ಪ್ರಾಚೀನ ಗ್ರೀಕ್ ನಾಟಕ ಕೃತಿಗಳು ಪಾಶ್ಚಿಮಾತ್ಯ ರಂಗಭೂಮಿಯ ಮುಕುಟಮಣಿಗಳು ಮಾತ್ರವಲ್ಲ ಅನ್ಯಸಂಸ್ಕೃತಿಯ ಹಲ್ಲುಗಳಿಗೆ ಕಷ್ಟ ಕೊಡುವ ಕಬ್ಬಿಣದ ಕಡಲೆಗಳೂ ಹೌದು. ಅನುವಾದದಿಂದ ತೊಡಗಿ ರಂಗಪ್ರಯೋಗದವರೆಗೂ ಇವು ಅಸಾಮಾನ್ಯ ಸವಾಲುಗಳನ್ನೊಡ್ಡುತ್ತವೆ. ಅಂಥ ಸವಾಲುಗಳನ್ನೆದುರಿಸುತ್ತ ಇಂಗ್ಲೀಷಿನಂಥ ಜಾಗತಿಕ ಭಾಷೆಯೂ ಆಗಾಗ ಆ ನಾಟಕಗಳ ಹೊಸ ಅನುವಾದಗಳನ್ನೂ ರಂಗಪ್ರಯೋಗಗಳನ್ನೂ ಮಾಡಿಕೊಳ್ಳುತ್ತ ಬಂದಿದೆ. ಈ ಸಂಕಲನವು ಇವತ್ತಿನ ಕನ್ನಡದ ಸಂದರ್ಭದಲ್ಲಿ ಕಾಲೂರಿಕೊಂಡು ಅಂಥ ಅನುಸಂಧಾನದ ಸವಾಲನ್ನು ಮೈಮೇಲೆ ಎಳೆದುಕೊಂಡಿದೆ. ಇದುವರೆಗೂ ಕನ್ನಡದಲ್ಲಿ ಬಂದಿರುವ ಗ್ರೀಕ್ ನಾಟಕ ಅನುವಾದಗಳಿಗಿಂತ ಭಿನ್ನವಾಗಿ, ಪ್ರಸ್ತುತ ಭಾಷಾಂತರವು ಅಲ್ಲಲ್ಲಿ ಛಂದೋಬದ್ಧ ಲಯಗಳನ್ನು ಬಳಸುವ ಪ್ರಯೋಗ ಮಾಡಿದೆ; ಆಡುಮಾತಿಗೆ ಹತ್ತಿರವಿರುವ ಹೊಸಗನ್ನಡದೊಳಗೂ ಕಾವ್ಯದ ಧ್ವನಿಯನ್ನು ಕಟ್ಟಲು ಪ್ರಯತ್ನಿಸಿದೆ. ಇಂಥ ಕ್ರಿಯಾಶೀಲ ಆಮದು ವ್ಯಾಪಾರವು ಹೊರನಾಡಿನ ಹೊಸತನವನ್ನು ಅರಿಯಲಿಕ್ಕೆ ಮಾತ್ರವಲ್ಲ, ಸ್ವದೇಶದ ಸ್ವಂತಿಕೆಯನ್ನು ಕಾಣಿಸಿಕೊಡಲೂ ತುಂಬ ಉಪಯುಕ್ತ.
©2024 Book Brahma Private Limited.