ಒಂಬತ್ತು ದೃಶ್ಯಗಳನ್ನು ಹೊಂದಿರುವ ಬಿರುಗಾಳಿ ನಾಟಕವು 1930ರಲ್ಲಿ ಮೊದಲ ಬಾರಿಗೆ ಉದಯ ರವಿ ಪ್ರಕಾಶನದಿಂದ ಪ್ರಕಟವಾಯಿತು. ಈ ನಾಟಕವು ಈವರೆಗೆ ಎಂಟಕ್ಕೂ ಹೆಚ್ಚು ಪ್ರಕಟಣೆಗಳನ್ನು ಕಂಡಿದೆ. ಈ ನಾಟಕವು ಷೇಕ್ಸ್ ಪಿಯರ್ ಇಂಗ್ಲೀಷ್‍ನಲ್ಲಿ ಬರೆದಂತಹ ಟೆಂಪೆಟ್ಸ್ ನಾಟಕದ ರೂಪಾಂತರ. ಒಟ್ಟು ಹದಿಮೂರು ಪಾತ್ರಗಳನ್ನು ಹೊಂದಿರುವ ನಾಟಕವಿದು. ಈ ನಾಟಕದಲ್ಲಿರುವ ಪದ್ಯದ ಮೂಲವು ರಗಳೆಯಲ್ಲಿದೆ. ಪ್ರತೀ ರಗಳೆಯ ಅಂತ್ಯದಲ್ಲಿರುವ ಪ್ರಾಸವನ್ನು ತೆಗೆದುಹಾಕಿದಲ್ಲಿ ಕುವೆಂಪು ಅವರು ಬರೆದಿರುವಂತಹ ಪದ್ಯಗಳ ತಳಹದಿ ಸಿಗುತ್ತದೆ. ಮೊದಲೇ ಚಾಲ್ತಿಯಲ್ಲಿದ್ದ ಇಂತಹ ಸರಳ ರಗಳೆಗಳನ್ನು ಮೊದಲ ಬಾರಿಗೆ ನಾಟಕಗಳಿಗೆ ಉಪಯೋಗಿಸಿಕೊಂಡವರು ಕುವೆಂಪು ಅವರು. ಯಾವುದೇ ಪ್ರಾಸದ ನಿರ್ಬಂಧವಿಲ್ಲದೇ ಇರುವುದರಿಂದ ಇಲ್ಲಿನ ಪದ್ಯಗಳು ಗದ್ಯದಂತೆ ಸರಾಗವಾಗಿ ಓದಬಹುದು. ಅಂದಹಾಗೇ, ಇದು ಟೆಂಪೆಟ್ಸ್ ನಾಟಕದ ಅನುವಾದವಲ್ಲ, ರೂಪಾಂತರವೆನ್ನಬಹುದು. ಇಲ್ಲಿ ಮೂಲ ಗ್ರಂಥವನ್ನು ಓದಿದ ನಂತರ ಕುವೆಂಪು ಅವರಲ್ಲಿ ಮೂಡಿದಂತಹ ಭಾವನೆಗಳನ್ನು ಮತ್ತು ಭಾವವನ್ನು ಆದಾರವಾಗಿಟ್ಟುಕೊಂಡು ರಚಿಸಿದಂತಹ ನಾಟಕ. ಟೆಂಪೆಟ್ಸ್ ನಾಟಕವು ಬಿರುಗಾಳಿ ನಾಟಕದ ಮೂಲ ಪ್ರೇರಣೆ ಎಂದು ಹೇಳಬಹುದು. ಒಟ್ಟಿನಲ್ಲಿ ಇಲ್ಲಿ ಬಳಸಿದಂತಹ ಭಾಷೆಯನ್ನು ಸಂವಾದ ರೂಪದ ಕಾವ್ಯವೆಂದು ಬಣ್ಣಿಸಬಹುದು.
©2024 Book Brahma Private Limited.