‘ಮೂರು ಬೀದಿನಾಟಕಗಳು’ ಮೂಡ್ನಾಕೂಡು ಚಿನ್ನಸ್ವಾಮಿ ಅವರ ನಾಟಕ ಸಂಕಲನ. ಈ ಕೃತಿಗೆ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಬೆನ್ನುಡಿಯ ಬರಹವಿದೆ. ಕೆಂಡಮಂಡಲ(1990)ದ ಮೂಲಕ ಈಗಾಗಲೇ ನಾಟಕ ಕ್ಷೇತ್ರವನ್ನು ಪ್ರವೇಶಿಸಿರುವ ಮೂಡ್ನಾಕೂಡು ಚಿನ್ನಸ್ವಾಮಿಯವರು ಈಗಿನ ಅಂಗಭಂಗದಲ್ಲಿ ಪ್ರೇತಗಳನ್ನು ರಂಗದ ಮೇಲೆ ತಂದು, ಅಂಗಾಂಗ ವ್ಯಾಪಾರದಲ್ಲಿ ನಿರತನಾಗಿರುವ ಸ್ವಾರ್ಥಿ ಮನುಷ್ಯನ ದುಷ್ಟ ಪ್ರವೃತ್ತಿಯನ್ನು ಅವುಗಳ ಮೂಲಕ ಬಯಲಿಗೆಳೆಯುತ್ತಾರೆ. ಪ್ರತಿಯೊಂದು ಕಾರ್ಯದ ಹಿಂದಿರುವ ಸದುದ್ದೇಶ ಮತ್ತು ಸದ್ಭಾವನೆಗಳನ್ನು ಅರಿತು ಸದಾಚರಣೆಮಾಡುವ ಪ್ರೇರಣೆಯನ್ನು ಸಮರ್ಥಿಸುತ್ತಾರೆ. ‘ಅಪಘಾತ’ದಲ್ಲಿ ಸಾರಿಗೆ ಇಲಾಖೆಯ ಸಿಬ್ಬಂದಿಗಳ ಅನುಭವಗಳನ್ನು ಕ್ರೋಢೀಕರಿಸಿ ಹಾಸ್ಯ, ವ್ಯಂಗ್ಯಗಳ ಧಾಟಿಯಲ್ಲಿ ಬೇಜವಾಬ್ದಾರಿ ವ್ಯಕ್ತಿಗಳ ನಿಷ್ಕರುಣ ನಡೆಯನ್ನು ಸರಕಾರಿ ನಿಯಮಗಳ ಕುರುಡು ವ್ಯವಹಾರವನ್ನು ಕಾನೂನುಗಳ ಅಮಾನವೀಯ ಅರ್ಥಾನ್ವೇಷಣೆಯನ್ನು ಪರೋಕ್ಷವಾಗಿ ತೆಗಳುತ್ತಾ, ಸಹಜ ಸಜ್ಜನಿಕೆಯಿಂದ ಬದುಕನ್ನು ಕಟ್ಟುವ ಬಗ್ಗೆ ಹೇಳುತ್ತಾರೆ. ಬಹಿಷ್ಕಾರ ಶೋಷಣೆಯ ಇನ್ನೊಂದು ಮುಖವನ್ನು ಬಯಲಿಗೆಳೆಯುತ್ತಾ ಅಂತಃಕರಣವನ್ನು ತಟ್ಟುತ್ತದೆ. ನಾಟಕಕ್ಕೆ ಪ್ರಾಣ ಸದೃಶ್ಯವಾದ ಸಂಭಾಷಣೆಗಳಲ್ಲಿ ಕಥೆ ಕಟ್ಟುವ ಚಿನ್ನಸ್ವಾಮಿಯವರು ತಮ್ಮ ಅನುಭವಗಳನ್ನು ಇನ್ನಷ್ಟು ನಾಟ್ಯಾಯಮಾನಗೊಳಿಸುವಂತಾಗಲಿ ಎಂದು ಸಿದ್ಧಲಿಂಗ ಪಟ್ಟಣಶೆಟ್ಟಿ ಆಶಿಸಿದ್ದಾರೆ.
©2024 Book Brahma Private Limited.