ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತವಾಗಿರುವ ಈ ನಾಟಕದ ವಸ್ತುವನ್ನು ಚಂದ್ರಶೇಖರ ಕಂಬಾರ ಅವರಿಗೆ ಹೇಳಿದ್ದು ಎ.ಕೆ. ರಾಮಾನುಜನ್ ಅವರು. ಇದೇ ಕಥೆಯನ್ನು ಆಧರಿಸಿ ಗಿರೀಶ್ ಕಾರ್ನಾಡ್ ಅವರು ’ನಾಗಮಂಡಲ’ ಎಂಬ ನಾಟಕವನ್ನು ರಚಿಸಿದ್ದಾರೆ. ಕಂಬಾರರ 'ಸಿರಿಸಂಪಿಗೆ' ನಾಟಕವು ಒಂದು ಜನಪದ ಕಥೆಯಿಂದ ಪ್ರೇರಿತವಾಗಿದೆ. ದೇಹ ಮತ್ತು ಆತ್ಮ -ಮನಸ್ಸುಗಳು ಎರಡಾಗಿ ಸೀಳುವುದು ಕೇವಲ ಪೂರ್ಣತೆಯನ್ನು ನಾಶ ಮಾಡವುದಿಲ್ಲ. ಬದಲಿಗೆ ಬೇರ್ಪಟ್ಟೆ ಮೇಲೆ ಅವೆರಡು ಕೊಳೆಯುತ್ತವೆ ಎನ್ನುವ ತಾತ್ವಿಕತೆಯ ತಳಹದಿಯ ಮೇಲೆ ಈ ನಾಟಕ ರಚಿತವಾಗಿದೆ.
ಸ್ವರಭಂಗವಾದೊಡನೆ ಶಿವನಾಗದೇವನ ಮದುವೆ ಮಾಡಬೇಕು. ನೀರಿನಲ್ಲಿ ನೆರಳು ನೋಡದಂತೆ ತಡೆಯಬೇಕು. ಇಲ್ಲವಾದರೆ ಅವನು ಸನ್ಯಾಸಿಯಾಗುತ್ತಾನೆ ಎಂದು ಕುಲದೇವ ಭವಿಷ್ಯ ಹೇಳುತ್ತಾನೆ. ಮದುವೆಗೆ ತಾಯಿ ಒತ್ತಾಯಿಸಿದಾಗ ಶಿವನಾಗದೇವ ಕೊರತೆಯಿಲ್ಲದ ಹೆಣ್ಣನ್ನು ವರಿಸುವುದಾಗಿ ಹೇಳುತ್ತಾನೆ. ದೀಪದ ಮೊಲ್ಲೆ ಎಂಬ ಚೆಲುವೆಯನ್ನು ಕನಸಿನಲ್ಲಿ ಕಾಣುತ್ತಾನೆ. ತನ್ನಲ್ಲಿ ಅಡಗಿರುವ ಚೆಲುವೆಯನ್ನು ಹೊರತೆಗೆಯಲು ಶಿವನಾಗದೇವ ತನ್ನನ್ನು ತಾನೇ ಸೀಳಿಕೊಳ್ಳುತ್ತಾನೆ. ಒಂದು ಭಾಗದಿಂದ ಶಿವನಾಗ ಹೊರಬಂದರೆ ಮತ್ತೊಂದರಿಂದ ಕಾಳಿಂಗ ಸರ್ಪ ಬಂದು ಕಾಡು ಸೇರುತ್ತದೆ. ತಾಯಿಯ ಒತ್ತಾಯಕ್ಕೆ ಮಣಿದು ನಾಗದೇವ ಸಿರಿಸಂಪಿಗೆಯನ್ನು ಮದುವೆಯಾಗುತ್ತಾನೆ. ಆದರೆ ಅವಳಿಗೆ ದಾಂಪತ್ಯ ಸುಖ ನೀಡಲು ಆಗುವುದಿಲ್ಲ. ಕಾಡಿಗೆ ಹೋದ ಕಾಳಿಂಗ ಆಕರ್ಷಣೆಗೆ ಒಳಗಾಗಿ ಸಿರಿಸಂಪಿಗೆಯೊಂದಿಗೆ ದೇಹ ಸಂಪರ್ಕ ಬೆಳೆಸುವುದರಿಂದ ಅವಳು ಗರ್ಭ ಧರಿಸುತ್ತಾಳೆ. ಸಿರಿಸಂಪಿಗೆ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ, ಶಿವನಾಗದೇವ ಸಂಶಯ ತಾಳಿ ನಾಗದಿವ್ಯ ಮಾಡುವಂತೆ ಕೇಳುತ್ತಾನೆ.
ನಾಗದಿವ್ಯ ಮಾಡುವ ಸಿರಿಸಂಪಿಗೆ, ಕಾಳಿಂಗನ ಸಹಾಯದಿಂದಲೇ ತಾನು ಪರಿಶುದ್ಧಳು ಎಂದು ಸಾಬೀತು ಮಾಡುತ್ತಾಳೆ. ಕಾಳಿಂಗ ಶಿವನಾಗದೇವರ ಮಧ್ಯೆ ಯುದ್ಧ ನಡೆದು ಕಾಳಿಂಗ ಸಾಯುತ್ತಾನೆ. ಅವನ ಸಾವಿನಿಂದ ಶಿವನಾಗದೇವನ ಬೆನ್ನುಹುರಿ ಸಡಿಲವಾಗುತ್ತದೆ. ಶಿವನಾಗದೇವ ತಾಯಿಯ ಕರೆದು ಸಿರಿಸಂಪಿಗೆ ಯಾವ ತಪ್ಪು ಮಾಡಿಲ್ಲ ಎಂದು ಹೇಳುತ್ತಾನೆ. ಸಿರಿಸಂಪಿಗೆಗೆ ತಮ್ಮ ಮಗ ಸೀಳಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಹೇಳಿ ಸಾಯುತ್ತಾನೆ.
©2024 Book Brahma Private Limited.