ಗ್ರಾಮೀಣ ಬದುಕು, ಆರ್ಥಿಕ ಪರಾವಲಂಬಿ ಬದುಕನ್ನು ಕಟ್ಟಿಕೊಡಲು ಪ್ರಯತ್ನಿಸಿರುವ ನಾಟಕ ’ದೈವಕ್ಕೆ ಮೊದಲು ಶರಣೆಂಬೆವು’.
ಎಸ್. ರಂಗಸ್ವಾಮಿ ಚಿತ್ರಿಸಿರುವ ಗ್ರಾಮೀಣ ಬದುಕು, ಉತ್ತರ ಕರ್ನಾಟಕದ ಅದರಲ್ಲೂ ಹೈದರಾಬಾದ್ ಕರ್ನಾಟಕದ ಪ್ರಾಂತ್ಯಗಳಾದ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳ ಹಲವಾರು ತಾಲ್ಲೂಕುಗಳಲ್ಲಿ ಇಂದಿಗೂ ವಾಸ್ತವ ಸತ್ಯ. ರಾಯಚೂರು ಜಿಲ್ಲೆಯ ತಾಲ್ಲೂಕುಗಳಾದ ಸಿಂಧನೂರು, ಮಾನ್ವಿ, ಮುಂತಾದ ಪ್ರದೇಶಗಳಲ್ಲಿ, ಕಥೆಗಾರರು ಹೇಳುವ “ರೆಡ್ಡಿ ಕ್ಯಾಂಪ್'ಗಳು ಈಗಲೂ ಜೀವಂತವಿದ್ದು, ನಾಟಕದ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿರುವ ಭೂಮಾಲಿಕ ಪದ್ಧತಿ, ಜೀತ ಪದ್ಧತಿಯನ್ನು ಓದುಗರ ಮುಂದೆ ತೆರೆದಿಟ್ಟಿದ್ದಾರೆ.
ದೇಸೀಯ ಕಥನಕೆ ತಾಂತ್ರಿಕತೆಯ ಲೇಪನ
ಎಸ್.ರಂಗಸ್ವಾಮಿ ಅವರ 'ದೈವಕ್ಕೆ ಈ ಮೊದಲ ಶರಣೆಂಬೆವು' ನಾಟಕ ಮೂಲತಃ ಅಮರೇಶ ನುಗಡೋಣಿ ಅವರ ಎರಡು ನೀಳತೆಗಳನ್ನು ಇಟ್ಟುಕೊಂಡು ರೂಪಿಸಿರುವ ನಾಟಕವಾಗಿದೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಭೂ ಮಾಲೀಕರು ಮತ್ತು ಉಳವವರ ನಡುವಿನ ಭಾವಸಂಬಂಧಗಳಿಗೆ ಆಂಧ್ರದ ರೆಡ್ಡಿಗಳು ಪ್ರವೇಶಿಸುವ ಮೂಲಕ ಸಂಬಂಧಗಳಿಗೆ ಕೊಳ್ಳಿ ಇಟ್ಟು ಜೀವಂತ ಸಮಾಧಿಯಾಗಿ ಸುಟ್ಟ ಅಂದಿನ ಸತ್ಯಕತೆಯ ಆಧಾರಿತ ಈ ನಾಟಕ ನಿಜಕ್ಕೂ ಸಾಂಸ್ಕೃತಿಕ ಸಿರಿಗೆ ಹಿಡಿದ ಕೈಗನ್ನಡಿ ಎನ್ನಬಹುದು.
