‘ಮದುವೆಯ ಆಟಗಳು ಕೃತಿಯು ಎಚ್.ಎಸ್. ಶಿವಪ್ರಕಾಶ್ ಅವರ ನಾಟಕ ಸಂಕಲನವಾಗಿದೆ. ಸಂಕಲನದಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಈ ಸಂಕಲನದ ನಾಲ್ಕೂ ಏಕಾಂಕಗಳ ಕೇಂದ್ರಾಶಯವೆಂದರೆ : ಎಲ್ಲಾ ಸಮಾಜಗಳಲ್ಲಿಯೂ ನಡೆಯುವ ಗಂಡು-ಹೆಣ್ಣುಗಳ ಆಟ ಅಥವಾ `ಬೇಟ` `ಬೇಟೆ`ಯಾಗುವ ದುರಂತ. `ಮದುವೆ ಹೆಣ್ಣು` ನಾಟಕದಲ್ಲಿ, ಒಂದು ಬುಡಕಟ್ಟಿನ ಸಂಪ್ರದಾಯದಂತೆ ಮದುವೆಗೆ ಮೊದಲು ವರನು ಗಂಡಾಳಿನ ತಲೆಬುರುಡೆಯೊಂದನ್ನು ವಧು ದಕ್ಷಿಣೆಯಾಗಿ ವಧುವಿನ ತಂದೆತಾಯರಿಗೆ ಕೊಡಲು ಕಾಡಿನಲ್ಲಿ ಅಲೆಯುತ್ತಿರುವಾಗ, ಮಳೆಯ ಹಾಗೂ ಕತ್ತಲೆಯ ಕಾರಣದಿಂದ ಗೊತ್ತಾಗದೆ ತಾನು ವಿವಾಹವಾಗಲಿರುವ ತರುಣಿಯನ್ನೇ ಕೊಂದು ಅವಳ ತಲೆಬುರುಡೆಯನ್ನು ತರುತ್ತಾನೆ. ಇಲ್ಲಿ, ಬೇಟೆಯಾಡುವುದು ವಿಧಿ ಹಾಗೂ ಬುಡಕಟ್ಟಿನ ಪ್ರಾಚೀನ ಸಂಪ್ರದಾಯ ಮತ್ತು ಬೇಟೆಗೆ ಗುರಿಯಾಗುವವರು ಗಂಡು ಮತ್ತು ಹೆಣ್ಣು ಇಬ್ಬರೂ. `ಕಸಂದ್ರ` ಎಂಬ ಎರಡನೆಯ ನಾಟಕದಲ್ಲಿ, ಹೆಲನ್ ಮತ್ತು ಪ್ಯಾರಿಸ್ ಇವರ ವಿವಾಹೇತರ ಪ್ರೇಮ-ಕಾಮಗಳ ಕಾರಣದಿಂದ ಪ್ರಾರಂಭವಾಗುವ ಟ್ರಾಯ್ ಯುದ್ಧದಲ್ಲಿ ಅಲ್ಲಿನ ರಾಜಪುತ್ರಿ ಕಸಂದ್ರ ಗ್ರೀಕರ ಸೇನಾನಿ ಅಗಮೆಮ್ನಾನ್ ಗೆ ಸೆರೆಯಾಗಿ, ಅವನ ದಾಸಿಯಾಗಿ ಗ್ರೀಸ್ ಗೆ ಹೋಗಿ, ಅಲ್ಲಿ ದುರ್ಮರಣಕ್ಕೆ ಈಡಾಗುತ್ತಾಳೆ. ಇಲ್ಲಿಯೂ ವಿಧಿ (ಅವಳು ಸರಿಯಾಗಿ ಭವಿಷ್ಯವನ್ನು ನುಡಿಯಬಲ್ಲಳು; ಆದರೆ ಅವಳನ್ನು ಯಾರೂ ನಂಬದಿರುವಂತೆ ಅವಳಿಗೆ ಶಾಪವಿದೆ) ಮತ್ತು ಯುದ್ಧ (ಈ ವ್ಯವಸ್ಥೆಯಲ್ಲಿ ವಿಜಯೀ ಸೇನೆಗೆ ಮೊದಲು ಬಲಿಯಾಗುವವಳು ಸ್ತ್ರೀಯರು) ಇವುಗಳ ಬೇಟೆಗೆ ಅವಳು ಬಲಿಯಾಗುತ್ತಾಳೆ. ಪೌರಾಣಿಕ ದಾಕ್ಷಾಯಣಿ ಪ್ರಸಂಗವನ್ನು ಆಧರಿಸಿರುವ `ಸತಿ` ದಕ್ಷ-ಶಿವ ಸಂಘರ್ಷವನ್ನು `ಆರ್ಯ-ಅನಾರ್ಯ` ಸಂಘರ್ಷವೆಂಬಂತೆ ಚಿತ್ರಿಸುತ್ತದೆ; ಮತ್ತು ಈ ಸಂಘರ್ಷದಿಂದ ಉದ್ಭವಿಸುವ ಘೋರ ಯುದ್ಧವನ್ನು ತಡೆಯಲು ದಾಕ್ಷಾಯಣಿ ತಾನೇ ಯಜ್ಞಕುಂಡಕ್ಕೆ ಹಾರಿ ಬಲಿಯಾಗುತ್ತಾಳೆ. ಈ ಮೂರೂ ನಾಟಕಗಳಿಗಿಂತ ಭಿನ್ನವಾದುದು `ಮಕರಚಂದ್ರ`. ಇದರಲ್ಲಿ, ಕೆಳ ವರ್ಗದ ಜಾಡಮಾಲಿಯೊಬ್ಬನು ತನ್ನೆದುರು ಮನೆಯಲ್ಲಿರುವ ಸುಂದರ ನಟಿಯೊಬ್ಬಳ ನೀಳ ರೇಷ್ಮೆ ಕೂದಲನ್ನು ನೋಡಿ ಅವಳನ್ನು ಮೋಹಿಸುತ್ತಾನೆ ಮತ್ತು ಅವಳಿಗೆ ಭಾವುಕ ಪ್ರೇಮಪತ್ರಗಳನ್ನು ಬರೆಯುತ್ತಾನೆ. ಆ ಪತ್ರಗಳಿಂದ ಆ ನಟಿ ಆಕರ್ಷಿತಳಾದರೂ ಅವನ ಸಾಮಾಜಿಕ ಅಂತಸ್ತನ್ನು ಅರಿತ ಕೂಡಲೇ ಅವನ ಪ್ರೇಮವನ್ನು ತಿರಸ್ಕರಿಸುತ್ತಾಳೆ ಮತ್ತು ಆ ತಿರಸ್ಕಾರವನ್ನು ಸಹಿಸಿಕೊಳ್ಳಲಾರದೆ ಆ ಬಡ ಜಾಡಮಾಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇಲ್ಲಿ, ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆ ಬೇಟೆಯಾಡುತ್ತದೆ ಮತ್ತು ಅದರಲ್ಲಿ ಆ ಬಡ ಮನುಷ್ಯ ಮಿಕವಾಗುತ್ತಾನೆ. ಈ ನಾಟಕವನ್ನು ಯಶೋಧರ ಚರಿತೆಯ ಮತ್ತೊಂದು ವಿನ್ಯಾಸವೆಂದು ನೋಡಬಹುದು; ಪ್ರಾಚೀನ ಕಾವ್ಯದ ಅಷ್ಟಾವಂಕ ಮತ್ತು ಅವನ ಸಂಗೀತ ಇವಕ್ಕೆ ಬದಲಾಗಿ ಅರವತ್ತು ವರ್ಷದ ಬಡ ಮುದುಕ ಮತ್ತು ಅವನ ಪ್ರೇಮ ಪತ್ರಗಳಿವೆ.
©2024 Book Brahma Private Limited.