ಹಂಸದಮಯಂತಿ ಮತ್ತು ಇತರ ರೂಪಕಗಳು

Author : ಪು.ತಿ.ನ. (ಪು.ತಿ. ನರಸಿಂಹಾಚಾರ್ )

Pages 350

₹ 10.00




Year of Publication: 1965
Published by: ಶಾರದಾಮಂದಿರ
Address: ರಾಮಯ್ಯರ್‌ ರಸ್ತೆ, ಮೈಸೂರು 570004

Synopsys

’ಹಂಸದಮಯಂತಿ ಮತ್ತು ಇತರ ರೂಪಕಗಳು’ ಪು.ತಿ.ನ. ಅವರ ಕೃತಿ. ಅವರ ಬಹುತೇಕ ನಾಟಕಗಳು ಪದ್ಯ ನಾಟಕಗಳೇ ಆಗಿದ್ದು, ಅವುಗಳನ್ನು ಗೀತ ರೂಪಕಗಳು ಎಂದೂ ಕರೆಯಬಹುದು. ಹಂಸ ದಮಯಂತಿ, ಹರಿಣಾಭಿಸರಣ, ವಸಂತ ಚಂದನ, ವರ್ಷಹರ್ಷ, ಶರದ್ವಿಲಾಸ, ದೀಪಲಕ್ಷ್ಮಿ, ರಾಮೋದಯ ಮತ್ತು ಸೀತಾಪರಿಣಯಂ-ಎಂಬ ಗೀತ ರೂಪಕಗಳಿವೆ. ಇವೆಲ್ಲವೂ ಸಂಗೀತ ಪ್ರಧಾನವಾದ ನಾಟಕಗಳು.   

About the Author

ಪು.ತಿ.ನ. (ಪು.ತಿ. ನರಸಿಂಹಾಚಾರ್ )
(17 March 1905 - 13 October 1998)

ಪುತಿನ ಎಂದು ಚಿರಪರಿಚಿತರಾಗಿದ್ದ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಕನ್ನಡ ನವೋದಯ ಕವಿಗಳಲ್ಲಿ ಪ್ರಮುಖರು. ಮೇಲುಕೋಟೆಯಲ್ಲಿ 1905ರ ಮಾರ್ಚ್ 17ರಂದು ಜನಿಸಿದರು. ತಂದೆ ತಿರುನಾರಾಯಣ ಅಯ್ಯಂಗಾರ್, ತಾಯಿ ಶಾಂತಮ್ಮ.  ಬಾಲ್ಯದ ವಿದ್ಯಾಭ್ಯಾಸವನ್ನು ಮೇಲುಕೋಟೆ ಮತ್ತು ಮೈಸೂರಿನಲ್ಲಿ ಮುಗಿಸಿದ ನಂತರ ಬಿ.ಎ. ಪದವಿಯನ್ನು ಗಳಿಸಿದ ಮೇಲೆ ಗೋರಕ್ಷಕ ಸಮಿತಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದರು. ಅನಂತರ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ಅದೇ ಕಚೇರಿಯಲ್ಲಿ 1938ರಲ್ಲಿ ವ್ಯವಸ್ಥಾಪಕರಾಗಿಯೂ 1945ರಲ್ಲಿ ಅಧೀಕ್ಷಕರಾಗಿಯೂ ಕೆಲಸ ಮಾಡಿದ್ದ ಅವರು ಅನಂತರ 1952ರಲ್ಲಿ ಶಾಸನ ಸಭಾ ಕಚೇರಿಯ ಸಂಪಾದಕರೂ ಆಗಿದ್ದರು. ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಭಾಷಾಂತರಕಾರ ...

