ಖ್ಯಾತ ಸಾಹಿತಿ, ಲೇಖಕ ಜಯಂತ ಕಾಯ್ಕಿಣಿ ಅವರ ಮೂರು ನಾಟಕಗಳ ಸಂಕಲನ ‘ಜಯಂತ ಕಾಯ್ಕಿಣಿ ರೂಪಾಂತರ ನಾಟಕ’ ಈ ಕೃತಿಯ ಬಗ್ಗೆ ಮಾತಾಡುತ್ತಾ ಕಾಯ್ಕಿಣಿ ಅವರು ಹೇಳುವ ಮಾತುಗಳಿವು. ‘ಒಂದರ್ಥದಲ್ಲಿ ಮೂರಂಕಿನ ಪುಸ್ತಕ ಇದು. ಎರಡನ್ನು ನೀನಾಸಂ ತಿರುಗಾಟಕ್ಕಾಗಿ, ಒಂದನ್ನು ಸಂಕೇತ್ ತಂಡಕ್ಕಾಗಿ ಬರೆದಿದ್ದೆ. ಹಿಂದೆ ಬಿಡಿಯಾಗಿ ಪ್ರಕಟಗೊಂಡಿದ್ದ ಮೂರೂ ನಾಟಕಗಳನ್ನು ಪ್ರಾರಂಭಿಕ ಪುಟಗಳೊಂದಿಗೆ ಇಲ್ಲಿ ಸಂಕಲಿಸಲಾಗಿದೆ’ ಎನ್ನುತ್ತಾರೆ. ಆಯಾ ನಾಟಕಗಳ ಪ್ರಥಮ ಪ್ರಯೋಗದ ಕಲಾವಿದ, ತಂತ್ರಜ್ಞರ ಯಾದಿಯನ್ನು ಈಗ ನೋಡಲು ಖುಶಿಯಾಗುತ್ತದೆ, ಬಾಲ್ಯದ ಗ್ರೂಪ್ ಫೋಟೋ ನೋಡಿದಂತೆ.
ಕಳೆದೆರಡು ದಶಕಗಳಿಂದ ನಾನಾ ತಂಡಗಳು ಆಗಾಗ ಆಡುತ್ತ ಈ ನಾಟಕಗಳನ್ನು ಜೀವಂತವಾಗಿರಿಸಿವೆ. ಆಡಿದಾಗಲೇ ಅದು ನಾಟಕ. ಪುಟಗಳಿಂದ ಎದ್ದು ರಂಗದ ಮೇಲೆ ಬಂದಾಗಲೇ ಅದು ಬರಹದ ಭಾಗ್ಯ, ಇಲ್ಲವಾದರೆ, ಕವಿ ಗಂಗಾಧರ ಚಿತ್ತಾಲ ಕಾವ್ಯದ ಬಗ್ಗೆ ಹೇಳುವಂತೆ ಅದು - “ತಕ್ಕ ಮಣ್ಣಿನ ತೇವಕ್ಕಾಗಿ ಕಾದೇ ಇರುವ ಬೀಜ.” ಈ ನಡುವೆ, ಕಾರಾಗೃಹದಲ್ಲಿರುವ ಕೈದಿಗಳ ವಿಕಾಸ ಚಟುವಟಿಕೆಯ ಅಂಗವಾಗಿ, ರಂಗಾಯಣದ ಹುಲಿಗೆಪ್ಪ ಕಟ್ಟಿಮನಿ, ಕೈದಿಗಳ ಜೊತೆಗಿದ್ದು, ಅವರಿಂದಲೇ ಜತೆಗಿರುವನು ಚಂದಿರ” ಆಡಿಸಿದರು. ಸಮಾಜದ ದೃಷ್ಟಿಯಲ್ಲಿ ಅಪರಾಧಿಗಳಾಗಿ ಸಜೆ ಉಣ್ಣು ತಿರುವ ಕೈದಿಗಳು ಅದೇ ಸಮಾಜದ ಮುಂದೆ ಒಂದು ರಂಗಕೃತಿಯಲ್ಲಿ ಅರಳಿ, ಕೊನೆಯಲ್ಲಿ ಕೈಕೈ ಹಿಡಿದು ಸಾಲಾಗಿ ನಿಂತು, ಕಣ್ಣಲ್ಲಿ ಕಣ್ಣಿಟ್ಟು ಪ್ರಚಂಡ ಕರತಾಡನ ಸ್ವೀಕರಿಸುತ್ತ, ತಲೆಬಾಗಿದ ಕ್ಷಣ ಆಧ್ಯಾತ್ಮಿಕವಾಗಿತ್ತು. ಎಂಬುದು ಕಾಯ್ಕಿಣಿ ಅವರ ಅಭಿಪ್ರಾಯ.
©2024 Book Brahma Private Limited.