ಲೇಖಕ ಹನುಮಂತ ಹಾಲಗೇರಿ ಅವರ ನಾಟಕ ಕೃತಿ ʻಊರ ಸುಟ್ಟರೂ ಹನುಮಪ್ಪ ಹೊರಗʼ. ಲೇಖಕ ಡಾ. ಕೆ.ವೈ.ನಾರಾಯಣಸ್ವಾಮಿ ಅವರು ಪುಸ್ತಕದ ಬೆನ್ನುಡಿಯಲ್ಲಿ, “ಕರ್ನಾಟಕದ ವರ್ತಮಾನದ ಆಧುನಿಕ ನಡೆಗಳನ್ನು ಗ್ರಹಿಸಿ ನಿರೂಪಿಸುತ್ತಿರುವ ಹೊಸ ತಲೆಮಾರಿನ ಪ್ರತಿಭಾವಂತ ಕಥೆಗಾರ ಹನುಮಂತ ಹಾಲಗೇರಿ. ಬದುಕಿನ ಜೀವ ಚೈತನ್ಯವನ್ನು ಪ್ರಭುತ್ವ, ಜಾತಿ, ಧರ್ಮ ಮತ್ತು ಮಾರುಕಟ್ಟೆಯ ಆರ್ಥಿಕ ಯಾಜಮಾನ್ಯಗಳು ನಿಯಂತ್ರಿಸುತ್ತಿರುವ-ಬಲಗೊಳ್ಳುತ್ತಿರುವ ಹೊರ-ಒಳ ವಿನ್ಯಾಸಗಳನ್ನು ಬೆಂಬತ್ತಿ ಬರೆಯುವುದನ್ನು ಹನುಮಂತನ ಪೆನ್ನು ರೂಢಿಸಿಕೊಂಡಿದೆ. ಪ್ರತಿಯೊಬ್ಬ ಸಂವೇದನಾಶೀಲ ಲೇಖಕ ಹೊಸ ವಸ್ತುವನ್ನು ಹುಡುಕುವಂತೆ ಹೊಸ ಸಂವಹನ ಮಾಧ್ಯಮವನ್ನು ಹುಡುಕುತ್ತಿರುತ್ತಾನೆ. ಸಮುದಾಯಗಳ ಜೊತೆ ಮುಖಾಮುಖಿಯಾಗಲು ಹಂಬಲಿಸುವ ಲೇಖಕ ಅಥವಾ ಲೇಖಕಿ ನಾಟಕದಂತಹ ಮಾಧ್ಯಮವನ್ನು ತನ್ನ ಸಂವಾದಕ್ಕೆ ಬಳಸಿಕೊಳ್ಳುವುದು ಸಹಜ. ಹನುಮಂತ ನಾಟಕಕಾರನಾಗಿ ರಂಗಪ್ರವೇಶ ಮಾಡಿರುವುದು ಕೂಡ ತನ್ನ ಸೃಜನಶೀಲ ವ್ಯಕ್ತಿತ್ವದ ವಿಸ್ತರಣೆಯಾಗಿದೆ. 'ಊರು ಸುಟ್ಟೂ ಹನುಮಪ್ಪ ಹೊರಗ..' ನಾಟಕ ಗ್ರಾಮ ಜೀವನದ ಸಾಮೂಹಿಕ ನೆನಪಿನ ಭಾಗವಾಗಿದ್ದ ಹನುಮಪ್ಪ ದೇವರು ನಿರಾಶ್ರಿತನಾಗುವ ಪರಿಯನ್ನು ನಿರೂಪಿಸುವ ಒಂದು ಹೊಸ ರೂಪಕವಾಗಿದೆ. ಗೋಳಿಕರಣದ ಆರ್ಥಿಕ ರಾಜಕೀಯ ವಿದ್ಯಮಾನಗಳು ನಮ್ಮ ಹಳ್ಳಿಗಳ ಸಹಜ ಜೀವನವನ್ನು ಲಯ ತಪ್ಪಿಸುತ್ತಿರುವ ದುರಂತವನ್ನು ಈ ನಾಟಕ ಕಟ್ಟಿಕೊಡುತ್ತದೆ. ನಾಟಕ ಕಟ್ಟುವಾಗ ಕಥೆಗಾರ ಮುನ್ನೆಲೆಗೆ ಬರದಂತೆ ಹನುಮಂತ ಅವರು ಎಚ್ಚರವಹಿಸಿದರೆ ಅವರ ನಾಟಕ ಯಾನವು ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ” ಎಂದು ಹೇಳಿದ್ದಾರೆ.
©2024 Book Brahma Private Limited.