‘ನೀರ್ ಬಾರ್’, ‘ಶಬ್ದವೇಧಿ’. ಹಾಗೂ ‘ಮ್ಯಾಗ್ನೇಸನ ಕೋಲು’ ಎಂಬ ಮೂರು ವಿಜ್ಞಾನ ನಾಟಕಗಳ ಸಂಕಲನ. ಲೇಖಕರು-ಲಿಂಗರಾಜ ವೀ. ರಾಮಾಪೂರ. ಈ ನಾಟಕಗಳು ಮನುಜಕುಲಕ್ಕೆ ಎಚ್ಚರಿಕೆ ಗಂಟೆಗಳಾಗಿವೆ. ಶಾಲಾ ಮಕ್ಕಳಲ್ಲೂ ವೈಜ್ಞಾನಿಕ ಅನ್ವೇಷಣೆಯನ್ನು ತುಂಬುವುದು ಈ ನಾಟಕಗಳ ಉದ್ದೇಶ.
ನೀರಿನ ಸಂರಕ್ಷಣೆಯ ನಾಟಕ ‘ನೀರ್ ಬಾರ್’ (ನೀರ್ ಬಾರ್ ನಾಟಕದ ವಿಮರ್ಶೆ)
ಲೇಖನ: ಇಂದಿರಾ ಕುಂದಗೋಳ
ಬತ್ತಿದ ಕೆರೆ ಹೊಳೆಗಳು, ಭೀಕರ ಬರಗಾಲ, ಕುಡಿಯುವ ನೀರಿಗಾಗಿ ಎಲ್ಲೆಡೆ ಹಾಹಾಕಾರ, ಇಪ್ಪತ್ತು ದಿನಗಳಿಗೊಮ್ಮೆ ನೀರು, ನೀರ್ ಬಂದಿತೆಂದು ಕಚೇರಿಗೆ ರಜೆ ಹಾಕಿ ನೀರ್ ತುಂಬಲು ಮನೆಗೆ ಓಡಿ ಬರುತ್ತಿರುವ ನಾಗರಿಕರು, ಬಾರ್‍ನಲ್ಲಿ ಕ್ಯೂ ಹಚ್ಚಿ ದುಡ್ಡು ಕೊಟ್ಟು ಸಿಕ್ಟಿ, ನೈಂಟಿ, ಕ್ವಾಟರ್ ಎಂದು ನೀರು ಕೊಳ್ಳುತ್ತಿರುವ ನಾಗರಿಕರು... ಇವು ನೀರ್ ಬಾರ್ ನಾಟಕದ ದೃಶ್ಯಗಳು.
ಹುಬ್ಬಳ್ಳಿ ಆನಂದನಗರದ ಸರಕಾರಿ ಶಾಲೆಯ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನೊಳಗೊಂಡಂತೆ ಸ್ವತಃ ತಾವೇ ನಾಟಕ ಬರೆದು, ನಿರ್ದೇಶಿಸಿ ಸತತ ಐದು ಪ್ರದರ್ಶನದ ಮೂಲಕ ಹುಬ್ಬಳ್ಳಿ ನಗರದ ಜನತೆಯಲ್ಲಿ ಜಾಗೃತಿ ಮೂಡಿಸುತ್ತಿರುವ ಶಿಕ್ಷಕ ಡಾ.ಲಿಂಗರಾಜ ರಾಮಾಪೂರವರ ಕಾರ್ಯ ನಿಜಕ್ಕೂ ಮೆಚ್ಚುವಂತಹುದು. ನೀರು ಪಾಠವನ್ನು ನಾಲ್ಕು ಗೋಡೆಗಳ ಮದ್ಯೆ ಮಾಡದೇ ಮಕ್ಕಳಿಗೆ ಮನದಟ್ಟಾಗುವಂತೆ ಅದೇ ವಿಷಯವಸ್ತುವನ್ನು ಆಧರಿಸಿ ನಾಟಕ ಮಾಡಿಸಿ ಅದು ಜನಸಮುದಾಯಕ್ಕೂ ಸಂದೇಶ ನೀಡುವಂತೆ ಮಾಡುತ್ತಿರುವುದು ಈ ನಾಟಕದ ವಿಶೇಷ.