READ MORE

Awards & Recognitions

Reviews

ಹಂಸದಮಯಂತಿ ಮತ್ತು ಇತರ ರೂಪಕಗಳು 

ಶ್ರೀ ಪು. ತಿ. ನರಸಿಂಹಾಚಾರ್‍ಯರು ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರಾಗಿರುವಂತೆಯೇ ನಾಟಕಕಾರರಾಗಿಯೂ ಪ್ರಸಿದ್ಧರಾಗಿದ್ದಾರೆ. ಅವರ ನಾಟಕಗಳೆಲ್ಲ ಪದ್ಯನಾಟಕಗಳು, ಮುಖ್ಯವಾಗಿ ಗೀತರೂಪಕಗಳು. ಹಂಸ ದಮಯಂತಿ, ಹರಿಣಾಭಿಸರಣ, ವಸಂತ ಚಂದನ, ವರ್ಷಹರ್ಷ, ಶರದ್ವಿಲಾಸ, ದೀಪಲಕ್ಷ್ಮಿ, ರಾಮೋದಯ ಮತ್ತು ಸೀತಾಪರಿಣಯಂ-ಎಂಬ ಗೀತ ರೂಪಕಗಳನ್ನು "ಹಂಸದಮಯಂತಿ ಮತ್ತು ಇತರ ರೂಪಕಗಳು” ಎಂಬ ಹೆಸರಿನಿಂದ ಪ್ರಕಟಿಸಿದ್ದಾರೆ (1965). ಸಾಮಾನ್ಯವಾಗಿಯೇ ಪು. ತಿ. ನ. ಅವರ ನಾಟಕಗಳಲ್ಲಿ ಸಾಹಿತ್ಯ ಮತ್ತು ಸಂಗೀತಗಳ ಸಾಮರಸ್ಯವಿರುತ್ತದಾದರೂ ಪ್ರಸ್ತುತ ರೂಪಕಗಳಲ್ಲಿ ಸಂಗೀತವೇ ಪ್ರಧಾನವಾಗಿದೆ. “ಒಂದು ಹಾಡನ್ನು ಮಾಡುವ ಮೊದಲು ಸಂಗೀತದ ಮಟ್ಟನ್ನು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ಅನಂತರ ಅದಕ್ಕೆ ಹೊಂದುವ ಸಾಹಿತ್ಯವನ್ನು ಕಲ್ಪಿಸುತ್ತೇನೆ'' ಎಂಬ ಪು.ತಿ.ನ ಅವರ ಮಾತನ್ನೇ ಗಮನಿಸಬಹುದು. ಹಾಡುಗಳಿಗೆ ಸ್ವರ ಪ್ರಸ್ತಾರ ಹಾಕಿ ಪ್ರಕಟಿಸಿರುವುದೂ ಇದನ್ನು ಪೋಷಿಸುತ್ತದೆ. ಹೀಗಾಗಿ ಇವನ್ನು ಸಂಗೀತರೂಪಕಗಳೆನ್ನುವುದು ವಿಹಿತ. ಬಾನುಲಿಯಲ್ಲಿ ಧ್ವನಿರೂಪಕಗಳಾಗಿ, ರಂಗಭೂಮಿಯಲ್ಲಿ ಹಾಡು ನೃತ್ಯಗಳೊಡನೆ ಅಳವಡಿಸಿದಾಗ ತುಂಬ ಸ್ವಾದವಾಗುವ ಗುಣಗಳನ್ನು ಇವು ಹೊಂದಿವೆ. 

ಇಲ್ಲಿನ ಎಂಟು ರೂಪಕಗಳಲ್ಲಿ 'ಹಂಸದಮಯಂತಿ' ಮಹಾಭಾರತದ ವಸ್ತುವನ್ನುಳ್ಳ, ಹಂಸವು ನಿರ್ವಹಿಸಿದ ಪ್ರಣಯದೌತ್ಯ ಇಲ್ಲಿನ ಕೇಂದ್ರ.

ರಾಮಾಯಣವು ಮರುರೂಪಕಗಳಿಗೆ ವಸ್ತುವನ್ನು ನೀಡಿದೆ: ರಾಮಾತಾರದ ಪುರಾಣೋಕ್ತ ಕಥೆ 'ರಾಮೋದಯ'ದಲ್ಲಿ ನಿರೂಪಿತವಾಗಿದೆ; ಹರ ಧನುರ್ಭಂಗ ಸೀತಾ ಕಲ್ಯಾಣಗಳು 'ಸೀತಾಪರಿಣಯ'ದಲ್ಲಿವೆ. ಈ ಎರಡರಲ್ಲೂ ಕಥೆಗಿಂತ ಸಂಗೀತವೇ ಮೇಲುಗೈ ಆಗಿರುವುದನ್ನು ನೋಡಬಹುದು. ಕಥಕನ ಪಾತ್ರ ಈ ರೂಪಕಗಳ ವಿಶೇಷ. ಕಥೆಯ ಹಂತಗಳನ್ನು ಬೆಸೆಯುವ ಕೊಂಡಿಯಂತೆ ಇವನು ವರ್ತಿಸುವುದು ಬಯಲಾಟದ ಪ್ರಭಾವವಿರಬಹುದು,

ರಾಮಾಯಣದ ವಸ್ತುವನ್ನು ಆಧರಿಸಿದ ನಾಟಕಳಗಲ್ಲಿ 'ಹರಿಣಾಭಸರಣ'ವೇ ಅತ್ಯುತ್ತಮವಾದುದು. ಅಷ್ಟೇ ಅಲ್ಲ, ಈ ಸಂಕಲನದಲ್ಲಿಯೆ ಇದು ಶ್ರೇಷ್ಠ ಗೀತರೂಪಕ. ಕಥೆ ಅದೇ ಆದರೂ, ಸನ್ನಿವೇಶ ಚಿತ್ರಣ, ಪಾತ್ರಗಳ ಒಳನೋಟ ಮತ್ತು ಅಭಿವ್ಯಕ್ತಿ ಕುಶಲತೆಗಳಲ್ಲಿ ಹೆಚ್ಚಿನದನ್ನು ಸಾಧಿಸಿದೆ.

