‘ರೂಪ ರೂಪಗಳನು ದಾಟಿ ಮತ್ತು ಬೆಳಕಿನ ಅಂಗಡಿ’ ರಂಗಕರ್ಮಿ, ಲೇಖಕ ಬೇಲೂರು ರಘುನಂದನ್ ಅವರ ಎರಡು ನಾಟಕ ಸಂಕಲನ. ನಾಟಕ ವಸ್ತು, ವಿಚಾರ ಮತ್ತು ನಾಟಕೀಯ ಚಲನೆಗಳನ್ನು ಒಳಗೊಂಡು ಒಂದು ಉತ್ತಮ ನಾಟಕವನ್ನು ನೀಡುವ ಸ್ತುತ್ಯ ಪ್ರಯತ್ನವನ್ನು ಬೇಲೂರು ರಘುನಂದನ್ ಮಾಡಿದ್ದಾರೆ.
ನರಕ, ಸ್ವರ್ಗ ಮತ್ತು ಭೂಲೋಕ ಹೀಗೆ ಮೂರು ಪಾತಳಿಗಳಲ್ಲಿ ಪಾತ್ರಗಳನ್ನು ಹೊಂದಿಸಿಕೊಳ್ಳಲಾಗಿದೆ. ತಮ್ಮದಾಗಿರದ ಯಾವುದೋ ಕಾರಣಕ್ಕೆ ಯಮಲೋಕದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಭೂಲೋಕದ ಸ್ತ್ರೀಯರು ಅಲ್ಲಿಯೇ ಒಂದೆಡೆ ಸೇರಿ ಪ್ರತಿಭಟನೆ ನಡೆಸುವ ಸುಂದರ ಚಿತ್ರಣವಿದೆ.
ಎರಡನೇ ನಾಟಕ ‘ಬೆಳಕಿನ ಅಂಗಡಿ’, ಮಧ್ಯ ವಯಸ್ಕ ಹೆಣ್ಣೊಬ್ಬಳ ಜೀವನ ಗಾಥೆ. ಕಲಾವಿದೆಯೊಬ್ಬಳ ಬದುಕಿನ ಅಂತರಂಗ ದರ್ಶನ. ಸ್ತ್ರೀತ್ವ ಮತ್ತು ಮಾತೃತ್ವಗಳು ಬಣ್ಣ ಮತ್ತು ಚಿತ್ರಗಳ ಮೂಲಕ ಪಾತ್ರಗಳಾಗುತ್ತಲೇ ಏಕಾಂಗಿ ಬದುಕಿನ ಹಲವು ಆಯಾಮಗಳನ್ನು ಕಟ್ಟುತ್ತವೆ. ಇಲ್ಲಿಯ ಕನಸುಗಳು ವಾಸ್ತವ ಮತ್ತು ಕಲ್ಪನೆ ಎರಡರಲ್ಲೂ ಕ್ರಿಯೆ ಮತ್ತು ಪ್ರತಿಕ್ರಿಯೆಗಳಾಗಿ ಇಡೀ ನಾಟಕವನ್ನು ಮುನ್ನಡೆಸುತ್ತವೆ. ಭಾವಚಿತ್ರ ತೆಗೆಯುವ ಹವ್ಯಾಸಿ ಫೋಟೋಗ್ರಾಫರ್ ಹಾಗೂ ಸೃಜನಶೀಲತೆ ಬದುಕಿನ ಅಭದ್ರತೆಗಳಿಂದ ತಪ್ಪಿಸಿಕೊಳ್ಳಲು ಇರುವ ತಾಣ ಎಂದು ನಂಬಿದ್ದ ಅಸಹಾಯಕ ಕಲಾವಿದೆಯೊಬ್ಬಳ ಅಪ್ಪಟ ಪ್ರೇಮದ ಹಲವು ಮುಖಗಳು ನಾಟಕದ ಮುಖ್ಯ ಕೇಂದ್ರ.
ಅನಾಥ ಪ್ರಜ್ಞೆ ಹಾಗೂ ನಗರದ ಬದುಕಿನ ಮಧ್ಯಮವರ್ಗದ ಜನರ ಸಂಕಟಗಳು ಮತ್ತು ಸಂಘರ್ಷಗಳ ನಡುವೆ ನಾಟಕ ವ್ಯಕ್ತಿ ಕೇಂದ್ರದಲ್ಲಿ ರೂಪ ಪಡೆಯುತ್ತಾ ಸಾಮಾಜಿಕವಾಗುತ್ತದೆ. ನಮ್ಮ ನಮ್ಮ ಬದುಕಿನಲ್ಲಿ ನುಳುಸಿಕೊಂಡು ಹೋಗುತ್ತಿರುವ ಭಾವಜಗತ್ತನ್ನು ಹುಡುಕಿಕೊಳ್ಳಲು ’ಬೆಳಕಿನ ಅಂಗಡಿ”ಯಲ್ಲಿ ಸಾಕಷ್ಟು ಅವಕಾಶಗಳಿವೆ. ಪ್ರೀತಿಗೆ ವಯಸ್ಸಿನ ಅಂತರವಿಲ್ಲ ಎಂಬುದನ್ನು ಹೇಳುತ್ತಲೇ ವ್ಯವಸ್ಥೆಯ ಕಟ್ಟಳೆಗಳು ನಿರ್ವಹಿಸುತ್ತಿರುವ ತಣ್ಣನೆಯ ಕ್ರೌರ್ಯವನ್ನು ನಾಟಕ ನಮ್ಮ ಮುಂದೆ ತೋರುತ್ತದೆ.
©2024 Book Brahma Private Limited.