ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ವಚನ ಚಳವಳಿಯನ್ನು ಕುರಿತಾಗಿ ಹಿರಿಯ ಕವಿ, ನಾಟಕಕಾರ ಚಂದ್ರಶೇಖರ ಕಂಬಾರ ಅವರು ರಚಿಸಿದ ನಾಟಕ ಶಿವರಾತ್ರಿ. ಕಂಬಾರರ ಶಿವರಾತ್ರಿಗಿಂತ ಮುಂಚೆ ವಚನ ಚಳವಳಿ ಕುರಿತು ಪಿ. ಲಂಕೇಶ್ ಅವರ ’ಸಂಕ್ರಾಂತಿ’, ಎಚ್.ಎಸ್. ಶಿವಪ್ರಕಾಶ್ ಅವರ ’ಮಹಾ ಚೈತ್ರ’, ಗಿರೀಶ್ ಕಾರ್ನಾಡ್ ಅವರ ’ತಲೆದಂಡ’ ಪ್ರಕಟವಾಗಿದ್ದವು. ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಹಿತ್ಯ, ಸಾಮಾಜಿಕ- ಸಾಂಸ್ಕೃತಿಕ ಚಳವಳಿಯು ಕನ್ನಡದ ಸಂವೇದನೆಗೆ ಮತ್ತೆ ಮತ್ತೆ ಮುಖಾಮುಖಿ ಆಗುವಂತೆ ಮಾಡಿದೆ. ಐತಿಹಾಸಿಕ ವಸ್ತು ಇಟ್ಟುಕೊಂಡು ರಚಿಸಿದ ಈ ನಾಟಕ ಓದಿನ ಖುಷಿಯನ್ನು ಹೆಚ್ಚಿಸುವಂತೆ ಮಾಡುತ್ತದೆ.
ಹಿರಿಯ ಕವಿ, ನಾಟಕಕಾರ ಎಚ್.ಎಸ್. ಶಿವಪ್ರಕಾಶ್ ಅವರು ಈ ನಾಟಕ ಕುರಿತು ’ಕಲ್ಯಾಣದ ಕಥನವನ್ನುಳ್ಳ ಅನೇಕ ನಾಟಕಗಳಿಗಿಂತ ಶಿವರಾತ್ರಿ ಭಿನ್ನವಾದ ದೃಷ್ಟಿಕೋನಗಳಿಂದ, ಭಿನ್ನವಾದ ನೆಲೆಯಲ್ಲಿ ಕಲ್ಯಾಣದ ಕತೆಯನ್ನು ಹೇಳುತ್ತದೆ. ಕಲ್ಯಾಣದ ಆಂದೋಲನದ ಮಹಾನ್ ಪಾತ್ರಗಳು, ನಾಯಕ ಪ್ರತಿನಾಯಕರು, ಖಳರು. ಖಳರು, ವಿಟರು ತುಂಟರು ಮೊದಲಾಗಿ ಇಡೀ ಒಂದು ಬ್ರಹ್ಮಾಂಡದ ನೀಲಿ ನಕಾಶೆಯೊಂದು ಸೂಳೆಗೇರಿಯ ಆವರಣದಲ್ಲಿ ಸೃಷ್ಟಿಯಾಗುತ್ತದೆ. ಆ ಕಥನದ ಎಲ್ಲಾ ಸಂಘರ್ಷಗಳು ಸಂದಿಗ್ಧಗಳು ಈವೊಂದು ನಿರ್ದಿಷ್ಟ ಚೌಕಟ್ಟಿನಲ್ಲಿ ನಡೆದು ಇಂತಹ ಒಂದು ಕಥನದ ಪಾತ್ರ ಘಟನೆಗಳಿಗೆ ಅಪಾರ ಧ್ವನಿಶಕ್ತಿಯನ್ನು ತಂದುಕೊಟ್ಟಿವೆ. ಬಿಜ್ಜಳ ಬಸವರು ಮಾತ್ರವಲ್ಲದೆ ಇನ್ನಿತರ ಪಾತ್ರ ಉಪಪಾತ್ರಗಳೂ ಒಂದು ತೂಫಾನ್ ನಡುವೆಯೇ ತಮ್ಮ ಅವಿಸ್ಮರಣೀಯ ಚಹರೆಗಳನ್ನು ರಂಗದ ಮೇಲೆ ತೋರಿಸಿ ಹೋಗುತ್ತಾರೆ. ಈ ಕೃತಿಯಲ್ಲಿ ಇತಿಹಾಸ ಒಂದು ಕಥನವಾಗಿ, ಕಥನವೊಂದು ಮಿಥಿಕವಾಗಿ, ಆ ಮಿಥಿಕವು ಉತ್ಕಟ ಕಲಾತ್ಮಕ ಮತ್ತು ಅನುಭಾವೀ ಪರಾಕಾಷ್ಠೆಯನ್ನು ಮುಟ್ಟಿದೆ. ಕವಿಯಾಗಿ, ನಾಟಕಕಾರರಾಗಿ, ಕಾದಂಬರಿಕಾರರಾಗಿ ತಮ್ಮ ಬದುಕಿನ ಮಾಗಿಯಲ್ಲೂ ಮತ್ತೆ ಮತ್ತೆ ಹೊಸ ಹೊಸ ಚೈತ್ರಗಳನ್ನು ಅನ್ವೇಷಿಸುತ್ತಲೇ ಮುಂದುವರಿಯುತ್ತಿರುವ ಜಂಗಮಶೀಲ ಪ್ರತಿಭೆ ಚಂದ್ರಶೇಖರ ಕಂಬಾರ’ ಎಂದು ವಿಶ್ಲೇಷಣೆ ಮಾಡಿದ್ದಾರೆ.
©2024 Book Brahma Private Limited.