಎರದು ನಾಟಕಗಳ ಕೃತಿಯನ್ನು ಲೇಖಕ ಲಿಂಗರಾಜ ರಾಮಾಪುರ ಅವರು ರಚಿಸಿದ್ದು, ಮಕ್ಕಳ ಈ ನಾಟಕಗಳು ಮಕ್ಕಳ ಬೋಧನೆಗೆ ಮುದ ನೀಡುತ್ತಿತವೆ.
ಇಂದು ಪ್ರಾಥಮಿಕ ಶಿಕ್ಷಣದ ಮಕ್ಕಳ ಕಲಿಕೆಯಲ್ಲಿ ಏನೆಲ್ಲಾ ಪ್ರಯೋಗಗಳು ನಿರಂತರವಾಗಿ ನಡೆಯುತ್ತಲೇ ಇವೆ. ಹತ್ತು ಹದಿನೈದು ವರ್ಷಗಳ ಹಿಂದಕ್ಕೆ ನಿಂತು ನೋಡಿದಾಗ ಪ್ರಾಥಮಿಕ ಶಿಕ್ಷಣದ ಕಲಿಕೆಯಲ್ಲಿ ಏಕತಾನತೆ ಇತ್ತು. ಕಲಿಸುವ ಕ್ರಿಯೆಯಲ್ಲಿ ತಲೆ ತಲಾಂತರದಿಂದ ಬಂದ ಕಂಠಪಾಠ ಪದ್ಧತಿಯೇ ಹೆಚ್ಚು ಮುಂದುವರೆದುಕೊಂಡು ಬಂದಿತ್ತು. ಕಾಲಕ್ರಮೇಣ ಸುಧಾರಣೆಯ ಗಾಳಿ ಬೀಸಿ ಹತ್ತಾರು ಆಯೋಗಗಳು ನೂರಾರು ಸಲಹೆಗಳನ್ನು ನೀಡಿದವು. ಅವುಗಳ ಪ್ರಯೋಗ ನಡೆಯುತ್ತಾ ಸಾಗಿತು. ಅದರಲ್ಲಿ ತುಂಬಾ ಪ್ರಮುಖವಾದದ್ದು ಮತ್ತು ಪರಿಣಾಮಕಾರಿಯಾದದ್ದು ಪಠ್ಯಾಧಾರಿತ ನಾಟಕಗಳು.
ಪಠ್ಯಪುಸ್ತಕವೇ ಸರ್ವಸ್ವ ಎಂದುಕೊಂಡು ಕೇವಲ ನಾಲ್ಕು ಗೋಡೆಗಳ ಮಧ್ಯ ಪಾಠ ಮಾಡುವುದು ಮಕ್ಕಳ ಬೆಳವಣಿಗೆಗೆ ಸಹಕಾರಿಯಲ್ಲ. ಕೇವಲ ಮಾಹಿತಿ ನೀಡುವ ಪ್ರಕ್ರಿಯೆ ಪರಿಪೂರ್ಣ ಶಿಕ್ಷಣ ಎನಿಸಿಕೊಳ್ಳದು. ಮುಂದೆ ಸಮಾಜದಲ್ಲಿ ಕ್ರಿಯಾಶೀಲ ನಾಗರಿಕರಾಗಿ ಬಾಳಬೇಕಾದ ಮಕ್ಕಳು ಚಿಕ್ಕವರಿರುವಾಗಲೇ ಸುತ್ತಲಿನ ಪರಿಸರ, ಸಮಾಜದ ಕುರಿತಾಗಿ ತಮ್ಮಲ್ಲಿಯೇ ಆಲೋಚನೆ ಮಾಡಿ ಸರಿ ದಾರಿಯಲ್ಲಿ ನಡೆಯುವಂತೆ ಮಾಡುವ ಸಾಹಿತ್ಯ ರಚನೆ ಇದೀಗ ಅಗತ್ಯವಾಗಿದೆ. ಇದಕ್ಕೆ ಪೂರಕವಾಗಿದ್ದು ಪಠ್ಯಾಧಾರಿತ ನಾಟಕಗಳು.
ಮಕ್ಕಳ ಕಲಿಕೆಯ ಕ್ರಿಯೆಯಲ್ಲಿ ಅತ್ಯಂತ ಹೆಚ್ಚು ಪರಿಣಾಮ ಬೀರುವಂಥದ್ದು ಅಭಿನಯದ ಮೂಲಕ ತಿಳಿಸುವ ಕ್ರಿಯೆ. ಇದು ಮಕ್ಕಳಿಂದ ಮಕ್ಕಳಿಗೆ ಹೇಳಿಸುವ ಕಲೆ. ಪಾಠದಲ್ಲಿ ಬರುವ ಪಾತ್ರಗಳಿಗೆ ಸಂಭಾಷಣೆ ಸಿದ್ಧಪಡಿಸಿ ಮಕ್ಕಳಿಂದ ರಂಗದ ಮೇಲೆ ಅಭಿನಯಿಸುವಂತೆ ಮಾಡಿದಾಗ, ಮಕ್ಕಳು ಪಾತ್ರಗಳಿಗೆ ಜೀವ ತುಂಬಿ ಸ್ವಚ್ಛಂದವಾಗಿ ನಲಿದಾಡುತ್ತಾರೆ. ಇದರಿಂದ ಕಲಿಕೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ವಿಷಯ ಯಾವುದೇ ಇರಲಿ. ವಿಜ್ಞಾನ, ಸಮಾಜ, ಗಣಿತದ ಯಾವುದೇ ಅಮೂರ್ತ ಕಲ್ಪನೆಗಳನ್ನು ಮೂರ್ತೀಕರಿಸಿ ಮಕ್ಕಳಿಗೆ ಸುಲಭವಾಗಿ ತಿಳಿಸುವಂತೆ ಮಾಡುವಲ್ಲಿ ಪಠ್ಯಾಧಾರಿತ ನಾಟಕಗಳು ಖಂಡಿತಾ ಯಶಸ್ವಿಯಾಗುತ್ತವೆ.