"ಪಂಚವಟಿಯೊಳಾ ದಿವ್ಯರ ದುಃಖವ ನೆನೆದು, ಅಲ್ಪಗಳೆಮ್ಮೀ ಚಿಂತೆಗಳಳಿಯಲಿ ನವೆದು” ಎಂಬ ಆರಂಭದ ಮಾತಿನಲ್ಲಿಯೇ ಕೃತಿಯ ಪರಿಣಾಮವನ್ನೂ ಉದ್ದೇಶವನ್ನೂ ಕಾಣಬಹುದು. ಮೊದಲಿಗೆ ಸೀತೆಯ ವರ್ಣನೆ, ಆಮೇಲೆ ಹರಿಣಕ್ಕೆ 'ಆಕರ್ಷಿತಳಾಗುವ ಚಿತ್ರವಿದೆ. ಕ್ರಮೇಣ ನಾಟಕ ಸಂಕೀರ್ಣಗೊಳ್ಳುತ್ತಾ ಹೋಗುತ್ತದೆ, ಜಿಂಕೆ ಕೇಂದ್ರವಾಗುತ್ತದೆ. ಸೀತೆಯ ಬಯಕೆಯನ್ನು ನೆರವೇರಿಸುವುದರ ಆತುರದಲ್ಲಿ ರಾಮನಿದ್ದರೆ, ಲಕ್ಷ್ಮಣನ ಅಭಿಪ್ರಾಯವೇ ಬೇರೆ. ಲಕ್ಷ್ಮಣನದು ಸನ್ನಿವೇಶ ನಿರ್ಮಾಣದ ಪಾತ್ರವಲ್ಲ, ಅದನ್ನು ಎದುರಿಸಿ ನಿಂತದ್ದು, ಜಿಂಕೆಯನ್ನು ಕುರಿತು ಲಕ್ಷ್ಮಣ ಆಡುವ 'ಮನುಜರ ಭೀತಿಯ ತೋರದ ರೀತಿಯ ಸಾಕಿದ ಮಿಗದಂತಿಹುದು" ಎಂಬ ವರಾತಿನಲ್ಲಿ ಪ್ರಾಣಿ ವರ್ತನೆಯ ಪರಿಶೀಲನೆಯಿದೆ; "ಹೊಂಡದ ಮೇಗಣ. ಸೋಂಕಿನ ತೆನೆ'' ಎನ್ನುವಲ್ಲಿ ಸೊಗಸಾದ ಕಾವ್ಯಾತ್ಮಕ ಪ್ರತಿಕ್ರಿಯೆ ಇದೆ. ಅಪಾಯದ ಸೂಚನೆಗಳನ್ನು ಇವು ಅರುಹುತ್ತವೆ. ಇಂಥ ಕಡೆಗಳಲ್ಲಿ ಪು.ತಿ.ನ. ಅವರ ಸೃಜನಶೀಲತೆ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಸೀತಾ ಲಕ್ಷ್ಮಣರ ಸಂಭಾಷಣೆಯ ಭಾಗ ಈ ನಾಟಕದ ಒಂದು ಶಿಖರ. ಇದರಲ್ಲಿ ಸೀತೆಯ ಅತಿರೇಕವನ್ನೂ ಲಕ್ಷ್ಮಣನ ಸಂಯಮವನ್ನೂ ಪರಿಸ್ಥಿತಿಯ ಗಾಢ ಚಿಂತನೆ ಮತ್ತು ಲೋಕಾನುಭವದ ತೀವ್ರ ಪರಿಶೀಲನೆಗಳಿಂದ ರೂಪಿಸಲಾಗಿದೆ. ಸೀತೆ ತಾನು ಜಿಂಕೆಗೆ ಬಯಕೆಗೊಂಡುದರ ಬಗ್ಗೆ ಕೇಳಿದಾಗ, “ಅದು ಮಾಯೆಯಲ್ಲದೊಡೆ ಬಯಕೆಗೊಳೆ ತಕ್ಕುದು” ಎಂದು ಲಕ್ಷ್ಮಣ ಹೇಳುವಲ್ಲಿ ಸೀತೆಯ ಶಂಕೆ ಮತ್ತು ಲಕ್ಷ್ಮಣನ ವಸ್ತು ಪರಿಜ್ಞಾನ ವ್ಯಕ್ತವಾಗುವುದು. ಪ್ರತಿ ವಾಕ್ಯವನ್ನೂ ರಸಾತ್ಮಕವಾಗಿ ಮಾಡುವ ಕಲೆ ಲೇಖಕರಿಗೆ ಇಲ್ಲಿ ವಶವಾಗಿದೆ. ಒಂದು ಉತ್ತಮ ಕಲಾಕೃತಿ ನಮ್ಮ ಅನುಭವವನ್ನು ವಿಸ್ತರಿಸುವಂಥದಾಗಿರಬೇಕು, ಆಲೋಚನೆಯನ್ನು ಆಳಗೊಳಿಸುವಂಥದಾಗಿರಬೇಕು. 'ಹರಿಣಾಭಿಸರಣ'ದಿಂದ ಇದು ಸಾಧ್ಯವಾಗಿರುವುದು ನೆಮ್ಮದಿಯ ವಿಷಯ. ಇದರಲ್ಲಿ ಸಂಗೀತ ಮುಂದಾಗಲು ಬಿಡದೆ ಸಾಹಿತ್ಯ ಸಮಾನವಾಗಿ ಆಕ್ರಮಿಸಿಕೊಂಡಿರುವುದು ಕೃತಿಯ ಶ್ರೇಷ್ಟತೆಗೆ ಕಾರಣವಾಗಿದೆ.

