‘ಯುಗ ಪುರುಷ’ ಕೃತಿಯು ಜಿ.ಎಚ್. ಹನ್ನೆರಡುಮಠ ಅವರು ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳವರ ಕುರಿತು ಬರೆದ ಚಾರಿತ್ರಿಕ ನಾಟಕವಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ‘ಶರಣಸಾಹಿತಿ ಪ್ರೊ. ಜಿ. ಎಚ್. ಹನ್ನೆರಡುಮಠ ಅವರು ತಮ್ಮ 77ನೇ ವಯಸ್ಸಿನಲ್ಲಿ ರಚಿಸಿದ ಈ 100 ನೇ ಪುಸ್ತಕ ನಮ್ಮ ಪ್ರಕಾಶನದಿಂದ ಪ್ರಕಟಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಪ್ರೊ. ಹನ್ನೆರಡುಮಠ ಅವರ ಬಸವ ಪರಿಸರದ ಎಂಟು ಕಾದಂಬರಿಗಳು: ಜೊತೆಗೆ ಅವರ ಕಥೆಗಳು-ಕವನ-ನಾಟಕ-ವಿನೋದ-ಚಿಂತನ-ಪ್ರವಾಸ ಕಥನಗಳು ಜನಪ್ರಿಯವಾಗಿವೆ. ಕರ್ನಾಟಕದ ಮುಂಚೂಣಿಯ ಎಲ್ಲ ಪತ್ರಿಕೆಗಳು ಇವರ ಬರಹಗಳನ್ನು ನಿರಂತರವಾಗಿ ಪ್ರಕಟಿಸುತ್ತಲೇ ಬಂದಿವೆ. ಇವರಿಗೆ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ', 'ನಾಗನೂರಮಠದ ಸಾಹಿತ್ಯ ಪ್ರಶಸ್ತಿ', 'ಮೂಜಗಂ ಪ್ರಶಸ್ತಿ', 'ರಮಣಶ್ರೀ ವಚನ ಪ್ರಶಸ್ತಿ', 'ನಲ್ಲೂರ ಸಾಹಿತ್ಯ ಪ್ರಶಸ್ತಿ', 'ರಂಗಶ್ರೀ ರಂಗಪ್ರಶಸ್ತಿ', 'ಕಸಾಪ ದತ್ತಿ ಪ್ರಶಸ್ತಿ', 'ತ್ರಿನೇತ್ರ ರಂಗಪ್ರಶಸ್ತಿ', 'ಭಾಮಠದ ಪ್ರಶಸ್ತಿ, 'ಇಲಕಲ್ಲ-ಕೊಪ್ಪಳ ಮಠಗಳ ಪ್ರಶಸ್ತಿ' ಮೊದಲ್ಗೊಂಡು ನೂರಾರು ಪ್ರಶಸ್ತಿ-ಸನ್ಮಾನಗಳು ಲಭ್ಯವಾಗಿವೆ. ಇವರ 'ಮಹಾಸಂಗಮ', 'ಗೋಧಿಹುಗ್ಗಿ ಗಂಗಯ್ಯ', 'ಬಂಡೆದ್ದ ಬಾರಕೋಲು', 'ಬೆಟ್ಟದ ಚಲುವಿ', 'ಮೌನಕೋಗಿಲೆ', 'ಜೋಳಿಗೆ ತುಂಬ ಹೋಳಿಗೆ ತುಂಬಿದ ಮೋಳಿಗೆ ಮಾರಯ್ಯ', 'ಅಪ್ಪಗಳ ಅಪ್ಪ ಅಪ್ಪಣ್ಣ', 'ಬಹುರೂಪಿ ಚೌಡಯ್ಯ', 'ಕೊರವಸುಂದರಿ', 'ಗಾಂಧಿ ಮಕ್ಕಳ ನಾಟಕಗಳು', 'ಹಸಿರು ನಿಮ್ಮದು ಹೂವು ನಿಮ್ಮದು' ಮಕ್ಕಳ ನಾಟಕಗಳೊಂದಿಗೆ ಇದೀಗ 'ಯುಗಪುರುಷ' (ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳವರನ್ನು ಕುರಿತ ಚಾರಿತ್ರಿಕ ನಾಟಕ) ಹಾನಗಲ್ಲ ಶ್ರೀ ಕುಮಾರ ಮಹಾಶಿವಯೋಗಿಗಳವರ 150 ನೇ ಜನ್ಮ ವರ್ಷದ ಅರ್ಥಪೂರ್ಣ ನೆನಹಿನ ಕುರುಹಾಗಿ ಪ್ರಕಟವಾಗುತ್ತಿರುವುದು ಸಂತೋಷ ’ ಎಂದಿದೆ.
©2024 Book Brahma Private Limited.