ಎರಡು ನೀಳ್ಗತೆಗಳನ್ನು ಬಳಸಿಕೊಂಡು ವಿಭಿನ್ನ ಎರಡು ಕತೆಗಳನ್ನು ಒಂದು ನಾಟಕವನ್ನಾಗಿಸುವ ಕಲೆಗಾರಿಕೆಯನ್ನು ವಿವೇಚನಾಯುತವಾಗಿ ಸಾಕಾರಗೊಳಿಸುವುದೇ ಪ್ರತಿಭೆ, ತಾಂತ್ರಿಕತೆಯ ಅಪೂರ್ವ ಕಲೆ ಎಂತಲೂ ಹೇಳಬಹುದು. ಒಂದು ಗ್ರಾಮೀಣ ಸೊಗಡಿನ ದೇಶೀ ಸಂಸ್ಕೃತಿಯನ್ನು ಜನಪದ ಕಲೆ ಮತ್ತು ಆ ನೆಲದ ಬದುಕನ್ನು ಹಿಡಿದಿಟ್ಟು ನಾಟಕ ಮಸ್ತಕ ರೂಪಿಸಿರುವುದು ಒಂದು ದೈವಿಕ ಸಂಸ್ಕೃತಿಯ ಬಿಂಬವೇ ಸರಿ. ಕರ್ನಾಟಕದಲ್ಲಿ ಹಳೆ ಮೈಸೂರು ಭಾಗ, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಉತ್ತರ ಕನ್ನಡ, ಮಲೆನಾಡು, ಮಧ್ಯ ಕರ್ನಾಟಕ ಹೀಗೆ ಆಯಾ ಭಾಗದಲ್ಲಿ ಪರಂಪರಾನುಗತವಾಗಿ ಬಂದ ದೈವೀಸ್ವರೂಪದ ಪವಾಡ ಪುರಷರ ಕುರಿತ ಜಾನಪದ ಕತೆಗಳು ಗೀತೆಗಳಾಗಿ ಹೊರಹೊಮ್ಮಿವೆ. ಈ ಗೀತೆಗಳನ್ನು ಒಂದು ವರ್ಗದ ಜನ ಪರಂಪರಾನುಗತವಾಗಿ ಹಾಡಿಕೊಂಡು ಬರುತ್ತಿರುವ ಸಂಸ್ಕೃತಿ ಮತ್ತು ಸಂಪ್ರದಾಯಗಳು ಕೂಡ ಇಂದು ಜೀವಂತವಾಗಿವೆ: ಇದೇ ರೀತಿ ಹೈದರಾಬಾದ್ ಕರ್ನಾಟಕದಲ್ಲೂ ಕೂಡ 'ಕೊಳದ ಲಿಂಗಯ್ಯ' ಎಂಬ ದೈವೀಶಕ್ತಿಯ ಪವಾಡ ಹೇಳುವ ಜಾನಪದ ಹಾಡುಗಳು ಆ ಭಾಗದ ಶಕ್ತಿಯಾಗಿ ಮೂಡಿಸುತ್ತದೆ. ಈ ಕತೆಯನ್ನು ಆಧಾರವಾಗಿಟ್ಟುಕೊಂಡು ನಾಟಕ ರೂಪಿಸಿರುವುದು ಒಂದು ಜನ ಸಂಸ್ಕೃತಿಯ ಜೀವಾಳ. ಇದರ ಜೊತಗೆ 80-85ರ ದಶಕದಲ್ಲಿ ರಾಜ್ಯದಲ್ಲಿ ಊಳಿಗ ಮಾನ್ಯ ಪದ್ಧತಿ ಜಾರಿಮಾಡುವ ಮೂಲಕ ಉಳುವವನೇ ಭೂ ಒಡೆಯ ಎಂಬ ಕಾನೂನು ಜಾರಿಯಾದಾಗ ಆದ ಅನುಕೂಲ, ಅನಾನುಕೂಲ ಅದರ ಜೊತೆ ಜೊತೆಗೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ರೆಡ್ಡಿಗಳ ಆಗಮನದಿಂದ ಉಳುವವರಿಗೆ ಆದ ಉಪಟಳಗಳ ಕುರಿತ ಕತೆ. ಈ ಎರಡು ಕತೆಗಳನ್ನು ಇಟ್ಟುಕೊಂಡು 'ದೈವಕ್ಕೆ ಮೊದಲು ಶರಣೆಂಬೆವು ನಾಟಕವನ್ನು ಹೆಣೆಯುವ ಮೂಲಕ ಒಂದು ವಿಭಿನ್ನ ಸಂಸ್ಕೃತಿಯಲ್ಲಿ ಆದ ಬದಲಾವಣೆಗಳು ಮತ್ತು ಅನುಭವಿಸಿದ ಕಷ್ಟ-ನಷ್ಟಗಳ ಬದುಕಿನ ಆಂತರ್ಯದ ತೊಳಲಾಟಗಳ ನೈಜತೆಯನ್ನು ತೆರದಿಟ್ಟಿದ್ದಾರೆ.