ಭೂಮಿಯ ಶೇಕಡಾ70 ಭಾಗ ನೀರಿನಿಂದಲೇ ತುಂಬಿದ್ದರೂ ಕುಡಿಯಲು ಯೋಗ್ಯವಾದ ನೀರು ತುಂಬಾ ಕಡಿಮೆ. ನೀರನ್ನು ಕಾರ್ಖಾನೆಗಳಲ್ಲಿ ತಯಾರಿಸಲು ಸಾಧ್ಯವಿಲ್ಲ. ಮಳೆಯ ನೀರನ್ನು ಸರಿಯಾಗಿ ಉಪಯೋಗಿಸದೇ ಹೋದರೆ ಗಂಡಾಂತರ ತಪ್ಪಿದ್ದಲ್ಲ. ಓಡುವ ನೀರನ್ನು ಹರಿಯುವಂತೆ, ಹರಿಯುವ ನೀರನ್ನು ನಿಲ್ಲುವಂತೆ, ನಿಂತ ನೀರನ್ನು ಇಂಗುವಂತೆ ಮಾಡಿದಾಗ ಮಾತ್ರ ನೀರಿನ ಸಮಸ್ಯೆ ನೀಗಿಸಬಹುದು ಎನ್ನುವುದೇ ಈ ನಾಟಕದ ಸಂದೇಶ.
‘ನೀರ್ ಬಾರ್’ ಹೆಸರೇ ಹೇಳುವಂತೆ ಕಾಫಿಬಾರ್, ಆಯಿಸ್ ಕ್ರೀಂ ಬಾರ್, ಚಾಕೋಬಾರ್ ನಂತರ ಹೊಸ ಪರಿಕಲ್ಪನೆಯೊಂದನ್ನು ಹುಟ್ಟುಹಾಕಿದೆ. ಈಗಾಗಲೇ ನಾಣ್ಯ ಹಾಕಿ ನೀರು ಪಡೆಯುವ ಯಂತ್ರಗಳು, ನಂತರ ದುಡ್ಡು ಕೊಟ್ಟು ಬಾಟಲಿ ನೀರನ್ನು ನೋಡಿದ ನಮಗೆ ‘ನೀರ್ ಬಾರ್’ ಆಶ್ಚರ್ಯವೇನಲ್ಲ ಎಂಬುದನ್ನು ಪಾತ್ರಗಳ ಮೂಲಕ ಹಾಸ್ಯಮಯವಾಗಿ ಗಂಭೀರ ವಿಚಾರವನ್ನು ಪ್ರಸ್ತಾಪಿಸುವ ನಿರ್ದೇಶಕರ ಜಾಣ್ಮೆ ಮೆಚ್ಚತಕ್ಕದ್ದು.