ಪಠ್ಯಾಧಾರಿತ ನಾಟಕಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಧಾರವಾಡದ ಜಿಲ್ಲಾ ತರಬೇತಿ ಮತ್ತು ಶಿಕ್ಷಣ ಸಂಸ್ಥೆ(ಡೈಟ್) ಕಳೆದ 10 ವರ್ಷಗಳಿಂದ ಶಿಕ್ಷಕರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದು, ಪಠ್ಯಾಧಾರಿತ ನಾಟಕಗಳ ಸ್ಪರ್ಧೆ, ಶಿಕ್ಷಕರಿಗೆ ನಾಟಕ ರಚನೆ ಕಾರ್ಯಾಗಾರ, ನಾಟಕಗಳಿಗೆ ಪ್ರೊತ್ಸಾಹ ಧನ ನೀಡುತ್ತಾ ಬಂದಿದೆ. ಇತ್ತೀಚೆಗೆ ಹುಬ್ಬಳ್ಳಿ ಕನ್ನಡ ಸಾಹಿತ್ಯ ಪರಿಷತ್ತು ಪಠ್ಯಾಧಾರಿತ ನಾಟಕಗಳ ಮೇಲೆ ಬೆಳಕು ಚೆಲ್ಲಿ, ಪಠ್ಯಾಧಾರಿತ ನಾಟಕಗಳ ವಿಮರ್ಶೆಯನ್ನು ಹಮ್ಮಿಕೊಂಡಿದ್ದು ಸ್ಮರಿಸಬಹುದಾಗಿದೆ.
ಒಟ್ಟಿನಲ್ಲಿ ಕೇವಲ ಶುಷ್ಕವಾದ ಮಾಹಿತಿ ನೀಡುವುದು ಶಿಕ್ಷಣ ಎನಿಸದು. ಬೋಧಿಸುವ ವಿಷಯವಸ್ತು ಆಧರಿಸಿ, ಕಾಲ್ಪನಿಕ ಚಿತ್ರಗಳನ್ನು ರೂಪಿಸಿ, ಮಾತುಗಾರಿಕೆ ಹೆಣೆದು, ಪಾತ್ರಗಳನ್ನು ಸೃಷ್ಟಿಸಿ ಮಕ್ಕಳಿಂದ ಮಕ್ಕಳಿಗೆ ಚುರುಕಾಗಿ, ವೇಗವಾಗಿ, ವಿಶಿಷ್ಟವಾಗಿ, ನಿರ್ದಿಷ್ಟವಾಗಿ ಮುಟ್ಟಿಸಲು ಸಾಧ್ಯವಾಗುವ ಶಿಕ್ಷಣ ಅವಶ್ಯ. ಅದು ನಾಟಕಗಳ ಮೂಲಕ ಮಾತ್ರ ಸಾಧ್ಯ. ನಾಟಕಗಳ ಮೂಲಕ ಹಾಡು, ಕೋಲಾಟ, ಹಾವಭಾವ, ವೇಷಭೂಷದ ಮೂಲಕ ನಮ್ಮ ಜನಪದವನ್ನು, ಸಂಸ್ಕøತಿಯನ್ನು ಬಿಂಬಿಸಲು ಅವಕಾಶವಾಗುತ್ತದೆ.
ಜೀವನವೊಂದು ನಾಟಕ ಕಲೆ. ಅಭಿನಯ ಕಲೆ ಗೊತ್ತಿದ್ದವರು ಜೀವನದ ಪಾತ್ರವನ್ನೂ ಚೆನ್ನಾಗಿ ನಿರ್ವಹಿಸಬಲ್ಲರು. ಎಳೆ ವಯಸ್ಸಿನ ಮಕ್ಕಳಿಗೆ ಸಂತೋಷಕರ ವಾತಾವರಣ ನಿರ್ಮಾಣ ನಾಟಕಗಳಿಂದ ಮಾತ್ರ ಸಾಧ್ಯ.
-ಡಾ.ಬಿ.ಕೆ.ಎಸ್.ವರ್ಧನ್
ನಿರ್ದೇಶಕರು, ಆಯುಕ್ತರ ಕಛೇರಿ, ಧಾರವಾಡ
©2024 Book Brahma Private Limited.