ಇನ್ನುಳಿದ ನಾಟಕಗಳಾದ 'ವಸಂತಚಂದನ', `ವರ್ಷ-ಹರ್ಷ' 'ಶರದ್ವಿಲಾಸ' ಮತ್ತು 'ದೀಪಲಕ್ಷ್ಮೀ'ಗಳು ನಾಟಕಕಾರರ ಸ್ವತಂತ್ರ ನಿರ್ಮಿತಿಗಳು. ಪೃಕೃತಿಯ ಪರಿಭಾವನೆಗಳಿಂದ ಮೂಡಿದವುಗಳು. ಮೊದಲ ಮೂರು ರೂಪಕಗಳು ಕ್ರಮವಾಗಿ ವಸಂತ, ವರ್ಷ ಮತ್ತು ಶರದೃತುವಿನ ವೈಶಿಷ್ಟ್ಯ, ವೈಭವ ಮತ್ತು ಆನಂದಾನುಭವಗಳನ್ನು ಚಿತ್ರಿಸುತ್ತವೆ. ನಾಟಕಗಳಲ್ಲಿಯೇ ಬಳಕೆಯಾಗಿರುವ ಚಂದನ, ಹರ್ಷ, ವಿಲಾಸ- ಈ ಮಾತುಗಳೇ ಇದನ್ನು ಸೂಚಿಸುತ್ತವೆ. ಕಡೆಯದಾದ 'ದೀಪಲಕ್ಷಿ' ದೀಪಾವಳಿಯ ಸೊಬಗನ್ನು ಕುರಿತದ್ದಾದರೂ, ಪುರಾಣಕಥೆಯ ಸ್ಪರ್ಶವಿದೆ. ನಾಟಕಗಳೆಲ್ಲ ನಡೆಯುವುದು ನಾಗರಿಕರ ಊರು, ಬೀದಿ, ಉದ್ಯಾನವನ, ತೋಪು, ಮಲೆ, ಬಾನು, ಕಣಿವೆ, ಕಾಡುಗಳಲ್ಲಿ; ಪಾತ್ರಗಳೂ ತರುಣ ತರುಣಿಯರು, ಗಂಧರ್ವಾಪ್ಸರೆಯರು, ಸಿದ್ಧ ಚಾರಣರು, ಕಿನ್ನರ ಕಿನ್ನರಿಯರು. ಪ್ರಕೃತಿಯೂ ಒಂದು ಪಾತ್ರವಾಗಿ ಕೆಲಸ ಮಾಡಿದೆ. ಒಂದು ರೀತಿಯಲ್ಲಿ ಕಲ್ಪನೆ ಮತ್ತು ವಾಸ್ತವಗಳ ವಿಲನವಿದು. ಭಾವುಕ ಮನಸ್ಸಿನ ಕಲ್ಪನಾಲಹರಿಗಳು ರೂಪಕಗಳ ಉದ್ದಕ್ಕೂ ಮಿಂಚಿವೆ. ’ಭಾವುಕ' ಮತ್ತು 'ಸಹಚರಿ' ಪಾತ್ರಗಳ ಸೃಷ್ಟಿ ಇದರ ಪರಿಣಾಮ, ಮೊದಲ ಮೂರು ರೂಪಕಗಳು ಏಕತಾನತೆಯಿಂದ ಬಿಡುಗಡೆ ಪಡೆದಿಲ್ಲ, 'ದೀಪಲಕ್ಷ್ಮೀ'ಯೊಂದೇ ಉತ್ತಮ ಅಭಿವ್ಯಕ್ತಿ. ದೀಪಾವಳಿಯನ್ನು ವರ್ಣಿಸುತ್ತಲೇ ಅದಕ್ಕೆ ಕಾರಣವಾದ ಕಥೆಯ ಕಡಗೆ ನಾಟಕಕಾರರು ನಡೆಯುತ್ತಾರೆ. ಪುರಾಣ ಕತೆಯೊಂದನ್ನು ಆಧುನಿಕ ಸಂದರ್ಭದಲ್ಲಿ ದುಡಿಸಿಕೊಳ್ಳುವ ಪ್ರಯತ್ನವೇ ’ದೀಪಲಕ್ಷ್ಮಿ': ಇದೊಂದು ಸಾಂಕೇತಿಕ ರಚನೆ, ಹೀಗಾಗಿ ಈ ನಾಲ್ಕು ನಾಟಕಗಳು ವರ್ಣನೆ ಮತ್ತು ಕಲ್ಪನೆಗಳ ಆನಂದಾನುಭವದ ಅಭಿವ್ಯಕ್ತಿಗಳಾಗಿವೆ.