ನಾಟಕ ಆರಂಭವಾಗುವುದೇ ನೀಲಗಾರರಾದ ಮಾದಪ್ಪ ಪಾತಮ್ಮ ಕುಟುಂಬದ ಸಣ್ಣಾಟದ ದೇಸಿ ಕಲಾ ಪ್ರದರ್ಶನದ ಮೂಲಕ ಗ್ರಾಮದಲ್ಲಿ ಕತೆ ಹೇಳುವ ಅಧಿಕಾರವನ್ನು ಮತ್ತು ಆ ಕುಟುಂಬಕ್ಕೆ ಹಳ್ಳಿಯಲ್ಲಿ ಸಿಗುವ ಗೌರವ ಸ್ಥಾನ-ಮಾನಗಳು, ಪರ್ವತಪ್ಪ ಅವರ ದೊಡ್ಡಮನೆಯ ಭೂಮಾಲೀಕರ ದೌರ್ಜನ್ಯ, ಸಿರಿತನದ ಹುಂಬುತನ ಅವರ ಮನೆಯಲ್ಲಿ ಗ್ರಾಮದೇವತೆಯು ಕತೆ ಹೇಳುವ ಗೌರವಿಸಲಾಗದ ಪರಿಸ್ಥಿತಿ, ಆರ್ಥಿಕವಾಗಿ ನಾನಾ ಕಷ್ಟಗಳು ಅನುಭವಿಸುವಾಗ ಆಂಧ್ರದ ರೆಡ್ಡಿಗಳಿಗೆ ಭೂಮಿಯನ್ನು ಪರಭಾರೆ ಮಾಡುವ ದುರಾಲೋಚನೆಗಳು. ಹಾಗೆಯೇ ಒಂದು ಗ್ರಾಮದ ಪಾರಂಪರಿಕ ಜಾನಪದ ಗಾಯಕರಾದ ನೀಲಗಾರರು ಹಣದ ದುರಾಸೆಗೆ ಒಳಗಾಗಿ ತಮ್ಮ ಗೌರವನ್ನು ಕಳೆದುಕೊಂಡು ಅತಂತ್ರವಾಗುವ ಪರಿಸ್ಥಿತಿ ಇವೆಲ್ಲವೂ ದೇಶೀ ಸಂಸ್ಕೃತಿಯ ಭಾಗಗಳು ಆದರೆ, ದುರಾಸೆಗೆ ಬಿದ್ದು ತಮ್ಮ ಪಾರಂಪರಿಕ ದೇಶಿ ಕಥನಗಳನ್ನು ಹೇಗೆ ಕಳೆದುಕೊಳ್ಳುತ್ತಾರೆ ಎನ್ನುವ ಅಂಶ ಗಮನಾರ್ಹವಾಗಿದೆ.