ಈ ನಾಟಕದ ಕಲ್ಯಾ ಮಲ್ಯಾ ಪಾತ್ರಗಳು ಹಾಸ್ಯದ ಎಳೆಯ ಮೂಲಕ ನೀರಿನ ಸಮಸ್ಯೆಯನ್ನು ಪ್ರೇಕ್ಷರೆಡಗೆ ಎಳೆದೊಯ್ಯುತ್ತದೆ. ಚಿಂಕಿ ಪಿಂಕಿ ಎಂಬ ಶಾಲಾ ಮಕ್ಕಳ ಪಾತ್ರಗಳು ಹಿರಿಯರಿಗೆ ನೀರುಳಿಸುವ ಪಾಠ ಮಾಡುವ ರೀತಿಯಲ್ಲಿ ತೆರೆದುಕೊಳ್ಳುತ್ತವೆ. ನೀರನ್ನು ಕಾಯುವ ಪೋಲಿಸ್ ಪಾತ್ರದಲ್ಲಿ ಸತ್ಯದ ದರ್ಶನವಾಗುತ್ತದೆ. ರಂಗನಾಯಕಿ ನೀರಿನ ಕ್ಯಾಪ್ಸೂಲ್‍ಗಳ ಬಗ್ಗೆ ಪ್ರಸ್ತಾಪಿಸಿ ಮುಂಬರುವ ದಿನಗಳಲ್ಲಿ ಆತಂಕವನ್ನು ತೆರೆದಿಡುತ್ತಾಳೆ. ನಾಟಕದಲ್ಲಿ ಒಟ್ಟು 5 ರಂಗಗೀತೆಗಳಿದ್ದು ಈ ಅರ್ಥಪೂರ್ಣ ಗೀತೆಗಳನ್ನು ಸ್ವತಃ ರಾಮಾಪೂರವರೇ ಬರೆದಿದ್ದಾರೆ. “ನೀರು ನೀರು ನೀರು, ನೀರಿಲ್ಲದ ಜೀವನ ಬೋರು” ಎಂಬ ಗೀತೆ ನಾಟಕದ ನಂತರವೂ ಸದಾ ಗುನುಗುಡುವಂತೆ ಮಾಡುತ್ತದೆ. “ಹಿಂದಿನವರು ನದಿ, ಹೊಳೆಗಳಲ್ಲಿ ನೀರು ನೋಡಿದರು. ನಮ್ಮ ಅಪ್ಪ ಅಮ್ಮ ಕೆರೆ ಬಾವಿಗಳ ನೀರು ನೋಡಿದರು, ನಾವು ನಲ್ಲಿಯಲ್ಲಿ ನೀರು ಕಂಡೆವು, ನಮ್ಮ ಮಕ್ಕಳು ಬಾಟಲಿ ನೀರು ಕುಡಿದರು, ಇನ್ನು ಮೊಮ್ಮಕ್ಕಳು ಕ್ಯಾಪ್ಸೂಲ್‍ಗಳಲ್ಲಿ ನೀರು ಸೇವಿಸಬಹುದು” ಎಂಬ ಮಾತು ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುತ್ತದೆ.
ಇತ್ತೀಚೆಗೆ ಧಾರವಾಡದ ಡೆಪ್ಯೂಟಿ ಚೆನ್ನಬಸಪ್ಪ ಪ್ರತಿಷ್ಠಾನ, ಹಾಗೂ ರಂಗಾಯಣ ಸಹಯೋಗದೊಂದಿಗೆ ನಡೆದ ಪಠ್ಯಾಧಾರಿತ ನಾಟಕೋತ್ಸವದಲ್ಲಿ ಈ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯನ್ನೂ ಬಾಚಿಕೊಂಡಿದೆ.
ಒಟ್ಟಿನಲ್ಲಿ ‘ನೀರ್ ಬಾರ್’ ನಾಟಕ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಮಕ್ಕಳ ಅಭಿನಯ ಅದ್ಭುತ, ವೇಷಭೂಷಣವೂ ಅತ್ಯದ್ಭುತ. ಕಲೆಯ ಮೂಲಕ ವಿಜ್ಞಾನವನ್ನು ತಿಳಿಹೇಳುವ ಡಾ.ಲಿಂಗರಾಜ ರಾಮಾಪೂರ ಅವರ ಪ್ರಯತ್ನ ಶ್ಲಾಘನೀಯ. ಕಲೆಯು ವಿಜ್ಞಾನ ಸಂವಹನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುವುದನ್ನು ಅವರು ಯಶಸ್ವಿಯಾಗಿ ನಿರೂಪಿಸಿದ್ದಾರೆ.
(ಕೃಪೆ: ಕರ್ನಾಟಕ ಸರಕಾರ ಶಿಕ್ಷಣ ಇಲಾಖೆಯ ‘ಶಿಕ್ಷಣ ವಾರ್ತೆ’ ಮಾರ್ಚ 2019)
©2024 Book Brahma Private Limited.