ಪ್ರಸ್ತುತ ಕೃತಿಯಲ್ಲಿನ ರಚನೆಗಳೆಲ್ಲ ಪ್ರೌಢವಾದವು. ಸಂಸ್ಕೃತ ಪ್ರಚುರವಾದ ಭಾಷೆ ಮತ್ತು ಬಿಗಿಯಾದ ಬಂಧನಗಳಿಂದ ಕೂಡಿದವು. 'ಅಹಲ್ಯೆ, 'ಗೋಕುಲ ನಿರ್ಗಮನ'ದಂತಹ ನಾಟಕಗಳ ಜೊತೆಗೆ ಹೋಲಿಸಿದಾಗ ಇದು ಒಡೆದು ತೋರುತ್ತದೆ. ಇವುಗಳಲ್ಲಿ ಸಂಗೀತ ಅವಿಭಾಜ್ಯ ಅಂಗವಾಗಿರುವುದರಿಂದ ಆ ಕುರಿತ ಸ್ವಲ್ಪ ಮಟ್ಟಿನ ಅಭಿರುಚಿಯಾದರೂ ನಮಗಿರಬೇಕಾಗುತ್ತದೆ. ಇಲ್ಲವಾದರೆ ಅವುಗಳ ಮೂಲ ಸಂವೇದನೆ ಸಂವಹನಗೊಳ್ಳುವುದು ಕಡಿಮೆ. ಹೀಗಾಗಿ ಇಲ್ಲಿಯ ರಚನೆಗಳು ಶ್ರವ್ಯ ಕಾವ್ಯವಾಗಿಯಾಗಲಿ ದೃಶ್ಯ ನಾಟಕವಾಗಿಯಾಗಲಿ ವಿಶೇಷ ರೀತಿಯ ಸಹೃದಯರನ್ನೂ ಪ್ರೇಕ್ಷಕರನ್ನೂ ಅಪೇಕ್ಷಿಸುತ್ತವೆ. ಕನ್ನಡ ಗೀತನಾಟಕದ ಕ್ಷೇತ್ರಕ್ಕೆ ಇದು ಅಮೂಲ್ಯವಾದ ಕೊಡುಗೆ ಎಂಬುವುದರಲ್ಲಿ ಸಂದೇಹವಿಲ್ಲ.

-ರಾಮೇಗೌಡ

ಹಂಸದಮಯಂತಿ ಮತ್ತು ಇತರ ರೂಪಕಗಳು (ಗೀತರೂಪಕ) 

ಮೊದಲನೆಯ ಆವೃತ್ತಿ 1965  ಶಾರದಾಮಂದಿರ ರಾಮಯ್ಯರ್‌ ರಸ್ತೆಮೈಸೂರು 570004

ಕ್ರೌನ್ ಅಷ್ಟ 350 ಪುಟಗಳು * ಬೆಲೆ ರೂ. 10-00 -12-50 

 





 

Related Books