ಇದಕ್ಕೆ ಪೂರಕವಾಗಿ ಊರಿನ ದೊಡ್ಡ ಮನೆಯ ಪರ್ವತಪ್ಪ ಕೂಡ ಊಳಿಗೆ ಮಾಡುವ ಗ್ರಾಮದ ಜನರಿಗೆ ಕೈ ಕೊಟ್ಟು ಪರ ರಾಜ್ಯದ ಆಂಧ್ರದ ರೆಡ್ಡಿಗಳಿಗೆ ಭೂ ಪರಭಾರೆ ಮಾಡುವ ಅಭಿಲಾಷೆ ಹೊಂದಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಮಾಡುವ ಪ್ರತಿಭಟನೆಯಿಂದ ಭಾವನಾತ್ಮಕವಾಗಿ ಮೌನವಾಗುವ ಪರಿಸ್ಥಿತಿ. ಇನ್ನು ದೊಡ್ಡಮನೆ ಯಜಮಾನನ ಅಹಂಕಾರ ಹಾಗೂ ಮದ ಆತನನ್ನು ನಾಶದ ಕಡೆಗೆ ಕರೆದುಕೊಂಡು ಹೋಗುತ್ತದೆ. - ಮಾದಪ್ಪ-ಪಾತಮ್ಮ ದಂಪತಿಯ ಮಗಳಿಗೆ ರೂಢಿಸಿಕೊಂಡಿದ್ದಾರೆ. ಈ ಮೂಲಕ ಆ ನೆಲದ ದೇಶಿಯ ಸಂಸ್ಕೃತಿ ಪರಂಪರಾನುಗತವಾಗಿ ಬಂದ ಕೊಳದ ಲಿಂಗಯ್ಯನ ಹಾಡುಗಾರಿಕೆಯನ್ನು ಸೊಗಸಾಗಿ ಪ್ರಸ್ತುತ ಪಡಿಸುವಾಗ ಆಕೆಯ ಮಾನಭಂಗಕ್ಕೆ ಪ್ರಯತ್ನಿಸುವ ದುರಹಂಕಾರವನ್ನು ಪರ್ವತಪ್ಪ ತೋರಿಸುತ್ತಾನೆ. ಆದರೆ ದೈವದ ಆಟದಿಂದ ಆಕೆ ಬಚಾವಾಗುತ್ತಾಳೆ.
ಇವೆಲ್ಲವೂ ಒಂದು ಜಾನಪದ ಸೊಗಡಿನ ನೆಲದಲ್ಲಿ ಅನುಭವಿಸುವ ಕತೆಗೆ ತಾಂತ್ರಿಕ ರೂಪ ನೀಡಿ ಹೆಣೆದ ನಾಟಕ ನಿಜಕ್ಕೂ ಸ್ಮರಣೀಯ. ಇನ್ನೂ ಆ ಭಾಗದ ಸೊಗಡಿನ ಭಾಷೆಯನ್ನು ಬಳಸಿಕೊಂಡಿದ್ದು ಸಂಭಾಷಣೆ ಚೆನ್ನಾಗಿ ಮೂಡಿ ಬಂದಿದ್ದರೂ ಅಲ್ಲಲ್ಲಿ ಸಂಭಾಷಣೆಗೆ ಪ್ರಖರತೆ ಬೇಕಿತ್ತು ಅನಿಸುತ್ತದೆ. ಅದನ್ನು ಹೊರತು ಪಡೆಸಿದರೆ ನಾಟಕ ಮತ್ತದರ ತಾಂತ್ರಿಕತೆ, ವಿಭಿನ್ನ ಶೈಲಿಯ ಸಂಭಾಷಣೆ ಮನಮುಟ್ಟುತ್ತದೆ. ಅಲ್ಲದೆ ದೃಶ್ಯಗಳಿಗನುಗುಣವಾಗಿ ರೂಪಿಸಿರುವ ಹಾಡುಗಳು ಸೂಕ್ತವಾಗಿದೆ. ಒಟ್ಟಾರೆ ಒಂದು ಪ್ರದೇಶದ ಸಾಂಸ್ಕೃತಿಕ ಪರಂಪರೆಯ ದೇಶಿ ಕಲೆಯನ್ನು ಹಾಗೂ ಆ ನೆಲದ ವೈವಸ್ಥೆಗಳ ತೊಳಲಾಟಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ರಂಗದ ಪ್ರಯೋಗಕ್ಕೆ ಇಳಿಸಿರುವುದು ನಾಟಕಕಾರರಿಗೆ ರಂಗಾನುಭವದ ಬದಲಾವಣೆಗಳ ಹಿನ್ನೆಲೆಯ ಸೂಕ್ಷ್ಮತೆ ಇರುವುದರ ಸಾಕ್ಷೀಭೂತವಾಗಿದೆ.
- ತುರುವನೂರು ಮಂಜುನಾಥ್
ಕೃಪೆ : ಸಂಯುಕ್ತ ಕರ್ನಾಟಕ (2020 ಫೆಬ್ರುವರಿ 16)
©2024 Book Brahma Private Limited.