‘ಕಾಲಿದಾಸ ಶಾಕುಂತಲ’ ಹಿರಿಯ ಲೇಖಕ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ನಾಟಕ ಕೃತಿ. ಕೃತಿಯನ್ನು ವಿಮರ್ಶಿಸಿರುವ ಪ್ರಕಾಶ ಗಿರಿಮಲ್ಲನವರ ‘ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ‘ಕಾಲಿದಾಸ ಶಾಕುಂತಲ’ ನಾಟಕ ಕನ್ನಡ ರಂಗಭೂಮಿಗೆ ಹೊಸ ಅವತರಣಿಕೆಯಾಗಿ ಮೂಡಿ ಬಂದ ಒಂದು ಅತ್ಯುತ್ಕೃಷ್ಟ ರಂಗಪಠ್ಯ. ಕನ್ನಡದಲ್ಲಿ 1869ರಲ್ಲಿಯೇ ಚುರಮರಿ ಶೇಷಗಿರಿರಾಯರು ಕಾಳಿದಾಸ ಕವಿಯ ಶಾಕುಂತಲವನ್ನು ಕನ್ನಡಕ್ಕೆ ತಂದಿದ್ದರು. ತದನಂತರ ಮೈಸೂರು ಆಸ್ಥಾನ ವಿದ್ವಾನ್‌ರಾಗಿದ್ದ ಪ್ರಕಾಂಡ ಪಂಡಿತ ಸಂಸ್ಕೃತ-ಕನ್ನಡ ಉಭಯ ಭಾಷಾಪ್ರವೀಣ ಬಸವಪ್ಪ ಶಾಸ್ತ್ರಿಗಳು 1882ರಲ್ಲಿ ಶಾಕುಂತಲ ಮೂಲಪಠ್ಯವನ್ನು ಕನ್ನಡದಲ್ಲಿ ಅತ್ಯಂತ ಸಮರ್ಥವಾಗಿ ಅನುವಾದಿಸಿದ್ದರು. ತದನಂತರ ಬಿ. ಕೃಷ್ಣಪ್ಪ, ಎಸ್. ವಿ. ಪರಮೇಶ್ವರ ಭಟ್ಟ ಅವರ ಕೃತಿಗಳು ಕನ್ನಡದಲ್ಲಿ ಬಂದವು. ಹೀಗೆ ಹತ್ತಾರು ಜನ ಕಾಳಿದಾಸನ ಅಭಿಜ್ಞಾನ ಶಾಕುಂತಲ ನಾಟಕವನ್ನು ಭಾಷಾಂತರ, ರೂಪಾಂತರ, ಕಥಾಂತರ ರೂಪದಲ್ಲಿ ಕನ್ನಡದಲ್ಲಿ ಅನುವಾದಿಸುತ್ತಲೇ ಬಂದಿದ್ದಾರೆ. ಕಾಲಮಾನಕ್ಕೆ ತಕ್ಕಂತೆ ಭಾಷೆ-ಶೈಲಿಗಳು ಬದಲಾಗುತ್ತಲೇ ಬಂದಿವೆ. ಈಗ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಪ್ರಸ್ತುತ ಶಾಕುಂತಲ ನಾಟಕ ವರ್ತಮಾನದ ಸಂದರ್ಭದಲ್ಲಿ ತನ್ನ ನವನವೋನ್ಮೇಷಶಾಲಿತ್ವದಿಂದ, ಹೃದಯಸ್ಪರ್ಶಿಯಾಗಿ ಮೂಡಿ ಬಂದಿದೆ ಎಂದಿದ್ದಾರೆ.
©2024 Book Brahma Private Limited.