‘ನಾಕು ಏಕಾಂಕ ನಾಟಕಗಳು’ ಲೇಖಕ ಡಾ. ಬಸವರಾಜ ಸಬರದ ಅವರ ನಾಲ್ಕು ಏಕಾಂಕ ನಾಟಕಗಳ ಸಂಕಲನ. ಈ ಸಂಕಲನಕ್ಕೆ ರಾಹು ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಕಳೆದ ಶತಮಾನದ 70ರ ದಶಕದಲ್ಲಿ ರೇಡಿಯೋ, ಪತ್ರಿಕೆ, ಪಠ್ಯಪುಸ್ತಕಗಳು, ಪುರಾಣ ಪ್ರವಚನಗಳಂಥ ಧಾರ್ಮಿಕ ಮಾಧ್ಯಮಗಳು ಅಷ್ಟೇ ಯಾಕೆ ವೃತ್ತಿ ರಂಗಭೂಮಿ ಕೂಡಾ ತನಗೆ ಅರಿವಿಲ್ಲದೆ ಆಳುವ ವರ್ಗಗಳ ತುತ್ತೂರಿಯಾಗಿ ಪರಿಣಾಮಿಸಿದಾಗ ಗೋಡೆ ಬರಹಗಳೇ ಶೋಷಿತ ವರ್ಗಗಳ ಮಾಧ್ಯಮಗಳಾದವು. ಕ್ರಮೇಣ ಖರ್ಚಿನ ಯಾವ ಹಂಗು ಇಲ್ಲದ ಬೀದಿ ನಾಟಕಗಳು ಹಾಗೂ ಹಾಡುಗಳು ನೊಂದವರ ಬೆಂದವರ ಬದುಕಿಗೆ ಕನ್ನಡಿ ಹಿಡಿಯುತ್ತಾ ದಮನಿತರ ಕೊರಳ ಧ್ವನಿಯಾದವು. ಹೀಗೆ ಕೊರಳ ಧ್ವನಿಯಾದ ಹಾಡು ಮತ್ತು ಬೀದಿನಾಟಕಗಳ ಮಾಧ್ಯಮವನ್ನು ಅತ್ಯಂತ ಸಮರ್ಥತವಾಗಿ ಬಳಸಿ ಹತ್ತಾರು ಯಶಸ್ವಿ ಬೀದಿನಾಟಕಗಳನ್ನು ರಚಿಸಿದ ನಾಡಿನ ಕೆಲವೇ ಕೆಲವು ಗಣ್ಯರಲ್ಲಿ ಡಾ. ಬಸವರಾಜ ಸಬರದ ಒಬ್ಬರು. ಡಾ. ಸಬರದ ಅವರು ಮೂಲತಃ ಕವಿಯಾಗಿರುವುದರಿಂದ ಅವರ ನಾಟಕದಲ್ಲಿಯ ಭಾಷೆ ಕೂಡಾ ಕಾವ್ಯಮಯವಾಗಿರುವುದನ್ನು ಧ್ವನಿಪೂರ್ಣವಾಗಿರುವುದನ್ನು ನೋಡಬಹುದು ಎನ್ನುತ್ತಾರೆ ರಾಹು. ಇಲ್ಲಿ ಸಂಕಲನಗೊಂಡಿರುವವ ನಾಲ್ಕು ನಾಟಕಗಳು ಏಕಾಂಕ ನಾಟಕಗಳೇ ವಸ್ತುವಿನ ದೃಷ್ಟಿಯಿಂದ ವೈವಿಧ್ಯಮಯವಾಗಿದ್ದರು ಜನಪರ ಧೋರಣೆ ಎಲ್ಲಾ ನಾಟಕಗಳ ಜೀವಾಳವಾಗಿದೆ. ಕೆರೆಗೆಹಾರ ಜನಪದ ಕಥನ ಕಾವ್ಯವನ್ನು ಆಧರಿಸಿರುವ ನಾಟಕವಾಗಿದ್ದರೂ ಡಾ. ಸಬರದ ಅವರು ಅದಕ್ಕೆ ಕೊಟ್ಟಿರುವ ಜೀವಪರ ತಿರುವು ಅವರ ತಾತ್ವಿಕದೃಷ್ಟಿ ಮತ್ತು ಬಂಡಾಯದ ಸ್ವಭಾವವನ್ನು ಬಿಂಬಿಸುತ್ತದೆ. ಈ ನಾಲ್ಕು ನಾಟಕಗಳು ವಿದ್ಯಾರ್ಥಿಗಳ ಬದುಕಿನ ದೃಷ್ಟಿಕೋನವನ್ನೇ ಬದಲಾಯಿಸುವ ಸಾಮರ್ಥ್ಯ ಗರ್ಭೀಕರಿಸಿಕೊಂಡಿವೆ. ಇವು ಏಕಾಂಕ ನಾಟಕದ ಪ್ರಕಾರಕ್ಕೆ ವಿಶಿಷ್ಟ ಕೊಡುಗೆ ಎಂಬುವುದು ನಿರ್ವಿವಾದ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.