ಮೂಡ್ನಾಕೂಡು ಚಿನ್ನಸ್ವಾಮಿ ಅವರ ಈ ನಾಟಕ ಸಂಕಲನದಲ್ಲಿ ಕೆಂಡ ಮಂಡಲ, ಬಹುರೂಪಿ, ಹಾಗೂ ಬೀದಿನಾಟಕಗಳಾದ ಬಹಿಷ್ಕಾರ, ಅಂಗಭಂಗ ಹಾಗೂ ಅಪಘಾತ ಸಂಕಲನಗೊಂಡಿವೆ. ಈ ಕೃತಿಗೆ ಕೆ. ಮರುಳಸಿದ್ದಪ್ಪ ಅವರ ಬೆನ್ನುಡಿಯ ಬರಹವಿದೆ. ಕೆಂಡಮಂಡಲವನ್ನು ಓದಿದಾಗ ನಾನು ವಿಶೇಷವಾಗಿ ಆಕರ್ಷಿನಾದುದು ವಸ್ತುವಿನ ಹೊಚ್ಚ ಹೊಸತನದಿಂದ. ಸಮಕಾಲೀನ ಭಾರತದ ಜ್ವಲಂತ ಸಮಸ್ಯೆಯಾದ ಜಾತಿ ಮತ್ತು ವರ್ಗ ತಾರತಮ್ಯವನ್ನು ಈ ನಾಟಕದ ಮೂಲಕ ವಿಶ್ಲೇಷಿಸುವ ಚಿನ್ನಸ್ವಾಮಿಯವರ ಗ್ರಹಿಕೆಗಳು ಅನನ್ಯವಾಗಿದೆ. ನಾಟಕದಲ್ಲಿ ಭಾವ ತೀವ್ರತೆಗಿಂತ ಎಚ್ಚರದ ವಿಮರ್ಶೆ ವಿಶ್ಲೇಷಣೆಗಳ ವಾಗ್ವಾದವನ್ನು ಆಶ್ರಯಿಸಿರುವುದರಿಂದ ಕ್ರಿಯೆ ಮಂದಗತಿಯಲ್ಲಿದೆಯಾದರೂ, ಕಥೆ ಕುತೂಹಲಕಾರಿಯಾಗಿ ಹಂತ ಹಂತವಾಗಿ ಹರಡಿಕೊಳ್ಳುತ್ತದೆ. ಎಲ್ಲ ಜಾತಿಯ ಬಡವರೂ ಸಮಾನರೆಂಬ ಸರಳವಾದ ಸಿದ್ಧಾಂತವನ್ನು ಪ್ರತಿಪಾದಿಸುತ್ತಿರುವವರ ಎದುರಿನಲ್ಲಿ ಈ ನಾಟಕವು ತೆರೆದು ತೋರಿಸುತ್ತಿರುವ ಕಟು ಸತ್ಯ ಕ್ರೂರವಾಗಿದೆಯಾದರೂ ನಿಜಸ್ಥಿತಿಗೆ ಸಮೀಪವಾಗಿದೆ ಎನ್ನುತ್ತಾರೆ ಮರುಳಸಿದ್ದಪ್ಪ.
©2024 Book Brahma Private Limited.